ಮಂಡ್ಯ: ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿದ್ದು, ಅದರ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ‘ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ’ ಕಾರ್ಯಕರ್ತರು ಪ್ರತಿಭಟನಾ ಬ್ಯಾನರ್‌ಗೆ ರಕ್ತ ಚೆಲ್ಲಿ ನಗರದಲ್ಲಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ತಮ್ಮ ಬೆರಳನ್ನು ಕೊಯ್ದುಕೊಂಡು ರಕ್ತ ತೆಗೆದು ಬ್ಯಾನರ್‌ಗೆ ಸವರಿ ಧರಣಿ ಅರಂಭಿಸಿದರು.
ನಾಲ್ಕು ವರ್ಷಗಳಿಂದ ಬೂದನೂರು ಗ್ರಾ.ಪಂ.ನಲ್ಲಿ ಆಡಳಿತ ಮಂಡಳಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು, ಇದರ ಬಗ್ಗೆ ಜೂನ್ 10ರಂದು ತಮ್ಮ ಕಚೇರಿ ಎದುರು ಪ್ರತಿಭಟನೆ ನಡೆಸಿ 15 ವಿಷಯಗಳ ಕುರಿತು ಮನವಿ ಸಲ್ಲಿಸಲಾಗಿತ್ತು. ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ತಾವು ನೇಮಿಸಿದ್ದ ಸಮಿತಿ ಯಾವುದೇ ವಿಚಾರಣೆ ನಡೆಸಿಲ್ಲದ ಕಾರಣ ಅವ್ಯವಹಾರ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ಸಹಭಾಗಿತ್ವ, ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬೂದನೂರು ಗ್ರಾಮ ಪಂಚಾಯಿತಿ ವಿಫಲವಾಗಿದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಆಶ್ರಯ ಬಡಾವಣೆಗೆ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರ ನಾಮಕರಣ ಮಾಡಲು ಫಲಾನುಭವಿಗಳ ಪರವಾಗಿ ಮನವಿ ನೀಡಿದರೆ, ಪ್ರಭಾವ, ಆಮಿಷಗಳಿಗೆ ಒಳಗಾಗಿರುವ ಸದಸ್ಯರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಹೆಸರನ್ನು ನಾಮಕರಣ ಮಾಡಿ ಬಳಿಕ ಮತ್ತೆ ಪರಿಷ್ಕರಿಸುವ ಭರವಸೆ ನೀಡಿ ಮೂರು ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾ.ಪಂ.ಅಧ್ಯಕ್ಷೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಸೇರಿ ಬೂದನೂರು ಸ.ನಂ.382, 382/7ರ ಭೂಮಿಯ ಆರ್‌ಟಿಸಿ ಇಂಡೀಕರಣವಾಗಿಲ್ಲದಿದ್ದರೂ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಕ್ಕೆ ಖಾಸಗಿ ವ್ಯಕ್ತಿಯ ನಿವೇಶನದ ಸಂಖ್ಯೆ ಬಳಸಿ ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ಹುಕ್ಕಾಬಾರ್‌ಗೆ ಅನಧಿಕೃತವಾಗಿ, ಅನ್ಯಕ್ರಾಂತವಾಗಿಲ್ಲದ ಹಾಗೂ ಸ್ವತ್ತಿನ ನೋಂದಣಿಗೆ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಆರೋಪಿಸಿದರು.
‘ಘನತ್ಯಾಜ್ಯ ಘಟಕ ನಿರ್ಮಿಸಲು ಭೂಮಿ ಮಂಜೂರಾಗಿ ಎರಡು ವರ್ಷ ಕಳೆದರೂ ಕ್ರಮ ವಹಿಸಲು ಮೀನಮೇಷ ಎಣಿಸಲಾಗುತ್ತಿದೆ. ಅಲ್ಲದೆ ಬೂದು ನೀರು ನಿರ್ವಹಣೆಗೆ ಚರಂಡಿ ನಿರ್ಮಿಸಲು ಮಂಜೂರಾಗಿರುವ ಅನುದಾನದಲ್ಲಿ ಸರ್ಕಾರ ನಿರ್ದೇಶನ ಮಾಡಿರುವಂತೆ ಕಾಮಗಾರಿ ನಡೆಸದೆ ನಿಯಮ ಉಲ್ಲಂಘಿಸಿ ಹಣ ದುರುಪಯೋಗ ಮಾಡಲಾಗಿದೆ. ಇದರಿಂದ ₹ 10 ಲಕ್ಷ ಕಾಮಗಾರಿ ಮೊತ್ತ ದುರ್ಬಳಕೆಯಾಗಿದೆ’ ಎಂದು ದೂರಿದರು.
ಪ್ರತಿಭಟನೆಯಲ್ಲಿ ಎಚ್.ಡಿ.ಜಯರಾಂ, ಸವಿತಾ, ವಿಜಯಾ, ಮಂಗಳಾ, ಶಿವರಾಜು, ಕಾರ್ತಿಕ್ ಭಾಗವಹಿಸಿದ್ದರು.
‘ಸಮಿತಿ ಅಧ್ಯಕ್ಷ ಬಿ.ಕೆ.ಸತೀಶ್ ಮಾತನಾಡಿ ಪಂಚಾಯಿತಿ ಅಕ್ರಮಕ್ಕೆ ಕಡಿವಾಣ ಹಾಕಿ ತನಿಖೆ ನಡೆಸುವವರೆಗೂ ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದೇವೆ ಈಗಾಗಲೇ ಪ್ರತಿಭಟನಾ ಬ್ಯಾನರ್‌ಗೆ ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದರೂ ಲೆಕ್ಕಕ್ಕಿಲ್ಲ ನಮ್ಮ ಹೋರಾಟ ಪ್ರತಿದಿನ ಹೋರಾಟ ವಿಭಿನ್ನತೆಯಿಂದ ಕೂಡಿರಲಿದೆ ಇದಕ್ಕೆ ಅವಕಾಶ ಮಾಡಿಕೊಡದೇ ಮೇಲಾಧಿಕಾರಿಗಳು ತಕ್ಷಣ ನಮ್ಮ ಗ್ರಾಮ ಪಂಚಾಯಿತಿ ಅಕ್ರಮದಲ್ಲಿ ಭಾಗಿಯಾಗಿರುವವರೆ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.