ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ (ಪಿಎಸ್ಎಸ್‌ಕೆ) ಗುತ್ತಿಗೆದಾರರಾದ ನಿರಾಣಿ ಶುಗರ್ಸ್ ತಮಗೆ ಕಡಿಮೆ ವೇತನ ನೀಡುತ್ತಿದ್ದು, ವೇತನ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ ಕಾರ್ಮಿಕರು, ಕಾರ್ಖಾನೆಯಲ್ಲಿ ಸ್ಥಳೀಯ ನೂರಾರು ಯುವಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಿಂಗಳಿಗೆ ₹ 5 ಸಾವಿರದಿಂದ ₹ 7 ಸಾವಿರದವರೆಗೆ ಮಾತ್ರ ವೇತನ ನೀಡಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದ ಕಡೆಯ ಕಾರ್ಮಿಕರಿಗೆ ₹ 20 ಸಾವಿರದಿಂದ 25 ಸಾವಿರದವರೆಗೆ ಸಂಬಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
‘ಕಾರ್ಮಿಕರಿಗೆ ಕನಿಷ್ಠ ₹ 12 ಸಾವಿರ ಸಂಬಳ ನೀಡಬೇಕು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ, ಸರ್ಕಾರದ ನಿಯಮಗಳಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಆಲಿಸುತ್ತಿಲ್ಲ. ಅಲ್ಲದೇ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷಾ ಸಲಕರಣೆಗಳನ್ನು ನೀಡುತ್ತಿಲ್ಲ. ಕುಡಿಯಲು ಶುದ್ಧ ನೀರು ಮತ್ತು ಶೌಚಾಲಯವೂ ಇರುವುದಿಲ್ಲ’ ಎಂದು ದೂರಿದರು.
‘ಸಂಬಳ ಹೆಚ್ಚಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಯ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ತಮ್ಮ ನೋವನ್ನು ಹೇಳಿಕೊಂಡರು.
ಪ್ರಮೋದ್, ಕೆ.ಟಿ.ಪ್ರಕಾಶ್, ಶಿವು, ಅರವಿಂದ, ಅನಂತು, ಮಂಜುನಾಥ್, ಮಹೇಶ್, ಸುರೇಶ್ ಪ್ರತಿಭಟನೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.