ADVERTISEMENT

ಕನಸುಗಾರ ಯೋಧನ ಕಳೆದುಕೊಂಡ ಕೆ.ಎಂ.ದೊಡ್ಡಿ, ಗುಡಿಗೆರೆ ಗ್ರಾಮದಲ್ಲಿ ನೀರವ ಮೌನ

ಮೃತದೇಹಕ್ಕಾಗಿ ಕಾಯುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 3:01 IST
Last Updated 14 ಫೆಬ್ರುವರಿ 2020, 3:01 IST
ಯೋಧ ಎಚ್‌.ಗುರು ಪತ್ನಿ ಕಲಾವತಿ ಅವರನ್ನು ಸಂಬಂಧಿಕರು ಸಂತೈಸುತ್ತಿರುವುದು
ಯೋಧ ಎಚ್‌.ಗುರು ಪತ್ನಿ ಕಲಾವತಿ ಅವರನ್ನು ಸಂಬಂಧಿಕರು ಸಂತೈಸುತ್ತಿರುವುದು   

(ಈ ಸುದ್ದಿ ಫೆ.15, 2019ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು)

ಮಂಡ್ಯ: ಭಾರತೀನಗರಕ್ಕೆ (ಕೆ.ಎಂ.ದೊಡ್ಡಿ) ಹೊಂದಿಕೊಂಡಂತಿರುವ ಗುಡಿಗೆರೆ ಕಾಲೊನಿಯಲ್ಲಿ ‘ಗುರು’ ಎಂದರೆ ಎಲ್ಲರ ಮನಸ್ಸುಗಳು ಅರಳುತ್ತಿದ್ದವು. ನಗುಮೊಗದ ಯೋಧ ಊರಿಗೆ ಬಂದರೆ ಸ್ನೇಹಿತರು, ಗ್ರಾಮಸ್ಥರ ಸೈನ್ಯವೇ ಮನೆಗೆ ಬರುತ್ತಿತ್ತು. ಜೀವನೋತ್ಸಾಹದ ಚಿಲುಮೆಯಂತಿದ್ದು, ಊರಿನ ಮಗನಾಗಿದ್ದರು.

ಕಾಶ್ಮೀರದಲ್ಲಿ ಗುರುವಾರ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರಲ್ಲಿ ಗುಡಿಗೆರೆ ಎಚ್‌.ಗುರು ಕೂಡ ಒಬ್ಬರು ಎಂಬ ಸುದ್ದಿ ತಿಳಿದ ನಂತರ ಕಾಲೊನಿ ದುಃಖದಲ್ಲಿ ಮುಳುಗಿದೆ. ಯುವಕರ ಮನಸುಗಳಲ್ಲಿ ಕನಸುಗಳ ಬೀಜ ಬಿತ್ತಿದ್ದ ಅವರು ಎಲ್ಲರ ಪ್ರೀತಿಯ ಯೋಧನಾಗಿದ್ದರು. ಬಿಡುವಿನಲ್ಲಿ ಊರಿಗೆ ಬಂದಾಗ ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಭಾರತೀನಗರದಲ್ಲಿರುವ ಅಪ್ಪನ ಲ್ಯಾಂಡ್ರಿಯಲ್ಲಿ ಬಟ್ಟೆ ಇಸ್ತ್ರಿ ಮಾಡುವ ಕೆಲಸದಿಂದ ಹಿಡಿದು ಸಹೋದರರು, ಗೆಳೆಯರು, ಗ್ರಾಮಸ್ಥರ ಕೆಲಸಗಳಿಗೆ ಕೈಜೋಡಿಸುತ್ತಿದ್ದರು. ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಬಂದು ಕಳೆದ ಭಾನುವಾರವಷ್ಟೇ (ಫೆ.10) ಕರ್ತವ್ಯಕ್ಕೆ ಮರಳಿದ್ದರು.

ADVERTISEMENT

2011ರಲ್ಲಿ ಸಿಆರ್‌ಪಿಎಫ್‌ ಸೇರಿದ್ದು, 8 ವರ್ಷಗಳ ಕಾಲ ಜಾರ್ಖಂಡ್‌ನಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಜಮ್ಮು– ಕಾಶ್ಮೀರಕ್ಕೆ ನಿಯೋಜನೆಗೊಂಡಿದ್ದು, ಜಮ್ಮುವಿನಲ್ಲಿ ಮೂರು ತಿಂಗಳ ತರಬೇತಿ ಪೂರೈಸಿದ್ದರು. ತರಬೇತಿ ನಂತರ ಊರಿಗೆ ಬಂದು ಒಂದು ತಿಂಗಳು ಇಲ್ಲೇ ಇದ್ದರು. ‘ಅಪ್ಪನಿಗೆ ಉಬ್ಬಸ ಎಂಬ ಕಾರಣಕ್ಕೆ ತಾನೇ ಬಟ್ಟೆ ಇಸ್ತ್ರಿ ಮಾಡುತ್ತಿದ್ದರು. ಕುಲಕಸುಬು ಬಿಡಬಾರದು, ಇನ್ನು ಮುಂದೆ ನೀನೇ ಲ್ಯಾಂಡ್ರಿ ನಡೆಸು ಎಂದು ಹೇಳಿ ಹೋದ ಅಣ್ಣ ಎಲ್ಲಿ’ ಎಂದು ಗುರು ಸಹೋದರ ಮಧು ಕಣ್ಣೀರಾದರು.

ಗುರಿ ಮುಟ್ಟಿದ್ದ ಗುರು: ಹೊಸ ಮನೆ ನಿರ್ಮಿಸಿ, ಗೃಹ ಪ್ರವೇಶ ಮಾಡಿಯೇ ಮದುವೆಯಾಗುವುದಾಗಿ ಗುರಿ ಇಟ್ಟುಕೊಂಡಿದ್ದ ಗುರು, ತಮ್ಮ ಉದ್ದೇಶ ಪೂರೈಸಿದ್ದರು. ಎರಡು ಅಂತಸ್ತಿನ ಮನೆ ನಿರ್ಮಿಸಿ, 10 ತಿಂಗಳ ಹಿಂದೆ ಗೃಹ ಪ್ರವೇಶ ಮಾಡಿದ್ದರು. 8 ತಿಂಗಳ ಹಿಂದಷ್ಟೇ ಕನಕಪುರ ತಾಲ್ಲೂಕಿನ ಸಾಸಲಾಪುರ ಗ್ರಾಮದ ಕಲಾವತಿ ಅವರನ್ನು ವಿವಾಹವಾಗಿದ್ದರು.

ಚಿಕ್ಕಂದಿನಿಂದಲೇ ಪೊಲೀಸ್‌ ಆಗುವ ಕನಸು ಕಟ್ಟಿದ್ದರು. ಪೊಲೀಸ್‌ ವಸ್ತ್ರಧರಿಸಿ ಛಾಯಾಚಿತ್ರ ತೆಗೆಸಿಕೊಂಡಿದ್ದರು. ಕ್ರಮೇಣ ಯೋಧನಾಗುವ ಕನಸು ಕಂಡಿದ್ದರು. ದೇಶಕ್ಕಾಗಿ ಕೆಲಸ ಮಾಡುವ ತೃಪ್ತಭಾವವನ್ನು ಸದಾ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರನ್ನೇ ಅನುಸರಿಸಿದ ಹಲವರು ಸೈನ್ಯ ಸೇರಲು ಯತ್ನಿಸುತ್ತಿದ್ದರು. ಗೃಹರಕ್ಷಕರಾಗಿರುವ ತಮ್ಮ ಆನಂದ್‌ ಕೂಡ ಅಣ್ಣನಿಂದ ಪ್ರೇರೇಪಣೆಗೊಂಡಿದ್ದರು. ಹೊನ್ನಯ್ಯ– ಚಿಕ್ಕಹೊಳ್ಳಮ್ಮ ದಂಪತಿ ಮೂವರು ಪುತ್ರರಲ್ಲಿ ಗುರು ಹಿರಿಯ ಮಗ. ಕಳೆದ 50 ವರ್ಷಗಳಿಂದ ಲ್ಯಾಂಡ್ರಿ ನಡೆತ್ತಿರುವ ತಂದೆ ಕಡುಬಡತನದ ನಡುವೆ ಮಕ್ಕಳನ್ನು ಸಾಕಿದ್ದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುಡಿಗೆರೆಗೆ ಭೇಟಿನೀಡಿ, ಕುಟುಂಬ ಸದಸ್ಯರಿಗೆ ಪಕ್ಷದ ವತಿಯಿಂದ ₹ 1 ಲಕ್ಷ ಪರಿಹಾರ ವಿತರಿಸಿದರು.

ಭಾರತೀನಗರದಲ್ಲೇ ಸಂಸ್ಕಾರ ಮಾಡಿ:

ಗುರು ಕುಟುಂಬಕ್ಕೆ ಗ್ರಾಮದಲ್ಲಿ ತುಂಡು ಭೂಮಿಯೂ ಇಲ್ಲ. ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಗ್ರಾಮದ ಎಳನೀರು ಮಾರುಕಟ್ಟೆ ಎದುರಿನ ಸರ್ಕಾರಿ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಾಗಿ ತಿಳಿಸಿದರು. ಇದಕ್ಕೆ ವಿರೋಧಿಸಿದ ಗ್ರಾಮಸ್ಥರು, ಭಾರತೀನಗರದ ಪ್ರಮುಖ ಸ್ಥಳ ಅಥವಾ ಮಳವಳ್ಳಿ– ಮದ್ದೂರು ಮುಖ್ಯರಸ್ತೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕು. ಗುರು ಪುತ್ಥಳಿ ಹಾಗೂ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ, ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು. ಶನಿವಾರ ನಸುಕಿನಲ್ಲಿ ಮೃತದೇಹ ಗ್ರಾಮಕ್ಕೆ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೊಂದವರ ಬ್ಲಾಸ್ಟ್‌ ಮಾಡಿ

‘ನನ್ನ ಪತಿ ದೇಶ ಸೇವೆಗಾಗಿ ತೆರಳಿದ್ದರು. ಗಂಡನ ಕೊಂದವರನ್ನು ಬ್ಲಾಸ್ಟ್‌ ಮಾಡಿ. ಒಳ್ಳೆಯ ಕೆಲಸ ಮಾಡುವವರನ್ನು ಯಾಕೆ ಕೊಲೆ ಮಾಡುತ್ತಾರೆ? ಅಂತಹವರನ್ನು ಉಳಿಸಬೇಡಿ’ ಎಂದು ಗುರು ಪತ್ನಿ ಕಲಾವತಿ ಆಕ್ರೋಶದಿಂದ ಹೇಳಿದರು.

ಗುರು ತಂದೆ ಹೊನ್ನಯ್ಯ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭಾವಚಿತ್ರವಿಲ್ಲ: ಆಕ್ರೋಶ
ಯೋಧ ಗುರು ಹುತಾತ್ಮರಾಗಿ 30 ಗಂಟೆ ಗಳೆದಿದ್ದರೂ ಮಂಡ್ಯ, ಮದ್ದೂರು, ಭಾರತೀನಗರದಲ್ಲಿ ಯಾವುದೇ ಶ್ರದ್ಧಾಂಜಲಿಯ ಭಾವಚಿತ್ರ, ಕಟೌಟ್‌ ಕಾಣಲಿಲ್ಲ. ಹೊರ ಜಿಲ್ಲೆಗಳಿಂದ ಗ್ರಾಮಕ್ಕೆ ಬಂದ ಜನರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಚಿತ್ರನಟ ಸತ್ತರೆ ಊರ ತುಂಬೆಲ್ಲ ಕಟೌಟ್‌ ಹಾಕುತ್ತಾರೆ, ತಿಥಿ ಮಾಡುತ್ತಾರೆ. ವೀರಮರಣವನ್ನಪ್ಪಿದ ಯೋಧನ ಒಂದು ಚಿತ್ರವೂ ಇಲ್ಲ. ಗುರು ಮನೆ ಬಳಿ ಕುಡಿಯುವ ನೀರಿಲ್ಲ, ನೆರಳಿನ ವ್ಯವಸ್ಥೆಯೂ ಇಲ್ಲ. ಯಾವ ಜನಪ್ರತಿನಿಧಿಯೂ ಇಲ್ಲ. ರಾಜಕಾರಣಿಗಳಿಗೆ ನಾಚಿಕೆಯಾಗಬೇಕು’ ಎಂದು ಮೈಸೂರು ಜಿಲ್ಲೆ ಬನ್ನೂರು ಪಟ್ಟಣದಿಂದ ಬಂದಿದ್ದ ಅಭಿಜಿತ್‌ ಆಕ್ರೋಶ ವ್ಯಕ್ತಪಡಿಸಿದರು.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.