ADVERTISEMENT

Puneeth Rajkumar: ಇದು ‘ಅಪ್ಪು’ ಮಲಗುತ್ತಿದ್ದ ತೊಟ್ಟಿಲು!

ಗಣಂಗೂರು ನಂಜೇಗೌಡ
Published 30 ಅಕ್ಟೋಬರ್ 2024, 6:59 IST
Last Updated 30 ಅಕ್ಟೋಬರ್ 2024, 6:59 IST
ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು ಗ್ರಾಮದ ಸುಬ್ಬಯ್ಯ ಅವರ ಮನೆಯಲ್ಲಿರುವ, ವರನಟ ರಾಜಕುಮಾರ್‌ ನಟನೆಯ ‘ಬಹದ್ದೂರು ಗಂಡು’ ಚಿತ್ರದ ಶೂಟಿಂಗ್‌ ವೇಳೆ 8 ತಿಂಗಳ ಮಗು ಪುನೀತ್‌ ರಾಜಕುಮಾರ್‌ (ಅಪ್ಪು) ಅವರನ್ನು ಮಲಗಿಸುತ್ತಿದ್ದ ಮರದ ತೊಟ್ಟಿಲು
ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು ಗ್ರಾಮದ ಸುಬ್ಬಯ್ಯ ಅವರ ಮನೆಯಲ್ಲಿರುವ, ವರನಟ ರಾಜಕುಮಾರ್‌ ನಟನೆಯ ‘ಬಹದ್ದೂರು ಗಂಡು’ ಚಿತ್ರದ ಶೂಟಿಂಗ್‌ ವೇಳೆ 8 ತಿಂಗಳ ಮಗು ಪುನೀತ್‌ ರಾಜಕುಮಾರ್‌ (ಅಪ್ಪು) ಅವರನ್ನು ಮಲಗಿಸುತ್ತಿದ್ದ ಮರದ ತೊಟ್ಟಿಲು   

ಶ್ರೀರಂಗಪಟ್ಟಣ: ‘ಆಗ ಅಪ್ಪು ಏಳೆಂಟು ತಿಂಗಳ ಮಗು. ಪಾರ್ವತಮ್ಮ ರಾಜಕುಮಾರ್‌ ಅವರು ನಮ್ಮ ತೊಟ್ಟಿ ಮನೆಯ ನಡುವೆ ಈ ತೊಟ್ಟಿಲಿನಲ್ಲಿ ತಮ್ಮ ಹಸು ಕಂದನನ್ನು ಮಲಗಿಸಿ ತೂಗುತ್ತಿದ್ದರು...’ ಎಂದು ತಾಲ್ಲೂಕಿನ ಚಂದಗಾಲು ಗ್ರಾಮದ 82 ವರ್ಷದ ಸುಬ್ಬಯ್ಯ 48 ವರ್ಷಗಳ ಹಿಂದೆ ತಾವು ಕಂಡ ಸನ್ನಿವೇಶವನ್ನು ಮೆಲಕು ಹಾಕಿದರು.

ವರನಟ ರಾಜಕುಮಾರ್‌ ಅವರ ನಟನೆಯ ‘ಬಹದ್ದೂರ್‌ ಗಂಡು’ ಚಿತ್ರವನ್ನು ಚಂದಗಾಲು ಮತ್ತು ಆಸುಪಾಸಿನಲ್ಲಿ ಒಂದೂವರೆ ತಿಂಗಳು ಚಿತ್ರೀಕರಣ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಪಾರ್ವತಮ್ಮ ರಾಜಕುಮಾರ್‌ ಹಸುಗೂಸು ಪುನೀತ್‌ ರಾಜಕುಮಾರ್‌ (ಅಪ್ಪು) ಜತೆ ಮೂರು ದಿನಗಳ ಕಾಲ ಈ ಊರಿನಲ್ಲೇ ಉಳಿದಿದ್ದರು.

ಗ್ರಾಮದ ಮೂಡಲಪ್ಪನವರ ಯಾಲಕ್ಕಯ್ಯನ ಸುಬ್ಬಯ್ಯ ಅವರ ತೊಟ್ಟಿ ಮನೆಯಲ್ಲಿ ಅವರು ತಂಗಿದ್ದರು. ಅವರು ಇಲ್ಲಿದ್ದ ಮೂರು ದಿನಗಳೂ ಹಸುಗೂಸು ಅಪ್ಪುವನ್ನು ಮೂಡಲಪ್ಪ ಅವರ ಮನೆಯ ತೊಟ್ಟಿಲಿನಲ್ಲೇ ಮಲಗಿಸುತ್ತಿದ್ದರು.

ADVERTISEMENT

ಈ ತೊಟ್ಟಿಲಿನಲ್ಲಿ ರಾಜಕುಮಾರ್ ಅವರ ಮಗ ಮಲಗಿದ್ದ ಎಂಬ ಕಾರಣಕ್ಕೆ ಇದನ್ನು ಮೂಡಲಪ್ಪನವರ ಮೊಮ್ಮಗ ವೆಂಕಟೇಶ್‌ ಅದನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಕರಿ ಮರದಿಂದ ಮಾಡಿರುವ ಈ ತೊಟ್ಟಿಲಿಗೆ ನಾಲ್ಕೂ ಕಡೆ ಚಿಲಕಗಳಿವೆ. ಮಗು ಮೂತ್ರ ವಿಸರ್ಜಿಸಿದರೆ, ಕೆಳಗೆ ಸರಾಗವಾಗಿ ಹರಿಯುವಂತೆ ರಂಧ್ರಗಳನ್ನು ಮಾಡಲಾಗಿದೆ.

‘ತೊಟ್ಟಿಲಿನ ಒಳಗೆ ಬಟ್ಟೆ ಹಾಸಿ ಅದರ ಮೇಲೆ ಅಪ್ಪುವನ್ನು ಮಲಗಿಸುತ್ತಿದ್ದರು. ಮಗುವಿಗೆ ಒಮ್ಮೊಮ್ಮೆ ಒಳಲೆಯಲ್ಲಿ ಹಾಲು ಕುಡಿಸುತ್ತಿದ್ದರು’ ಎಂಬ ಸವಿನೆನಪುಗಳನ್ನು ಕುಟುಂಬಸ್ಥರು ಸ್ಮರಿಸಿಕೊಂಡರು. 

ನ್ಯಾಯ ಪಂಚಾಯಿತಿ ಮಾಡುವುದು, ಜಯಂತಿಯನ್ನು ಅಪಹರಿಸಿ ತರುವುದು, ರಾಜಕುಮಾರ್‌ (ಪಂಜು) ಮನೆ ಮೇಲೆ ಹತ್ತುವುದು, ಕತ್ತಿ ವರಸೆಯಲ್ಲಿ ಗೆದ್ದು ಬಂದ ಪಂಜು (ರಾಜಕುಮಾರ್‌)ನನ್ನು ಸ್ವಾಗತಿಸುವುದು, ರೊಟ್ಟಿ ಸುಡುವುದು ಇತರ ಸನ್ನಿವೇಶಗಳು ಈ ಊರಿನಲ್ಲಿ ಚಿತ್ರೀಕರಣಗೊಂಡಿವೆ. ಸಾಹುಕಾರ್‌ ಮರೀಗೌಡ, ಗದ್ದೆಮನೆ ಕೃಷ್ಣಪ್ಪ ಇತರರ ಮನೆಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದ ಹಾಡುಗಳನ್ನು ಕೂಡ ಇಲ್ಲಿನ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ.

ಪುನೀತ್‌ ರಾಜಕುಮಾರ್‌ ಅವರನ್ನು ತೂಗುತ್ತಿದ್ದ ಮರದ ತೊಟ್ಟಿಲಿನಲ್ಲಿ ಮಕ್ಕಳು ಕುಳಿತಿರುವುದು. ಮೂಡಲಪ್ಪ ಅವರ ಮೊಮ್ಮಗ ವೆಂಕಟೇಶ್‌ ಇದ್ದಾರೆ

‘ಚಂದಗಾಲು ಗ್ರಾಮದಲ್ಲಿ, 1975ರ ಅಕ್ಟೋಬರ್‌ ಮತ್ತು ನವೆಂಬರ್ ತಿಂಗಳಲ್ಲಿ ‘ಬಹದ್ದೂರ್‌ ಗಂಡು’ ಚಿತ್ರದ ಚಿತ್ರೀಕರಣ ನಡೆಯಿತು. ನನಗಾಗ 18 ವರ್ಷ. ಅಷ್ಟೂ ದಿನ ಊರು ಬಿಟ್ಟು ಕದಲದೆ ಚಿತ್ರೀಕರಣ ನೋಡಿದ್ದೆ. ಪಾರ್ವತಮ್ಮ ಅವರು ನಮ್ಮ ಮನೆಯ ತೊಟ್ಟಿಲಿನಲ್ಲಿ ಅಪ್ಪುನನ್ನು ಮಲಗಿಸುತ್ತಿದ್ದರು. ತೊಟ್ಟಿಲು ತೂಗುತ್ತಿದ್ದ ಮಕ್ಕಳಿಗೆ ಕಲ್ಲುಸಕ್ಕರೆ ಮತ್ತು ಬಾದಾಮಿ ಕೊಡುತ್ತಿದ್ದರು’ ಎಂದು ಯಾಲಕ್ಕಯ್ಯ ಅವರ ಮಗ ವೆಂಕಟೇಶ್‌ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.