ಮಂಡ್ಯ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 14 ನಿವೇಶನ ನುಂಗಿಲ್ಲ, ಅವರ ಬೆಂಬಲಿಗರು 500ಕ್ಕೂ ಹೆಚ್ಚು ನಿವೇಶನ ನುಂಗಿದ್ದಾರೆ. 50:50 ಸ್ಕೀಮ್‌ನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ ಎಂಬುದಕ್ಕೆ ಮುಡಾ ಅಧ್ಯಕ್ಷ ಕೆ.ಮರಿಗೌಡನ ಪತ್ರವೇ ಸಾಕ್ಷಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಮೈಸೂರಿನ ಮುಡಾದಲ್ಲಿ 50;50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ‘ಭೂಸ್ವಾಧೀನವಾದ ಜಾಗದಲ್ಲೇ 526 ನಿವೇಶನಗಳಿದ್ದರೂ, ಬೇರೆ ಕಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸೈಟುಗಳನ್ನು ಸಿದ್ದರಾಮಯ್ಯ ಕುಟುಂಬಕ್ಕೆ ನೀಡಿದ್ದು ಏಕೆ? ಅವರ ಬೆಂಬಲಿಗರು ಹೇಗೆ 500 ಸೈಟು ನುಂಗಿದರು’ ಎಂದು ಪ್ರಶ್ನಿಸಿದರು.
‘ದಲಿತರಿಗೆ ನ್ಯಾಯಯುತವಾಗಿ ಸೇರಬೇಕಾದ ಜಮೀನನ್ನು ಸಿದ್ದರಾಮಯ್ಯ ಕುಟುಂಬ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದೆ. ಅವರು ತಪ್ಪಿತಸ್ಥರೆಂದು ತೋರಿಸಲು ನಮ್ಮಲ್ಲಿ ಅಧಿಕೃತ ದಾಖಲೆಗಳಿವೆ’ ಎಂದು ಪ್ರತಿಪಾದಿಸಿದರು.
ಇಲಾಖೆ ಹಂತದಲ್ಲಿ ಲೋಪ:
‘ಹಗರಣಕ್ಕೆ ಸಂಬಂಧಿಸಿದ ಜಮೀನನ್ನು ನಿಂಗ ಬಿನ್ ಜವರ ಎಂಬವರು 1936ರಲ್ಲಿ ಹರಾಜಿನಲ್ಲಿ ಖರೀದಿಸಿದ್ದರು. 1968ರಲ್ಲಿ ನಿಂಗ ಅವರ ಮಕ್ಕಳಾದ ಮಲ್ಲಯ್ಯ ಮತ್ತು ದೇವರಾಜು ಅವರು ಮತ್ತೊಬ್ಬ ಸಹೋದರ ಮೈಲಾರನಿಗೆ ಭೂಮಿಯ ಹಕ್ಕನ್ನು ₹300ಕ್ಕೆ ವರ್ಗಾಯಿಸಿದ್ದರು. ಆದರೆ, ಆರ್‌ಟಿಸಿಯಲ್ಲಿ 1993ರವರೆಗೆ ನಿಂಗ ಹೆಸರಿನಲ್ಲಿಯೇ ಮುಂದುವರಿದಿದೆ. ಅದು ಇಲಾಖೆ ಹಂತದಲ್ಲಿ ಆಗಿರುವ ಲೋಪ’ ಎಂದು ದೂರಿದರು.
ಸತ್ಯ ಮರೆಮಾಚಿಸಿದ ಸಿಎಂ:
‘ತಂದೆ ನಿಂಗ ಹೆಸರಿನಲ್ಲಿಯೇ ಜಮೀನಿರುವುದು ಗೊತ್ತುಪಡಿಸಿಕೊಂಡ ಪುತ್ರ ದೇವರಾಜ, ಆರ್‌ಟಿಸಿ ಮಾಡಿಸಿಕೊಡುವ ನೆಪದಲ್ಲಿ ಸಹೋದರ ಮೈಲಾರಯ್ಯನ ಮಗ ಮಂಜುನಾಥಸ್ವಾಮಿ ಮತ್ತು ಪತ್ನಿ ಪುಟ್ಟಗೌರಮ್ಮ ಅವರಿಂದ ಖಾಲಿ ಪತ್ರಕ್ಕೆ ಸಹಿ ಮಾಡಿಸಿಕೊಂಡು 1992–93ರಲ್ಲಿ ತನ್ನ ಹೆಸರನ್ನು ಅಕ್ರಮವಾಗಿ ಸೇರಿಸಿಕೊಂಡಿದ್ದ. ಅದನ್ನು ಸಿದ್ದರಾಮಯ್ಯ ಮರೆಮಾಚಿಸಿದ್ದಾರೆ. 27 ಹಕ್ಕುದಾರರಿಗೆ ಸೇರಬೇಕಾದ ಜಮೀನನ್ನು ದೇವರಾಜ ಒಬ್ಬನಿಂದ ಸಿಎಂ ಹೇಗೆ ಸಹಿ ಮಾಡಿಸಿಕೊಂಡರು’ ಎಂದು ಪ್ರಶ್ನಿಸಿದರು.
‘1992ರಲ್ಲಿ ಮುಡಾ ಸರ್ವೆ ನಂಬರ್ 464 ಸೇರಿದಂತೆ ಸುತ್ತಮುತ್ತಲ ಒಟ್ಟು 462 ಎಕರೆ ಭೂಮಿಯನ್ನು ದೇವನೂರು ಮೂರನೇ ಹಂತದ ಬಡಾವಣೆ ಉದ್ದೇಶಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಭೂಮಿಯ ಮೇಲೆ ಹಕ್ಕೇ ಇಲ್ಲದ ದೇವರಾಜ, ಜಮೀನು ಪಿತ್ರಾರ್ಜಿತವಾಗಿ ಬಂದಿರುವುದರಿಂದ ಕೃಷಿ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸಚಿವರಿಗೆ ಸುಳ್ಳು ಅರ್ಜಿ ನೀಡಿದ್ದ’ ಎಂದರು.
ಸಿದ್ದರಾಮಯ್ಯ ಕೈವಾಡ:
ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಪ್ರಸ್ತಾವಿತ ಭೂಮಿ ಯೋಜನೆಯ ಕೊನೆಯ ಭಾಗದಲ್ಲಿದೆ ಎಂದು ಸುಳ್ಳು ಮಾಹಿತಿ ನೀಡಿ, ಭೂಸ್ವಾಧೀನದಿಂದ ಕೈಬಿಡಬಹುದು ಎಂದು ವರದಿ ನೀಡಿದ್ದರು. 1998ರಲ್ಲಿ ಡಿನೋಟಿಫಿಕೇಶನ್ ಮಾಡಲಾಗಿತ್ತು. ದಲಿತ ಕುಟುಂಬಕ್ಕೆ ಸೇರಿದ ಸಾಮಾನ್ಯ ವ್ಯಕ್ತಿ ಡಿನೋಟಿಫಿಕೇಷನ್ ಮಾಡಿಸಲು ಸಾಧ್ಯವೇ? ಆಗ ಉಪಮುಖ್ಯಮಂತ್ರಿಯಾಗಿದ್ದವರು ಇದೇ ಸಿದ್ದರಾಮಯ್ಯ. ಅಲ್ಲಿಂದಲೇ ಅವರ ಕೈವಾಡ ಆರಂಭವಾಗಿದೆ’ ಎಂದು ಆರೋಪಿಸಿದರು.
ಬಡಾವಣೆಯಾಗಿದ್ದ ಜಾಗ ಭೂ ಪರಿವರ್ತನೆ:
‘ದೇವರಾಜ ಮತ್ತು ಕುಟುಂಬಸ್ಥರು 3 ಎಕರೆ 16 ಗುಂಟೆ ಜಮೀನನನ್ನು 2004ರಲ್ಲಿ ಸಿದ್ದರಾಮಯ್ಯ ಅವರ ಪತ್ನಿಯ ಸಹೋದರ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದರು. ಸಿದ್ದರಾಮಯ್ಯ ಬಾಮೈದ ಅಕ್ರಮವಾಗಿ ಕ್ರಯ ಮಾಡಿಸಿಕೊಂಡಿದ್ದರು. 2001ರಲ್ಲೇ ಎಲ್ ಅಂಡ್ ಟಿ ಸಂಸ್ಥೆಯೊಂದಿಗೆ ಮುಡಾ ಒಪ್ಪಂದ ಮಾಡಿಕೊಂಡು ₹11.68 ಕೋಟಿಯಲ್ಲಿ ಹೊಸ ಬಡಾವಣೆ ಅಭಿವೃದ್ಧಿಪಡಿಸಲು ಟೆಂಡರ್ ಆಗಿತ್ತು. ಮಲ್ಲಿಕಾರ್ಜುನಸ್ವಾಮಿ ಖರೀದಿಸುವ ವೇಳೆಗೆ ಇದೇ ಜಮೀನಿನಲ್ಲಿನ 5 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಲೇಔಟ್ ಆಗಿದ್ದ ಜಾಗ ಹೇಗೆ 2005ರಲ್ಲಿ ಭೂಪರಿವರ್ತನೆ ಆಯಿತು? ಅಂದಿನ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಕುರುಡರಂತೆ ಭೂ ಪರಿವರ್ತನೆ ಮಾಡಿಕೊಟ್ಟಿದ್ದರು’ ಎಂದು ಗಂಭೀರ ಆರೋಪ ಮಾಡಿದರು.
ಪರಿಹಾರಕ್ಕೆ ಪತ್ರ ಬರೆದ ಪಾರ್ವತಿ:
‘2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಸಿನ ಕುಂಕುಮದ ಕೊಡುಗೆಯಾಗಿ ಜಮೀನು ನೀಡಿದ್ದರು. 2014ರಲ್ಲಿ ಪಾರ್ವತಿ ಅವರು ಮುಡಾಕ್ಕೆ ಪತ್ರ ಬರೆದು ನನಗೆ ಬಂದ ಜಮೀನಿನಲ್ಲಿ ನೀವು ಬಡಾವಣೆ ಮಾಡಿದ್ದೀರಾ. ಬದಲಿ ಜಾಗವನ್ನು ನನಗೆ ನೀಡಿ ಎಂದು ಕೇಳಿದ್ದರು. 2017ರಲ್ಲಿ ಮುಡಾದಲ್ಲಿ ಈ ವಿಷಯ ಚರ್ಚೆಗೆ ಬಂದು 50:50 ಯೋಜನೆಯಡಿ ಬದಲಿ ನಿವೇಶನ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು’ ಎಂದರು.
ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ, ನ್ಯಾಯಾಂಗ ತನಿಖೆ ಎದುರಿಸಬೇಕು. ಇಲ್ಲದಿದ್ದರೆ ಪ್ರಕರಣವನ್ನು ರಾಷ್ಟ್ರಪತಿವರೆಗೂ ಕೊಂಡೊಯ್ಯುತ್ತೇವೆಆರ್.ಅಶೋಕ, ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.