ADVERTISEMENT

ಕೆರೆ–ಕಟ್ಟೆ ನುಂಗಿದ್ದಕ್ಕೆ ಮಳೆ ಅವಾಂತರ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:37 IST
Last Updated 19 ಅಕ್ಟೋಬರ್ 2024, 0:37 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಮಂಡ್ಯ: ‘ಬಡಾವಣೆ ಹೆಸರಿನಲ್ಲಿ ಕೆರೆ, ಕಾಲುವೆಗಳನ್ನು ಮುಚ್ಚಿದ್ದಾರೆ. ರಾಜಕಾಲುವೆಗಳನ್ನೂ ಉಳಿಸಿಲ್ಲ. ನಿಮ್ಮ ಭೂಮಿ ಮತ್ತು ಹಣದ ದಾಹದಿಂದ ಬೆಂಗಳೂರಿನಲ್ಲಿ ಮಳೆ ಅವಾಂತರವಾಗಿದೆ. ಪುಟ್ಟೇನಹಳ್ಳಿ, ಬಿಳೇಕೆಳ್ಳನಹಳ್ಳಿ ಕೆರೆಗಳನ್ನು ಮುಚ್ಚಿ ಡಾಲರ್ಸ್ ಕಾಲನಿಯಾಗಿ ಮಾಡಿದರು. ನನ್ನ ಬಗ್ಗೆ ಮಾತನಾಡುವವರು ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಟೀಕಿಸಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇವರಿಗಿಲ್ಲ. ಮಳೆ ಬಂದರೆ ಇವರು ಅರ್ಧ ಗಂಟೆಯಲ್ಲಿ ಮೋಟಾರು ಹಾಕಿ ನೀರನ್ನು ಖಾಲಿ ಮಾಡ್ತಾರಾ? ನಾನು ಜಲಜೀವನ್ ಮಿಷನ್‌ಗಾಗಿ 110 ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸಿದ್ದು, ಈಗ 110 ಹಳ್ಳಿಗೆ ನೀರು ಕೊಡ್ತೀವಿ ಅಂತ ಹೇಳಿದ್ದಾರೆ. ಅದರಲ್ಲಿ 50 ಲಕ್ಷ ಜನರಿಗೆ ನೀರು ಕೊಡುತ್ತೇವೆ ಅಂತ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅಲ್ಲಿ ಅಷ್ಟು ಜನ ಇರಲು ಸಾಧ್ಯನಾ? ಇದೊಂದು ನಗೆಪಾಟಲು ವಿಷಯ’ ಎಂದರು. 

‘ನನ್ನ ಮೇಲೆ ಯಾವ ಉದ್ದೇಶಕ್ಕೆ ತನಿಖೆ ನಡೆಸುತ್ತಿದ್ದಾರೆಂದು ಗೊತ್ತಿಲ್ಲ. ನಿನ್ನೆ ಮೊನ್ನೆ ಆಗಿರುವ ದೂರು ಯಾವ ಆಧಾರದ ಮೇಲೆ ಕೊಟ್ಟಿದ್ದೀರಾ? ಮುಖ್ಯಮಂತ್ರಿಯವರು ತಮ್ಮ ಮನೆಗೆ ಯಾರನ್ನು ಕರೆಸಿಕೊಂಡಿದ್ದರೆಂಬುದು ಗೊತ್ತಿದೆ. ನಾನು ಏನಂತ ಆಣೆ ಮಾಡಬೇಕು. ನನ್ನ ಮನೆಗೆ ಬಂದು ಚೆಕ್ ಮಾಡೋಕೆ ಏನಿದೆ? ಎಂದು ಕಿಡಿಕಾರಿದರು.

ADVERTISEMENT

‘ಮೊನ್ನೆ ಯಾವುದೋ ಒಂದು ಎನ್‌.ಸಿ.ಆರ್ ಹಾಕಿಕೊಂಡಿದ್ದಾರೆ. ಎಫ್‌ಐಆರ್ ಮಾಡಿಸಲೇಬೇಕೆಂದು ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ. ಏನೇನೂ ಚರ್ಚಿಸಿದ್ದಾರೆ. ಎದುರಾಳಿಗಳನ್ನು ಹಣಿಯಲು ಇವರಿಗೆ ‘ಎಸ್‌.ಐ.ಟಿ’ಯೇ ಒಂದು ಅಸ್ತ್ರವಾಗಿದೆ. ಎಸ್‌ಐಟಿ ಎಂದರೇ ‘ಸಿದ್ದರಾಮಯ್ಯ ಇನ್ವೆಸ್ಟಿಗೇಶನ್‌ ಟೀಮ್’ ಮತ್ತು ‘ಶಿವಕುಮಾರ್ ಇನ್ವೇಸ್ಟಿಗೇಶನ್‌ ಟೀಮ್’ ಎಂದರು.

‘ರಾಮನಗರ ಉಪ ಚುನಾವಣೆಗೆ ಕಾಂಗ್ರೆಸ್‌ನವರು ಅಚ್ಚರಿ ಅಭ್ಯರ್ಥಿಯನ್ನು ಹಾಕುತ್ತಾರೋ? ಮತ್ಯಾವ ಅಭ್ಯರ್ಥಿ ಹಾಕುತ್ತಾರೋ? ಗೊತ್ತಿಲ್ಲ. ಆದರೆ, ನಮಗೆ ನಮ್ಮ ಕಾರ್ಯಕರ್ತರೇ ಅಭ್ಯರ್ಥಿ. ನಮ್ಮದು ಈಗ ಕೇವಲ ದೇವೇಗೌಡರ ಕುಟುಂಬವಲ್ಲ, ಎನ್‌ಡಿಎ ಕುಟುಂಬ. ಎನ್‌ಡಿಎ ಅಭ್ಯರ್ಥಿ ಕಣದಲ್ಲಿರುತ್ತಾರೆ’ ಎಂದರು.

ಹಿನಕಲ್‌ನಲ್ಲೂ ನಿವೇಶನ ಅಕ್ರಮ: ಆರೋಪ

ಮಂಡ್ಯ: ‘ಮೈಸೂರಿನ ಹಿನಕಲ್‌ನಲ್ಲೂ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮವಾಗಿದೆ. ಈ ಪ್ರಕರಣದಲ್ಲಿ ಕೋರ್ಟ್ ಆದೇಶವಾಗಿದೆ. 14 ನಿವೇಶನಗಳ ವಿಷಯವೇ ಬೇರೆ. ಇದೇ ಬೇರೆ ವಿಷಯ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. ‘ಹಿನಕಲ್‌ನಲ್ಲಿ ಹೊಸ ಬಡಾವಣೆ ಮಾಡಲು 1968ರಲ್ಲಿ 434 ಎಕರೆ ಜಮೀನು ನೋಟಿಫಿಕೇಷನ್ ಆಗಿದೆ. ಸತ್ಯಮೇವ ಜನತೆ ಅನ್ನುತ್ತಾರೆ. ಸಾಕಮ್ಮ ಎಂಬವವರ ಕೈಯಲ್ಲಿ ಅರ್ಜಿ ಹಾಕಿಸಿದ್ದಾರೆ. 20 ದಿನಗಳಲ್ಲಿ ಡಿನೋಟಿಫಿಕೇಷನ್ ಆಗುತ್ತೆ. ಅದನ್ನು ಸಿದ್ದರಾಮಯ್ಯ ಖರೀದಿಸಿದ್ದಾರೆ’ ಎಂದು ಆರೋಪಿಸಿದರು. ‘ಮುಡಾ ಕಡತಗಳು ಎಚ್‌ಡಿಕೆ ಮನೆಯಲ್ಲಿವೆ’ ಎಂಬ ಸಚಿವ ಬೈರತಿ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ ‘ನನ್ನ ಕೈಯಲ್ಲಿ ಸರ್ಕಾರ ಇದೆಯೇ? ಮೈಸೂರು ನಗರವನ್ನು 30 40 ವರ್ಷಗಳಿಂದ ಗುತ್ತಿಗೆ ತೆಗೆದುಕೊಂಡಿರುವುದು ಸಿದ್ದರಾಮಯ್ಯ ಹಾಗೂ ಪಟಾಲಂ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.