ಮಂಡ್ಯ: ರೈತ ಸಮುದಾಯದ ಏಕೈಕ ಧ್ವನಿಯಾಗಿ ವಿಧಾನಸೌಧದ ಮೆಟ್ಟಿಲು ಏರಿರುವ ದರ್ಶನ್ ಪುಟ್ಟಣ್ಣಯ್ಯ ಅವರ ಕಾರ್ಯವೈಖರಿ ಬಗ್ಗೆ ರೈತರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಅವರು ಚುನಾವಣೆಯಲ್ಲಿ ಗೆದ್ದ ನಂತರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವುದು, ಫೋನ್ ಕರೆ ಸ್ವೀಕರಿಸದಿರುವುದು, ರೈತಪರ ಚಟುವಟಿಕೆಗಳಲ್ಲಿ, ಹೋರಾಟಗಳಲ್ಲಿ ಪಾಲ್ಗೊಳ್ಳದಿರುವುದು ರೈತರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಶಾಸಕರಾಗಿ ಆಯ್ಕೆಯಾದ ನಂತರ ನಡೆದ ಮೊದಲ ಸ್ವಾತಂತ್ರ್ಯ ದಿನಾಚರಣೆಗೆ ದರ್ಶನ್ ಗೈರಾಗಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ನಡೆಯನ್ನು ವಿರೋಧಿಸಿದ್ದಾರೆ. ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಾದ ಶಾಸಕರು ಅಮೆರಿಕದಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಅವರು ಅಮೆರಿಕಕ್ಕೆ ತೆರಳಿದ್ದರು. ಆಗ ಜನರು ಪ್ರಶ್ನೆ ಮಾಡಿದ್ದಕ್ಕೆ, ಮಡದಿ, ಮಕ್ಕಳನ್ನು ನೋಡಿ ಬರಲು ತೆರಳಿರುವುದಾಗಿ ತಿಳಿಸಿದ್ದರು. ಸ್ವಾತಂತ್ರ್ಯ ದಿನಾಚರಣೆ ವೇಳೆ ಅಮೆರಿಕಕ್ಕೆ ತೆರಳಿವುದನ್ನೂ ಜನ ಪ್ರಶ್ನಿಸಿದ್ದಾರೆ, ಇದಕ್ಕೆ ದರ್ಶನ್ ಪುಟ್ಟಣ್ಣಯ್ಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಚುವಾವಣೆಗೂ ಮೊದಲು ತಮ್ಮ ಅಮೆರಿಕ ವಾಸ, ಪೌರತ್ವ ಹಾಗೂ ವಹಿವಾಟಿನ ಬಗ್ಗೆ ಹಲವು ಬಾರಿ ಸ್ಪಷ್ಟನೆ ನೀಡಿದ್ದರು. 'ಅಮೆರಿಕದಲ್ಲಿ ಕಂಪನಿ ಮಾರಾಟ ಮಾಡಿದ್ದು ಗೆದ್ದನಂತರ ವಿದೇಶಕ್ಕೆ ತೆರಳುವುದಿಲ್ಲ, ಕ್ಷೇತ್ರದಲ್ಲೇ ಉಳಿಯುತ್ತೇನೆ' ಎಂದು ಮಾತು ಕೊಟ್ಟಿದ್ದರು. ಆದರೆ ದರ್ಶನ್ ಪುಟ್ಟಣ್ಣಯ್ಯ ಮತ್ತೆ ಮತ್ತೆ ಮಾತು ಮುರಿಯುತ್ತಿದ್ದು ಬೆಂಬಲಿಗರಲ್ಲಿ ಅನುಮಾನ ಮೂಡಿಸಿದೆ.
‘ಚುನಾವಣೆ ವೇಳೆ ದರ್ಶನ್‌ಗಾಗಿ ಜೆಡಿಎಸ್ ಮುಖಂಡರೊಂದಿಗೆ ಜಗಳ ಮಾಡಿಕೊಂಡಿದ್ದೇವೆ. ಶಾಸಕರು ನಮ್ಮ ಕರೆಯನ್ನೇ ಸ್ವೀಕಾರ ಮಾಡುತ್ತಿಲ್ಲ, ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೆ.ಎಸ್.ಪುಟ್ಟಣ್ಣಯ್ಯ ನಂತರ ದರ್ಶನ್ ಅವರು ತಂದೆ ಹಾದಿಯಲ್ಲೇ ನಡೆಯುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಅದು ಸಳ್ಳೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ರೈಸಂಘದ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.
ಚಟುವಟಿಕೆಯಿಂದಲೂ ದೂರ: ರೈತಸಂಘ, ಕರ್ನಾಟಕ ಸರ್ವೋದಯ ಪಕ್ಷದ ಚಟುವಟಿಕೆಯಿಂದಲೂ ದರ್ಶನ್ ದೂರ ಉಳಿದಿರುವುದಕ್ಕೆ ಹಿರಿಯ ಮುಖಂಡರಿದಲೂ ಅಸಮಾಧಾನ ವ್ಯಕ್ತವಾಗಿದೆ. ಆ.12ರಂದು ಬೆಂಗಳೂರಿನಲ್ಲಿ ನಡೆದ ಸರ್ವೋದಯ ಕರ್ನಾಟಕ ಪಕ್ಷದ ಸಭೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದರು. ಇದಕ್ಕೆ ಪಕ್ಷದ ಮುಖಂಡರು ಬೇಸರವ್ಯಕ್ತಪಡಿಸಿದ್ದರು.
ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ದರ ನಿಗದಿಗೆ ಒತ್ತಾಯಿಸಿ ನಗರದಲ್ಲಿ ಈಚೆಗೆ ನಡೆದ ಹೋರಾಟದ ವೇಳೆಯಲ್ಲೂ ದರ್ಶನ್ ಗೈರಾಗಿದ್ದರು. ಕ್ಷೇತ್ರದಲ್ಲೇ ಇದ್ದರೂ ಅವರು ಹೋರಾಟಕ್ಕೆ ಬರಲಿಲ್ಲ. ಇದಕ್ಕೆ ರೈತಸಂಘದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದರು. ದರ್ಶನ್ ಪುಟ್ಟಣ್ಣಯ್ಯ ಶಾಸಕರಾದ ಮೇಲೆ ರೈತ ಸಂಘದ ಹಿರಿಯ ಮುಖಂಡರ ಜೊತೆ ಸರಿಯಾಗಿ ಸಂಪರ್ಕವಿಟ್ಟುಕೊಂಡಿಲ್ಲ. ಅವರ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಅಸಮಾಧಾನ ಹಲವರಲ್ಲಿದೆ.
‘ದರ್ಶನ್ ಪುಟ್ಟಣ್ಣಯ್ಯ ಅವರ ಕಾರ್ಯವೈಖರಿ ಕುರಿತಂತೆ ರೈತ ಮುಖಂಡರಲ್ಲಿ ಅಸಮಾಧಾನ ಇರುವುದು ಸತ್ಯ. ರೈತಸಂಘ, ಕರ್ನಾಟಕ ಸರ್ವೋದಯ ಪಕ್ಷ ತಾಯಿಬೇರು ಇದ್ದಂತೆ, ಸಂಘ, ಪಕ್ಷದ ಚಟುವಟಿಕೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕು. ಕೆ.ಎಸ್.ಪುಟ್ಟಣ್ಣಯ್ಯ ಅವರ ಹಾದಿಯಲ್ಲೇ ನಡೆಯಬೇಕು ಎಂಬ ಸಲಹೆಯನ್ನೂ ನೀಡಿದ್ದೇವೆ. ಇನ್ನೂ ಕಾಯುತ್ತೇವೆ, ಶಾಸಕರು ನಮ್ಮ ಜೊತೆ ಹೆಜ್ಜೆ ಹಾಕಬೇಕು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.