ADVERTISEMENT

ರೈತರ ಬಗ್ಗೆ ಅನುಕಂಪ ಬೇಡ, ನೆರವು ಬೇಕು: ರೈತ ದಸರಾದಲ್ಲಿ ಜಿಲ್ಲಾಧಿಕಾರಿ ಕುಮಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 13:50 IST
Last Updated 6 ಅಕ್ಟೋಬರ್ 2024, 13:50 IST
ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ದಸರಾದಲ್ಲಿ ಪ್ರಗತಿಪರ ರೈತರನ್ನು ಜಿಲ್ಲಾಧಿಕಾರಿ ಕುಮಾರ ಸನ್ಮಾನಿಸಿದರು. ಜಿ.ಪಂ. ಸಿಇಒ ಶೇಕ್‌ ತನ್ವೀರ್‌ ಆಸಿಫ್‌, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಇದ್ದಾರೆ
ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ದಸರಾದಲ್ಲಿ ಪ್ರಗತಿಪರ ರೈತರನ್ನು ಜಿಲ್ಲಾಧಿಕಾರಿ ಕುಮಾರ ಸನ್ಮಾನಿಸಿದರು. ಜಿ.ಪಂ. ಸಿಇಒ ಶೇಕ್‌ ತನ್ವೀರ್‌ ಆಸಿಫ್‌, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಇದ್ದಾರೆ   

ಶ್ರೀರಂಗಪಟ್ಟಣ: ರೈತರ ಬಗ್ಗೆ ಅನುಕಂಪ ತೋರುವ ಬದಲು ಅವರಿಗೆ ಅಗತ್ಯ ನೆರವು ಸಿಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ದಸರಾ ಉತ್ಸವದ ನಿಮಿತ್ತ ಶನಿವಾರ ಏರ್ಪಡಿಸಿದ್ದ ರೈತ ದಸರಾವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಸರ್ಕಾರದ ಸೌಲಭ್ಯಗಳು ಅರ್ಹ ರೈತರಿಗೆ ದೊರಕಬೇಕು. ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಬೆಳೆಗಳ ಸುಧಾರಿತ ತಳಿಗಳನ್ನು ಅಧಿಕಾರಿಗಳು ಪರಿಚಯಿಸಬೇಕು ಎಂದು ತಿಳಿಸಿದರು.

ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ವಾತಾವರಣಕ್ಕೆ ಹೊಂದುವ ಬೆಳೆ ಪದ್ದತಿಯನ್ನು ರೈತರು ಅನುಸರಿಸಬೇಕು. ಪರಂಪರಾಗತ ಕೃಷಿ ಪದ್ದತಿಯನ್ನು ಕೈ ಬಿಟ್ಟು ಹೆಚ್ಚು ಇಳುವರಿ ಕೊಡುವ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಯಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಬೆಂಗಳೂರು ಜಿಕೆವಿಕೆಯ ಕೀಟಶಾಸ್ತ್ರಜ್ಞ ಡಾ.ಡಿ. ರಾಜಣ್ಣ ‘ಕಬ್ಬು ಬೆಳೆಯಲ್ಲಿ ಬೇರು ಹುಳುಗಳ ಸಮಗ್ರ ನಿರ್ವಹಣೆ’; ಡಾ.ಎನ್‌.ಎಸ್‌. ಕಿತ್ತೂರಮಠ ‘ಭತ್ತ ಮತ್ತು ಕಬ್ಬು ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಣೆ’; ಡಾ.ಸನತ್‌ಕುಮಾರ್‌ ‘ಬಾಳೆ, ತೆಂಗು, ಅಡಿಕೆ ಬೆಳೆಗಳಲ್ಲಿ ಕೀಟ ಮತ್ತು ರೋಗ ನಿಯಂತ್ರಣ’; ಡಾ.ರಾಮೇಗೌಡ ‘ರೇಷ್ಮೆ ಹುಳು ಸಾಕಣೆ’, ಕುರಿತು ಮಾಹಿತಿ ನೀಡಿದರು. ಡಾ.ರಘುಪತಿ ‘ಪಶುಪಾಲನೆ’ ಕುರಿತು ವಿಷಯ ಮಂಡಿಸಿದರು.‌

ಪುರಸ್ಕಾರ: ಪ್ರಗತಿಪರ ರೈತರಾದ ಅರಕೆರೆ ಶಿವಣ್ಣ, ಗಾಮನಹಳ್ಳಿಯ ಬಸವಯ್ಯ, ಹೆಬ್ಬಾಡಿ ಗ್ರಾಮದ ಜಯರಾಮೇಗೌಡ, ಎಂ.ಶೆಟ್ಟಹಳ್ಳಿಯ ಬದ್ರುನ್ನೀಸಾ, ಚಂದಗಾಲು ಗ್ರಾಮದ ಕುಮಾರಸ್ವಾಮಿ, ಕೂಡಲಕುಪ್ಪೆ ಶಂಕರನಾರಾಯಣ ಇತರ ರೈತರನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು.

ಜಿ.ಪಂ. ಸಿಇಒ ಶೇಕ್‌ ತನ್ವೀರ್‌ ಆಸಿಫ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌, ಸಹಾಯಕ ನಿರ್ದೇಶಕರಾದ ಪ್ರಿಯದರ್ಶಿನಿ, ಶ್ರೀಹರ್ಷ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಹಿರಿಯ ಸಹಾಯಕ ನಿರ್ದೇಶಕಿ ಗಾಯತ್ರಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ರೈತ ದಸರಾದಲ್ಲಿ ಪಾಲ್ಗೊಂಡಿದ್ದರು.

ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಶನಿವಾರ ನಡೆದ ರೈತ ದಸರಾವನ್ನು ಜಿಲ್ಲಾಧಿಕಾರಿ ಕುಮಾರ ಉದ್ಘಾಟಿಸಿದರು. ಜಿ.ಪಂ. ಸಿಇಒ ಶೇಕ್‌ ತನ್ವೀರ್‌ ಆಸಿಫ್‌ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.