ಮೇಲುಕೋಟೆ: 11ನೇ ಶತಮಾನದ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯ 1003ನೇ ತಿರುನಕ್ಷತ್ರ ಮಹೋತ್ಸವವನ್ನು ಆಚಾರ್ಯರ ಕರ್ಮಭೂಮಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಭಿಷೇಕಕ್ಕಷ್ಟೇ ಸೀಮೀತಗೊಳಿಸಿ ನೆರವೇರಿಸಲಾಯಿತು.
ಆಚಾರ್ಯರ ಹುಟ್ಟಿದ ಆರಿದ್ರಾ ನಕ್ಷತ್ರದ ಶುಭ ದಿನವಾದ ಮಂಗಳವಾರ ಶಾಸ್ತ್ರೋಕ್ತವಾಗಿ ವೇದಮಂತ್ರ ಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ರಾಮಾನುಜರ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು.
ದ್ವಾದಶಾರಾಧನೆಯೊಂದಿಗೆ ನಡೆಯಬೇಕಾದ ಅಭಿಷೇಕದ ಬದಲು ನಿತ್ಯ ಪೂಜಾ ಕೈಂಕರ್ಯದ ಆರಿದ್ರಾ ನಕ್ಷತ್ರದ ಅಭಿಷೇಕದ ವಿಧಿವಿಧಾನಗಳಷ್ಟಕ್ಕೇ ಪೂರೈಸಿ ಜಯಂತಿಯನ್ನು ಆಚರಿಸಲಾಯಿತು.
ರಾಮಾನುಜರ ಜಯಂತಿ 10 ದಿನ ವೈಭವದ ಮಹೋತ್ಸವವಾಗಿ ಆಚರಿಸಲಾಗುತ್ತಿತ್ತು. ಲೌಕ್‌ಡೌನ್ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ರಥೋತ್ಸವ ಸೇರಿದಂತೆ ರಾಮಾನುಜ ಜಯಂತಿಯ ಹಿಂದಿನ ಒಂಬತ್ತು ದಿನಗಳ ಎಲ್ಲಾ ಉತ್ಸವಗಳು, ವಾಹನೋತ್ಸವಗಳು, ಅಭಿಷೇಕ, ರಾಮಾನುಜರೇ ಸ್ಥಾನೀಕರಲ್ಲಿ ಭಿಕ್ಷೆ ಸ್ವೀಕರಿಸುತ್ತಿದ್ದ ಪ್ರತೀಕವಾಗಿ ನಡೆಯುತ್ತಿದ್ದ ಮಹತ್ವದ ಸ್ಥಾನೀಕರ ಭಿಕ್ಷಾ ಕೈಂಕರ್ಯ ಸೇವೆ, ಯತಿರಾಜಮಠದ ಅಭಿಷೇಕ ಸೇರಿದಂತೆ ಜಯಂತಿಯ ಯಾವುದೇ ವಿಶೇಷ ಸೇವೆಗಳೂ ನಡೆಯಲಿಲ್ಲ. ರಾಮಾನುಜರ ಜಯಂತಿಯ ಆಚರಣೆಯೇ ನಿತ್ಯಪೂಜಾ ನಿಯಮಗಳ ಅಭಿಷೇಕಕ್ಕೆ ಮಾತ್ರ ಸೀಮಿತವಾಯಿತು.
‘ರಾಮಾನುಜರ ಅಭಿಷೇಕದ ವೇಳೆ ಹೆಚ್ಚಿನ ಸಾವು ನೋವು ಸಂಭವಿಸದೆ ಕೊರೊನಾ ಮಾರಿ ಶೀಘ್ರ ತೊಲಗಲಿ, ಮಳೆ ಬೆಳೆಗಳಾಗಿ ದೇಶ ಸುಭಿಕ್ಷವಾಗಿರಲಿ ಜನತೆ ಸಂತೃಪ್ತಿಯಿಂದ ಜೀವನ ನಡೆಸುವಂತಾಗಲಿ’ ಎಂದು ಆಚಾರ್ಯರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು
ಭಕ್ತರ ಪ್ರವೇಶ ನಿಷೇಧದ ಜೊತೆಗೆ ತಿರುನಕ್ಷತ್ರ ಮಹೋತ್ಸವದ ಸಂಜೆ ನಡೆಯುತ್ತಿದ್ದ ಎಲ್ಲಾ ವಿಶೇಷ ಕಾರ್ಯಕ್ರಮಗಳೆಲ್ಲವನ್ನೂ ರದ್ದು ಮಾಡಲಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.