ADVERTISEMENT

ಮಳವಳ್ಳಿ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 14:01 IST
Last Updated 19 ಅಕ್ಟೋಬರ್ 2024, 14:01 IST
   

ಮಳವಳ್ಳಿ: ಮನೆಪಾಠಕ್ಕೆ ಬಂದಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದ ಅಪರಾಧಿಗೆ ಮಂಡ್ಯದ ಒಂದನೇ ತ್ವರಿತಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಮೈಸೂರು ಮೂಲದ ಕಾಂತರಾಜು (52) ಶಿಕ್ಷೆಗೆ ಒಳಗಾದ ಅಪರಾಧಿ.

2022ರ ಅಕ್ಟೋಬರ್ 11ರಂದು ಮಳವಳ್ಳಿ ಪಟ್ಟಣದ ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪಟ್ಟಣದ ಪೊಲೀಸರು ಕಾಂತರಾಜುನನ್ನು ಬಂಧಿಸಿದ್ದರು. ಅಂದಿನ ಡಿವೈಎಸ್‌ಪಿ ಎನ್.ನವೀನ್ ಕುಮಾರ್ ಹಾಗೂ ಸಿಪಿಐ ಎ.ಕೆ.ರಾಜೇಶ್ ನೇತೃತ್ವದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.

ADVERTISEMENT

ವಿಚಾರಣೆ ನಡೆಸಿದ ಮಂಡ್ಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದ್ದಾರೆ.

ಸರ್ಕಾರಿ ವಿಶೇಷ ಅಭಿಯೋಜಕ ವೆಂಕಟರಮಣ ಸೀತಾರಾಮ ಭಟ್ ಸರ್ಕಾರದ ಪರ ವಾದ ಮಂಡಿಸಿದ್ದರು.

ಘಟನೆಯ ವಿವರ: 2022ರ ಅಕ್ಟೋಬರ್ 11ರಂದು ಬೆಳಿಗ್ಗೆ ಮನೆಯಿಂದ ಟ್ಯೂಷನ್‌ಗೆ ಹೋಗಿದ್ದ 11 ವರ್ಷದ ಬಾಲಕಿ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದ ಪೋಷಕರಿಗೆ ಟ್ಯೂಷನ್ ಸೆಂಟರ್ ಪಕ್ಕದ ನಿರ್ಮಾಣ ಹಂತದ ಕಟ್ಟಡವೊಂದರ ನೀರಿನ ಸಂಪ್‌ನಲ್ಲಿ ಶವ ಪತ್ತೆಯಾಗಿತ್ತು. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿತ್ತು.

ಆರೋಪಿಯೂ ಸಹ ಅಮಾಯಕನಂತೆ ವರ್ತಿಸಿ ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದ. ಕಟ್ಟಡ ಮಾಲೀಕ ಹಾಗೂ ಶ್ವಾನದಳ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ  ತಪ್ಪೊಪ್ಪಿಕೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.