ಮಂಡ್ಯ: ‘ಪ್ರಪಂಚದಲ್ಲಿ ಮುಖವಾಡದ ಜನರನ್ನು ನೋಡುತ್ತಿದ್ದೇವೆ. ಅಧಿಕಾರ, ಹಣ ಬಂದಾಗ ಬದಲಾಗದಿದ್ದರೆ ಆತ ಒಳ್ಳೆಯ ಮನುಷ್ಯ. ಮಲಗಿದ ತಕ್ಷಣ ನಿದ್ರೆ ಬಂದರೆ ಆತನೇ ಶ್ರೀಮಂತ’ ಎಂದು ಸಂಸದ ಡಾ. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಿರಿ ಪ್ರಕಾಶನ ಮಂಡ್ಯ, ಕರ್ನಾಟಕ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಕೆ. ಚಂದ್ರಶೇಖರ್ ಅವರ 'ಮುಖವಾಡಗಳು' ಕವನ ಸಂಕಲನ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಸಮಾಜದ ಹಲವು ಸಮಸ್ಯೆಗಳಿಗೆ ವಿದ್ಯಾವಂತರು ಕಾರಣ. ಅವರ ವಿದ್ಯೆ ದೇಶ ಕಟ್ಟುವಲ್ಲಿ ಉಪಯೋಗವಾಗಬೇಕು. ಮನುಷ್ಯ ಬುದ್ಧಿವಂತರಾದರೆ ಸಾಲದು ಹೃದಯವಂತರಾಗಬೇಕು. ನಮ್ಮ ಓದು ಎಷ್ಟು ಜನರ ಮುಖದಲ್ಲಿ ನಗು ತರಿಸಿದೆ ಎಂಬುದು ಮುಖ್ಯವಾಗಬೇಕಿದೆ. ವೃತ್ತಿಯ ಜೊತೆಗೆ ಬರವಣಿಗೆ ಪ್ರವೃತ್ತಿಯಲ್ಲಿ ತೊಡಗಿರುವ ವೈದ್ಯರು ಅಪರೂಪ. ಅಂತಹ ಕೆಲಸದಲ್ಲಿ ಡಾ.ಚಂದ್ರಶೇಖರ್ ತೊಡಗಿಸಿಕೊಂಡಿರುವುದು ಮೆಚ್ಚುವ ಕೆಲಸ’ ಎಂದು ಸ್ಮರಿಸಿದರು.
‘ಇತ್ತೀಚಿನ ದಿನಗಳಲ್ಲಿ ಯಾವ ರೀತಿ ಬದುಕಬೇಕು, ವರ್ತಿಸಬೇಕು ಎಂಬುದಕ್ಕೆ ಪುಸ್ತಕ ಬರೆಯಬೇಕಾಗಿದೆ. ನಾನು ಎಂಬುದು ಅಹಂಕಾರ, ನಾವು ಎಂಬುದು ಅಲಂಕಾರ. ಮನೆಯೇ ಸಾಂತ್ವನ ಕೇಂದ್ರ, ಆದರೆ ಅವಿಭಾಜ್ಯ ಕುಟುಂಬ ಒಡೆದು ಹೋಗಿರುವುದೇ ಸಮಸ್ಯೆಗಳಿಗೆ ಕಾರಣವಾಗಿದೆ. ಕೃಷಿ ಎಂಬುದು ಸಂಸ್ಕೃತಿ ಲಾಂಛನವಾಗಬೇಕು. ಬದುಕು ಎಂದರೆ ಸಂಪತ್ತಿನಲ್ಲಿ ಸರಳತೆ, ಸಂಪತ್ತಿಗೆ ಬೆಲೆ ಕಟ್ಟಬಹುದು, ಸರಳತೆಗೆ ಬೆಲೆ ಕಟ್ಟಲಾಗುವುದಿಲ್ಲ’ ಎಂದು ತಿಳಿಸಿದರು.
ಕೃತಿ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಡಿ.ಎನ್. ಶ್ರೀಪಾದು, ‘ಡಾ.ಚಂದ್ರಶೇಖರ್ ಅವರು ತಮ್ಮಲ್ಲಿ ಬರುವ ರೋಗಿಗಳ ಭಾವನೆಗಳನ್ನು ಅರಿತು ಅದಕ್ಕೆ ಕಾವ್ಯ ರೂಪ ಕೊಟ್ಟಿದ್ದು, ವೈವಿಧ್ಯಮಯ ಕವನಗಳ ಮೂಲಕ ಜನರ ಮುಖವಾಡಗಳನ್ನು ಕಳಚಿದ್ದಾರೆ’ ಎಂದು ಶ್ಲಾಘಿಸಿದರು.
ಕೃತಿ ಕರ್ತೃ ಡಾ.ಚಂದ್ರಶೇಖರ ಮಾತನಾಡಿ, ‘ನನ್ನ ಅರಿವಿನ ಪರಿಧಿಗೆ ಬಂದ ವಿಷಯಗಳಿಗೆ ಅಕ್ಷರ ರೂಪ ನೀಡಿದ್ದೇನೆ. ಪಾಸ್ ಬುಕ್, ಫೇಸ್‌ಬುಕ್, ವ್ಯಾಟ್ಸ್‌ಆ್ಯಪ್‌ಗಳ ನಡುವೆ ಬುಕ್ ಸಂಸ್ಕೃತಿ ನಶಿಸುತ್ತಿದೆ ಎಂದು ವಿಷಾದಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ಸಾಹಿತಿ ಎಚ್.ಎಸ್. ಮುದ್ದೇಗೌಡ, ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ, ನಿವೃತ್ತ ಅಧೀಕ್ಷಕ ಡಾ.ಎನ್. ರಾಮಲಿಂಗೇಗೌಡ, ಬಿಜಿಎಸ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಆದರ್ಶ, ಡಾ. ಮಾದೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.