ADVERTISEMENT

ಮಂಡ್ಯ ಕೃಷಿ ವಿ.ವಿ ಸ್ಥಾಪನೆಗೆ ವರದಿ ಸಲ್ಲಿಕೆ

ಮೈಸೂರು ಕಂದಾಯ ವಿಭಾಗಕ್ಕೆ ನ್ಯಾಯ ಕಲ್ಪಿಸಲು ತಜ್ಞರ ಶಿಫಾರಸು

ಸಿದ್ದು ಆರ್.ಜಿ.ಹಳ್ಳಿ
Published 11 ಜುಲೈ 2024, 0:29 IST
Last Updated 11 ಜುಲೈ 2024, 0:29 IST
ಮಂಡ್ಯದ ವಿ.ಸಿ.ಫಾರಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಹೊರನೋಟ (ಸಾಂದರ್ಭಿಕ ಚಿತ್ರ)
ಮಂಡ್ಯದ ವಿ.ಸಿ.ಫಾರಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಹೊರನೋಟ (ಸಾಂದರ್ಭಿಕ ಚಿತ್ರ)   

ಮಂಡ್ಯ: ಜಿಲ್ಲೆಯ ವಿಶ್ವೇಶ್ವರಯ್ಯ ಕೆನಲ್‌ ಫಾರಂನಲ್ಲಿ (ವಿ.ಸಿ. ಫಾರಂ) ನೂತನವಾಗಿ ‘ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ’ (ಸಮಗ್ರ ವಿ.ವಿ) ಸ್ಥಾಪಿಸಲು ತಜ್ಞರ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಕೃಷಿ ವಿವಿ ಸ್ಥಾಪಿಸುವುದಾಗಿ 2024–25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಬಳಿಕ ಮಾರ್ಚ್‌ 15ರಂದು ತಜ್ಞರ ಸಮಿತಿ ರಚಿಸಲಾಗಿತ್ತು. ವಿಶ್ರಾಂತ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಆರು ತಜ್ಞರು ಸಮಿತಿಯಲ್ಲಿದ್ದರು. ಸಮಿತಿಯು ಮೂರೂವರೆ ತಿಂಗಳೊಳಗೆ 130 ಪುಟಗಳ ಸಮಗ್ರ ವರದಿ ತಯಾರಿಸಿ, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರಿಗೆ ನೀಡಿದೆ.  

ಮಂಡ್ಯದ ನೂತನ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಮಂಡ್ಯ, ಮೈಸೂರು, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಸೇರ್ಪಡೆ ಮಾಡಬೇಕು. ಬೆಂಗಳೂರು ಕೃಷಿ ವಿ.ವಿ, ಬಾಗಲಕೋಟೆ ತೋಟಗಾರಿಕೆ ವಿ.ವಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿ.ವಿ.ಯಿಂದ ಕೆಲವು ಸಂಸ್ಥೆಗಳನ್ನು ಹೊಸ ವಿ.ವಿ.ಗೆ ವಿಲೀನಗೊಳಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. 

ADVERTISEMENT

ಸಮಗ್ರ ವಿ.ವಿ ಅಗತ್ಯ:

ರಾಜ್ಯದಲ್ಲಿ ಈಗಾಗಲೇ ಒಟ್ಟು 6 ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿವೆ. ರಾಜ್ಯದಲ್ಲಿ ಶೇ 85ರಷ್ಟು ಭೂಹಿಡುವಳಿದಾರರು ಸಣ್ಣ, ಅತಿ ಸಣ್ಣ ರೈತರಾಗಿದ್ದು, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ‘ಸಮಗ್ರ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ’ ಸ್ಥಾಪನೆಯಿಂದ ಸಾಧ್ಯ ಎಂದು ವರದಿ ತಿಳಿಸಿದೆ.  

ಮೈಸೂರು ವಿಭಾಗಕ್ಕೆ ನ್ಯಾಯ:

‘ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಮೈಸೂರು ವಿಭಾಗವನ್ನು ಹೊರತುಪಡಿಸಿ ಉಳಿದ ಎಲ್ಲ ವಿಭಾಗಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿವಿಗಳಿವೆ. ಮೈಸೂರು ವಿಭಾಗದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿವಿ ಇಲ್ಲ. ಹೀಗಾಗಿ, ಮಂಡ್ಯದಲ್ಲಿ ಪ್ರತ್ಯೇಕ ವಿ.ವಿ ಸ್ಥಾಪಿಸುವುದರಿಂದ ರಾಜ್ಯದಾದ್ಯಂತ ಸಮಾನತೆ ಸಾಧಿಸಿದಂತಾಗುತ್ತದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಪದವಿಗೆ ಹೆಚ್ಚಿದ ಬೇಡಿಕೆ:

ರಾಜ್ಯದಲ್ಲಿ ಒಟ್ಟು ಆರು ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಅಡಿಯಲ್ಲಿ, 39 ಕೃಷಿ, ತೋಟಗಾರಿಕೆ ಹಾಗೂ ಪಶುವೈದ್ಯಕೀಯ ಕಾಲೇಜುಗಳಿವೆ. ಎಲ್ಲ ಕಾಲೇಜುಗಳಲ್ಲಿ ಒಟ್ಟು 4 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. 

2013ರಿಂದ ರಾಜ್ಯದಲ್ಲಿ ಪ್ರತಿ ವರ್ಷ ಕೃಷಿ ಮತ್ತು ಕೃಷಿ ಸಂಬಂಧಿತ ಪದವಿಗಳಿಗೆ ಪ್ರವೇಶ ಪಡೆಯಲು ಬಯಸುವವರು ಹೆಚ್ಚುತ್ತಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾಕಾಂಕ್ಷಿಗಳಾಗಿರುತ್ತಾರೆ. ಅವರಿಗೆ ‘ಸಾಮಾಜಿಕ ನ್ಯಾಯ’ ಒದಗಿಸಲು ಹೊಸ ‘ಸಮಗ್ರ ವಿವಿ’ ಅಗತ್ಯವಿದೆ ಎಂದು ತಜ್ಞರು ವರದಿ ನೀಡಿದ್ದಾರೆ. 

ಮಂಡ್ಯದ ನೂತನ ‘ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ’ ಸ್ಥಾಪನೆಗೆ ಸಂಬಂಧಿಸಿದ ವರದಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌ ನೇತೃತ್ವದ ತಜ್ಞರ ಸಮಿತಿಯು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರಿಗೆ ಸಲ್ಲಿಸಿತು  
ತಜ್ಞರಿಂದ ವರದಿ ಸಲ್ಲಿಕೆಯಾಗಿದೆ. ಕಾರ್ಯದರ್ಶಿ ಮತ್ತು ಕೃಷಿ ವಿ.ವಿ ಕುಲಪತಿಗಳೊಂದಿಗೆ ಚರ್ಚಿಸಿ ಶೀಘ್ರ ನೂತನ ಮಂಡ್ಯ ಕೃಷಿ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ
ಎನ್‌.ಚಲುವರಾಯಸ್ವಾಮಿ ಕೃಷಿ ಸಚಿವ

₹285 ಕೋಟಿ ಅನುದಾನ ಅಗತ್ಯ’

‘1931ರಲ್ಲಿ ಸ್ಥಾಪನೆಯಾದ ಮಂಡ್ಯದ ವಿ.ಸಿ.ಫಾರಂ ಒಟ್ಟು 632 ಎಕರೆ ಪ್ರದೇಶ ಒಳಗೊಂಡಿದೆ. ಮಂಡ್ಯದ ನೂತನ ‘ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ’ಕ್ಕೆ ವಿ.ಸಿ. ಫಾರಂನಲ್ಲಿ ಪ್ರಸ್ತುತ ಲಭ್ಯವಿರುವ ಕಟ್ಟಡಗಳ ಜೊತೆಗೆ ಹೊಸದಾಗಿ ಆಡಳಿತಾತ್ಮಕ ಮುಖ್ಯ ಕಟ್ಟಡ ಟೆಕ್ನಾಲಜಿ ಹಬ್‌ ವಸತಿಗೃಹಗಳು ತರಗತಿ ಕೊಠಡಿಗಳು ಪ್ರಯೋಗಾಲಯ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಅಂದಾಜು ₹162 ಕೋಟಿ ಅಗತ್ಯವಿದೆ’ ಎಂದು ತಜ್ಞರು ತಿಳಿಸಿದ್ದಾರೆ. ‘ಗಣಕಯಂತ್ರ ಪ್ರಯೋಗಾಲಯ ಉಪಕರಣಗಳು ಪೀಠೋಪಕರಣಗಳು ವಾಹನ ಖರೀದಿಸಲು ಅಂದಾಜು ₹45 ಕೋಟಿ ಅಗತ್ಯವಿದ್ದು ಒಟ್ಟಾರೆ ₹285 ಕೋಟಿ ಬೇಕಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.