ಮದ್ದೂರು: ಪಟ್ಟಣದ ತಾಲ್ಲೂಕು ಕಚೇರಿಯ ಆರ್‌ಆರ್‌ಟಿ ವಿಭಾಗದ ಶಿರಸ್ತೇದಾರರು ಖಾತೆ ಮಾಡಿಕೊಡಲು ಎರಡನೇ ಬಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿರುವ ರೈತರೊಬ್ಬರು, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ದಯಾಮರಣ ಕೋರಿ ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನ ಕಬ್ಬಾರೆ ಗ್ರಾಮದ ಎಳೆಮೊಗಯ್ಯ ಅವರ ಪುತ್ರ ಸಿದ್ದಯ್ಯ ಮನವಿ ಸಲ್ಲಿಸಿದವರು. ಬೇಡಿಕೆ ಇಟ್ಟ ಧ್ವನಿ ಇರುವ ಸಿ.ಡಿಯನ್ನೂ ತಹಶೀಲ್ದಾರ್‌ಗೆ ನೀಡಿದ್ದಾರೆ.
ಸಿದ್ದಯ್ಯ ಅವರಿಗೆ ತಾಲ್ಲೂಕಿನ ಕಸಬಾ ಹೋಬಳಿ ಹಳ್ಳಿಕೆರೆ ಗ್ರಾಮದ ಸರ್ವೇ ನಂ 56/2 ಮತ್ತು 56/3 ರ 4 ಎಕರೆ 2 ಗುಂಟೆ ಜಮೀನು ಮೋಸದಿಂದ ಕೈತಪ್ಪಿತ್ತು. ಈ ಸಂಬಂಧ 2017ರಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಮೂಲ ದಾಖಲೆಗಳನ್ನು ಪರಿಶೀಲಿಸಿ, ಸಿದ್ದಯ್ಯ ಪರ ಆದೇಶವಾಗಿತ್ತು.
‘ಜಿಲ್ಲಾಧಿಕಾರಿ ಆದೇಶದಂತೆ ಖಾತೆ ಮಾಡಿಕೊಡಬೇಕಿತ್ತು. ಈ ಸಂಬಂಧ ಖಾತೆ ಬದಲಾವಣೆ ಮಾಡಿ, ನನ್ನ ಹೆಸರಿಗೆ ಪಹಣಿ (ಆರ್‌ಟಿಸಿ) ತೋರಿಸಲು ಶಿರಸ್ತೇದಾರ ಜಯರಾಂ ಮೂರ್ತಿ ಎಂಬುವರು ₹ 80 ಸಾವಿರ ಲಂಚ ಪಡೆದು, ಇನ್ನೂ ₹ 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಲಸವನ್ನೂ ಮಾಡಿಕೊಡದೆ ಮೋಸ ಮಾಡಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾಡಳಿತ ನ್ಯಾಯ ದೊರಕಿಸಿಕೊಡಬೇಕು. ಜಮೀನು ಕೈತಪ್ಪಿ ಹೋಗುತ್ತಿರುವುದರಿಂದ ಮನನೊಂದು ಆತ್ಮಹತ್ಯೆಗೆ ಸಿದ್ಧನಾಗಿದ್ದು, ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿದ್ದೇನೆ’ ಎಂದು ಸಿದ್ದಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.