ADVERTISEMENT

ಮಂಡ್ಯ | ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಎತ್ತಿನ ಗಾಡಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 12:55 IST
Last Updated 23 ಅಕ್ಟೋಬರ್ 2024, 12:55 IST
<div class="paragraphs"><p>ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಎತ್ತಿನ ಗಾಡಿ ರಕ್ಷಣೆ</p></div>

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಎತ್ತಿನ ಗಾಡಿ ರಕ್ಷಣೆ

   

ಶ್ರೀರಂಗಪಟ್ಟಣ: ಲೋಕಪಾವನಿ ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದ ಖಾಲಿ ಎತ್ತಿನ ಗಾಡಿಯನ್ನು ಪೊಲೀಸರು ಹಾಗೂ ಸ್ಥಳೀಯರು ಬುಧವಾರ ರಕ್ಷಿಸಿದರು.

ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ರಾಜು ಅವರಿಗೆ ಸೇರಿದ ಖಾಲಿ ಎತ್ತಿನ ಗಾಡಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಗಾಡಿಯನ್ನು ತೊಳೆಯಲು ರಾಜು ಬಾಬುರಾಯನಕೊಪ್ಪಲು ಬಳಿ ಹರಿಯುವ ಲೋಕಪಾವನಿ ನದಿಗೆ ಎತ್ತುಗಳ ಸಹಿತ ಗಾಡಿಯನ್ನು ಇಳಿಸಿದಾಗ ಈ ಘಟನೆ ನಡೆಯಿತು.

ADVERTISEMENT

ನೀರಿನ ಸೆಳೆತ ಹೆಚ್ಚಾದುದನ್ನು ಗಮನಿಸಿದ ರಾಜು ತಕ್ಷಣ ಎತ್ತುಗಳ ಹಗ್ಗಗಳನ್ನು ಬಿಚ್ಚಿದರು. ಎತ್ತುಗಳು ಈಜಿ ದಡ ಸೇರಿದವು. ರಾಜು ಕೂಡ ಈಜಿಕೊಂಡು ದಡಕ್ಕೆ ಬಂದರು. ಆದರೆ ಗಾಡಿ ಸುಮಾರು 100 ಮೀಟರ್‌ ದೂರ ಕೊಚ್ಚಿಕೊಂಡು ಹೋಗಿ ಸೇತುವೆ ಸಿಕ್ಕಿಕೊಂಡಿತ್ತು.

ಅಕ್ಕಪಕ್ಕದ ಗ್ರಾಮಗಳ ಜನರು ಗಾಡಿಯನ್ನು ದಡಕ್ಕೆ ತರಲು ಯತ್ನಿಸಿ ವಿಫಲರಾದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ತರಿಸಿ ಗಾಡಿಯನ್ನು ಸುರಕ್ಷಿತವಾಗಿ ನದಿಯಿಂದ ಮೇಲೆ ಎತ್ತಿದರು.

ನಾಗಮಂಗಲ ತಾಲ್ಲೂಕಿನಲ್ಲಿ ಹುಟ್ಟುವ ಲೋಕಪಾವನಿ ನದಿ ಕಳೆದ ಒಂದು ವಾರದಿಂದ ಮೈದುಂಬಿ ಹರಿಯುತ್ತಿದೆ. ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿ ಬೀಳುವ ಮಳೆ ನೀರು ಈ ನದಿಗೆ ಸೇರುತ್ತಿದೆ. ದಿನದಿಂದ ದಿನಕ್ಕೆ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.