ADVERTISEMENT

ಮಂಡ್ಯ | ಹಂಪ್ಸ್‌ ತೆರವು: ಹೆಚ್ಚಾಯ್ತು ಅಪಘಾತ, ವಾಹನ ಸವಾರರ ಪ್ರಾಣಕ್ಕೆ ಸಂಚಕಾರ

ಆರ್.ಜಿತೇಂದ್ರ
Published 8 ಡಿಸೆಂಬರ್ 2023, 5:28 IST
Last Updated 8 ಡಿಸೆಂಬರ್ 2023, 5:28 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಕಲ್ಲಿಕೊಪ್ಪಲು ಅಂಡರ್‌ಪಾಸ್ ಸಮೀಪ ಇದ್ದ ಹಂಪ್ಸ್‌ ಅನ್ನು ತೆರವುಗೊಳಿಸಿರುವುದು</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಕಲ್ಲಿಕೊಪ್ಪಲು ಅಂಡರ್‌ಪಾಸ್ ಸಮೀಪ ಇದ್ದ ಹಂಪ್ಸ್‌ ಅನ್ನು ತೆರವುಗೊಳಿಸಿರುವುದು

   

ಮಂಡ್ಯ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿನ ಸರ್ವೀಸ್ ರಸ್ತೆಯಲ್ಲಿ ಹಾಕಲಾಗಿದ್ದ ಅವೈಜ್ಞಾನಿಕ ಹಂಪ್ಸ್‌ಗಳನ್ನು ( ರಸ್ತೆ ಉಬ್ಬು) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಚೆಗೆ ತೆರವುಗೊಳಿಸಿದ್ದು, ಇದರಿಂದ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ.

ಹೆದ್ದಾರಿಯ ಆರು ಪಥಗಳ ಎಕ್ಸ್‌ಪ್ರೆಸ್‌ವೇಗೆ ಪೂರಕವಾಗಿ ಎರಡೂ ಬದಿಗಳಲ್ಲಿ ತಲಾ ಎರಡು ಪಥಗಳ ಸರ್ವೀಸ್‌ ರಸ್ತೆಯನ್ನು ಪ್ರಾಧಿಕಾರವು ನಿರ್ಮಾಣ ಮಾಡಿದೆ. ಆದರೆ ಈ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಿಲ್ಲ. ಅಪಘಾತಗಳ ನಿಯಂತ್ರಣಕ್ಕಾಗಿ ಅಂಡರ್‌ಪಾಸ್‌ಗಳ ಬಳಿ ಹಂಪ್ಸ್‌ಗಳನ್ನು ಹಾಕಲಾಗಿತ್ತು. ಆದರೆ ಅತಿ ಎತ್ತರದ ಉಬ್ಬುಗಳ ನಿರ್ಮಾಣದಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಈ ಹಂಪ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಓಡಾಟದ ವೇಗ ಹೆಚ್ಚಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ.

ADVERTISEMENT

ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಬಳಿಯ ಅಂಡರ್‌ಪಾಸ್‌ನಲ್ಲಿ ಕಳೆದ ವಾರವೊಂದರಲ್ಲಿಯೇ ನಾಲ್ಕಾರು ಅಪಘಾತಗಳು ಸಂಭವಿಸಿವೆ. ಈ ಅಪಘಾತದ ಭೀಕರ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಗಳಲ್ಲಿ ಸೆರೆಯಾಗಿವೆ. ಅಂಡರ್‌ಪಾಸ್‌ನ ಒಂದು ಬದಿಯಿಂದ ಇನ್ನೊಂದು ಬದಿಗೆ ವೇಗವಾಗಿ ಬಂದ ವಾಹನ ಹಾಗೂ ಸರ್ವೀಸ್ ರಸ್ತೆಯಲ್ಲಿ ನೇರವಾಗಿ ಸಾಗುವ ವಾಹನಗಳು ಪರಸ್ಪರ ಡಿಕ್ಕಿ ಆಗುತ್ತಿರುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ. ಇದರಂತೆಯೇ ಇನ್ನೂ ಹಲವು ಅಂಡರ್‌ಪಾಸ್‌ಗಳ ಬಳಿಯೂ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.

‘ಅವೈಜ್ಞಾನಿಕವಾಗಿ ಹಾಕಲಾದ ಹಂಪ್ಸ್‌ಗಳನ್ನು ತೆಗೆದು ಅಗತ್ಯ ಇರುವ ಕಡೆ ವೈಜ್ಞಾನಿಕ ಮಾದರಿಯಲ್ಲಿ ಹಂಪ್ಸ್‌ಗಳನ್ನು ಹಾಕಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ಆದರೆ ಅಂಡರ್‌ಪಾಸ್‌ಗಳಲ್ಲಿ ಇಳಿಜಾರು ಇರುವ ಕಡೆಗಳಲ್ಲಿಯೇ ಹಂಪ್ಸ್‌ಗಳನ್ನು ಕಿತ್ತೊಗೆಯಲಾಗಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

‘ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಿತ್ಯ ಅಪಘಾತಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ಅದರಲ್ಲಿಯೂ ಬೈಕ್‌ ಸವಾರರು ಹಾಗೂ ಸ್ಥಳೀಯರು ರಸ್ತೆ ದಾಟುವಾಗ ಅಪಘಾತಕ್ಕೆ ಒಳಗಾಗುವುದು ಹೆಚ್ಚು. ಇಂತಹ ಅಪಘಾತ ವಲಯಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್‌ ಹಾಕಬೇಕು. ಜಿಗ್‌ಜ್ಯಾಗ್‌ ಮಾದರಿಯ ಬ್ಯಾರಿಕೇಡ್‌ಗಳನ್ನು ಇಡಬೇಕು. ಜಿಲ್ಲಾ ಪೊಲೀಸರು ಈ ಬಗ್ಗೆ ಗಮನಹರಿಸಬೇಕು’ ಎನ್ನುತ್ತಾರೆ ಟಿ.ಎಂ. ಹೊಸೂರು ಬಳಿಯ ಟಿಪ್ಪರ್ ಚಾಲಕ ಚಂದನ್‌.

ಈ ಕುರಿತು ಪ್ರತಿಕ್ರಿಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದೂರವಾಣಿ ಮೂಲಕ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಟೋಲ್‌ ಕಟ್ಟದೇ ಸವಾರಿ

ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಹೆದ್ದಾರಿ ಪ್ರಾಧಿಕಾರವು ಶ್ರೀರಂಗಪಟ್ಟಣದ ಗಣಂಗೂರು ಸಮೀಪದ ಟೋಲ್‌ ಪ್ಲಾಜಾದಲ್ಲಿ ಶುಲ್ಕ ವಸೂಲಿ ಮಾಡುತ್ತಿದೆ. ಕಳೆದ ಆರು ತಿಂಗಳಿಂದ ಇಲ್ಲಿ ಟೋಲ್ ಸಂಗ್ರಹ ನಡದಿದ್ದು, ದುಬಾರಿ ಶುಲ್ಕದ ಬಗ್ಗೆ ಪ್ರಯಾಣಿಕರು ದೂರುತ್ತಾರೆ. ಹೀಗಾಗಿ ಸಾಕಷ್ಟು ವಾಹನ ಸವಾರರು ಟೋಲ್‌ ಹೊರೆ ತಪ್ಪಿಸಿಕೊಳ್ಳಲು ಸರ್ವೀಸ್‌ ರಸ್ತೆಯಲ್ಲಿಯೇ ಚಲಿಸುತ್ತಿವೆ. ಕೆಎಸ್‌ಆರ್‌ಟಿಸಿಯ ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಹೊರತುಪಡಿಸಿ ಸಾಮಾನ್ಯ ಸಾರಿಗೆಯ ಬಸ್‌ಗಳೂ ಸರ್ವೀಸ್ ರಸ್ತೆಯಲ್ಲಿಯೇ ಓಡುತ್ತಿವೆ. ಹೀಗಾಗಿ ಎಕ್ಸ್‌ಪ್ರೆಸ್‌ವೇನಷ್ಟೇ ವಾಹನ ದಟ್ಟಣೆಯು ಸರ್ವೀಸ್ ರಸ್ತೆಗಳಲ್ಲಿ ಇದೆ. ಈ ಕಾರಣಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲಿದ್ದು, ಸ್ಥಳೀಯರು ರಸ್ತೆ ದಾಟುವುದಕ್ಕೆ ಅಂಜುತ್ತಿದ್ದಾರೆ.

ಹೆದ್ದಾರಿ ನಿರ್ಮಾಣವೇ ಅವೈಜ್ಞಾನಿಕ ಮಾದರಿಯ ದ್ದಾಗಿದೆ. ಕಳೆದ ಆರು ತಿಂಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಗಮನ ಹರಿಸಿದ್ದು, ಅಗತ್ಯವಾದ ಕ್ರಮ ಕೈಗೊಳ್ಳುತ್ತೇವೆ.
-ಎನ್‌. ಚೆಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ
ಸರ್ವೀಸ್‌ ರಸ್ತೆಯ ಅಂಡರ್‌ ಪಾಸ್‌ಗಳಲ್ಲಿ ಹಂಪ್ಸ್‌ ತೆಗೆದ ಕಾರಣ ವಾಹನಗಳ ವೇಗ ಹೆಚ್ಚಿದ್ದು, ಇದರಿಂದ ಅಪಘಾತಗಳ ಪ್ರಮಾಣವೂ ಹೆಚ್ಚಿದೆ. ಅಗತ್ಯ ಇರುವೆಡೆ ಹಂಪ್ಸ್‌, ಬ್ಯಾರಿಕೇಡ್‌ ಅಳವಡಿಸಬೇಕು.
-ಚಂದನ್‌, ಟಿಪ್ಪರ್ ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.