ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 28 ಉಪಸಮಿತಿಗಳಿಗೆ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಪರಿಗಣಿಸದೇ ನಮ್ಮನ್ನು ಹೊರಗಿಡಲಾಗಿದೆ. ಈ ನಡೆಯನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ’ ಎಂದು ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪರಕನಹಳ್ಳಿ ಹೇಳಿದರು.
‘ನಮ್ಮ ಒಕ್ಕೂಟದ ಮನವಿಯನ್ನು ಪರಿಗಣಿಸದೇ ತಾತ್ಸಾರ ಮುಂದುವರಿಸಿದರೆ, ಸಮ್ಮೇಳನಕ್ಕೆ 250ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲದಿಂದ ನೀಡಲಾಗುತ್ತಿರುವ ತಲಾ ₹5 ಸಾವಿರ ವಂತಿಗೆಯನ್ನು ನಿಲ್ಲಿಸುತ್ತೇವೆ. ಸಮ್ಮೇಳನವನ್ನು ಬಹಿಷ್ಕರಿಸುತ್ತೇವೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
‘ಸಮ್ಮೇಳನದ ಪ್ರಚಾರ ರಥಯಾತ್ರೆಯಲ್ಲಿ ಪಂಚಾಯಿತಿ ಸಿಬ್ಬಂದಿ ಮತ್ತು ಸದಸ್ಯರು ಪಾಲ್ಗೊಳ್ಳುತ್ತಿರುವುದನ್ನು ನಿಲ್ಲಿಸುತ್ತೇವೆ. ಬೇಲೂರು, ಬೂದನೂರು ಹಾಗೂ ಉಮ್ಮಡಹಳ್ಳಿ ಪಂಚಾಯಿತಿ ವ್ಯಾಪ್ತಿಯ ಜಾಗದಲ್ಲಿ ನಡೆಯಲಿರುವ ಸಮ್ಮೇಳನವನ್ನು ನಗರ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳುವಂತೆ ಧರಣಿ ನಡೆಸುತ್ತೇವೆ’ ಎಂದು ಹೇಳಿದರು.
ಸಮ್ಮೇಳನದಲ್ಲಿ ಪ್ರತಿಭಟನೆಯ ಎಚ್ಚರಿಕೆ
ಮಂಡ್ಯ: ‘1995ರ ನಂತರ ಆರಂಭವಾದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ಕೂಡಲೇ ಅನುದಾನ ನೀಡಬೇಕು. ಸ್ಪಂದಿಸದೇ ಹೋದರೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಎಚ್ಚರಿಕೆ ನೀಡಿದರು.
ಸಾಹಿತ್ಯ ಸಮ್ಮೇಳನಕ್ಕೆ ₹30 ಕೋಟಿ ಅನುದಾನ ನೀಡುವುದಕ್ಕಿಂತ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಒದಗಿಸುವುದು ಒಳ್ಳೆಯ ಕೆಲಸ. ಕನ್ನಡ ಶಾಲೆಯನ್ನು ಉಳಿಸುವುದು ನಿಜವಾದ ಕನ್ನಡ ಕಟ್ಟುವ ಕೆಲಸ. ಎಲ್ಲ ಸರ್ಕಾರಗಳು ಕೊಟ್ಟ ಮಾತು ತಪ್ಪಿವೆ. ಈಗಾಗಲೇ ನ.1ರಂದು ಕನ್ನಡ ರಾಜ್ಯೋತ್ಸವ ದಿನದಂದು ‘ಕರಾಳ ದಿನ’ ಆಚರಿಸಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಸಮ್ಮೇಳನಕ್ಕೆ ಬಾರದೇ ಪ್ರತಿಭಟಿಸುತ್ತೇವೆ ಎಂದರು.
‘ನಮ್ಮ ಕನ್ನಡ ಶಾಲೆ ಉಳಿಸಿ’ ಅಭಿಯಾನದಡಿ ಶಾಲಾ–ಕಾಲೇಜುಗಳಿಗೆ ಅನುದಾನ ಪಡೆಯುವ ಉದ್ದೇಶದಿಂದ ರಾಜ್ಯಮಟ್ಟದ ಸಮಾವೇಶವನ್ನು ನ.22ರಂದು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ ಭವನದಲ್ಲಿ ಹಮ್ಮಿಕೊಂಡಿದ್ದೇವೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಮಾವೇಶ ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.