ಮಂಡ್ಯ: ‘ಮುಖ್ಯಮಂತ್ರಿ ಹಾಗೂ ಸಚಿವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮನೆಗೆ ಬರಬೇಕು, ನಾವು ಅವರ ಮನೆಗೆ ಹೋಗುವುದಲ್ಲ’ ಎಂಬ ಮಹೇಶ ಜೋಶಿ ಅವರ ಹೇಳಿಕೆಯು ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಸಾಹಿತಿಗಳ ಸಭೆಯಲ್ಲಿ ವಾಗ್ವಾದವನ್ನು ಸೃಷ್ಟಿಸಿತ್ತು.
87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಜೋಶಿ, ‘ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕಸಾಪ ಅಧ್ಯಕ್ಷರ ಮನೆಗೆ ಕಾರು ಕಳುಹಿಸಿ ಕರೆಯಿಸಿಕೊಳ್ಳುತ್ತಿದ್ದರು. ಈಗ ಅಧ್ಯಕ್ಷರು ಮುಖ್ಯಮಂತ್ರಿ ಹಾಗೂ ಸಚಿವರ ಮನೆ ಬಾಗಿಲು ಕಾಯುವುದು ಸರಿಯೇ’ ಎಂದು ಪ್ರಶ್ನಿಸಿದರು.
ಅವರ ಮಾತುಗಳಿಗೆ ನೆರೆದಿದ್ದ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದರು. ಅದರ ಬೆನ್ನಿಗೇ ಪ್ರೊ.ಜಯಪ್ರಕಾಶಗೌಡರು ಜೋಶಿಯವರ ಕೈಯಲ್ಲಿದ್ದ ಮೈಕ್ ಅನ್ನು ಕಸಿದುಕೊಳ್ಳಲು ಮುಂದಾದರು. ಕೂಡಲೇ ಮಧ್ಯೆ ಪ್ರವೇಶಿಸಿದ ಸಚಿವ ಎನ್.ಚಲುವರಾಯಸ್ವಾಮಿಯವರು ಸಮಾಧಾನ ಪಡಿಸಿ, ಮತ್ತೆ ಜೋಶಿಯವರಿಗೆ ಮೈಕ್ ಕೊಟ್ಟು ಮಾತನಾಡಲು ಅವಕಾಶ ನೀಡಿದರು.
ನಂತರ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ವಿಶ್ವೇಶ್ವರಯ್ಯನವರ ಮೊಮ್ಮಗಳ ಹೆಸರನ್ನು ಪ್ರಸ್ತಾಪಿಸುತ್ತೀರಿ, ಮಂಡ್ಯದಲ್ಲಿ ಮೇರು ಸಾಹಿತಿಗಳ ಮೊಮ್ಮಕ್ಕಳಿಲ್ಲವೇ? ಪರಿಷತ್ತಿನ ಅಧ್ಯಕ್ಷ ಸ್ಥಾನ ಸಾಂವಿಧಾನಿಕ ಹುದ್ದೆಯಲ್ಲ, ಅದು ಸಾಹಿತ್ಯ ಪರಿಚಾರಕ ಹುದ್ದೆ. ಪರಿಷತ್ತಿನ ಮಾಜಿ ಅಧ್ಯಕ್ಷ, ಮದ್ದೂರಿನ ದೇಶಹಳ್ಳಿ ಜಿ.ನಾರಾಯಣ ಅವರಂತೆ ಮಾದರಿಯಾಗಿರಬೇಕು. ಅದನ್ನು ಬಿಟ್ಟು, ಅಧ್ಯಕ್ಷರಿಗೆ ಪ್ರತಿಯೊಬ್ಬರೂ ಬೆಲೆ ಕೊಡಬೇಕು, ನೀವೇ ನಮ್ಮ ಬಳಿಗೆ ಬರಬೇಕೆಂಬ ಧೋರಣೆ ಸರಿಯಲ್ಲ’ ಎಂದು ಪ್ರತಿಪಾದಿಸಿದರು.
‘ಸಮ್ಮೇಳನದಲ್ಲಿ ಪ್ರಕಟವಾಗಲಿರುವ 87 ಪುಸ್ತಕಗಳ ಹಿಂಬದಿಯ ಪುಟದಲ್ಲಿ ಪುಸ್ತಕ ಹಾಗೂ ಲೇಖಕರ ಪರಿಚಯವಿರಬೇಕೇ ಹೊರತು, ಪರಿಷತ್ತಿನ ಅಧ್ಯಕ್ಷರ ಪರಿಚಯ, ಭಾವಚಿತ್ರವಲ್ಲ. ಸಮ್ಮೇಳನದ ಪ್ರಚಾರದ ಫ್ಲೆಕ್ಸ್, ಬೋರ್ಡ್‌ಗಳಲ್ಲಿ ಸಾಹಿತಿಗಳ, ಸಮ್ಮೇಳನದ ಅಧ್ಯಕ್ಷರ ಭಾವಚಿತ್ರವಿರಬೇಕು. ಬೇರೆ ಯಾರದ್ದೋ ಭಾವಚಿತ್ರಗಳು ವಿಜೃಂಭಿಸುವುದು ಸೂಕ್ತವಲ್ಲ’ ಎಂದರು.
‘ಸಮ್ಮೇಳನಕ್ಕೆ ಲಕ್ಷಲಕ್ಷ ಜನರನ್ನು ಕರೆತರುವುದಾಗಿ ಜೋಶಿ ಹೇಳಿದ್ದಾರೆಂದು ಹೇಳಿಕೆ ನೀಡಿದ್ದಕ್ಕೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿರುವುದು ಸರಿಯೇ’ ಎಂದು ಸಾಹಿತಿ ಜಿ.ಟಿ. ವೀರಪ್ಪ ಪ್ರಶ್ನಿಸಿದರು. ನಿವೃತ್ತ ಪ್ರಾಧ್ಯಾಪಕ ಎಸ್.ಬಿ.ಶಂಕರಗೌಡರೂ ಅವರಿಗೆ ದನಿಗೂಡಿಸಿದರು.
‘ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿಚಾರವು ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯಾಗಬೇಕು. ಆದರೆ, ಕಸಾಪ ಅಧ್ಯಕ್ಷರು ಸಾರ್ವಜನಿಕವಾಗಿ ಯಾರದ್ದೋ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರೆ’ ಎಂದು ಮತ್ತೊಮ್ಮೆ ಪ್ರೊ.ಜಯಪ್ರಕಾಶಗೌಡ ಅಸಮಾಧಾನ ವ್ಯಕ್ತಪಡಿಸಿದರು.
‘ಹಾವೇರಿ ಮಾದರಿಯಲ್ಲಿ ಸಮ್ಮೇಳನವನ್ನು ಮಾಡುವುದಾಗಿ ಹೇಳುತ್ತೀರಿ. ಹಾಗೆಂದರೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ಸಾಹಿತಿ ಬೆಳ್ಳೂರು ವೆಂಕಟಪ್ಪ ಪಟ್ಟುಹಿಡಿದರು.
ಈ ಎಲ್ಲ ಆಕ್ಷೇಪಗಳಿಗೆ ಸಮಜಾಯಿಷಿ ನೀಡಲು ಮುಂದಾದ ಮಹೇಶ್ ಜೋಶಿ ಅವರಿಗೆ ಮತ್ತೆ ಪ್ರಶ್ನೆಗಳು ಎದುರಾದವು. ಹೀಗಾಗಿ ಸಭೆಯನ್ನು ಸಚಿವರ ಸೂಚನೆಯಂತೆ ಮೊಟಕುಗೊಳಿಸಲಾಯಿತು.
ಮುಖ್ಯಮಂತ್ರಿ ಸಚಿವರು ನಮ್ಮ ಮನೆಗೆ ಬರಲಿ ಎಂಬುವ ಭಾವನೆ ಬಿಟ್ಟು ಮಹೇಶ್ ಜೋಶಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಬಳಿಯೂ ಹೋಗಿ ಸಮ್ಮೇಳನ ಯಶಸ್ವಿಗೊಳಿಸುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು.–-ಪ್ರೊ.ಜಯಪ್ರಕಾಶಗೌಡ, ಅಧ್ಯಕ್ಷ ಕರ್ನಾಟಕ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.