ADVERTISEMENT

ಸಾಹಿತ್ಯ ಸಮ್ಮೇಳನ: ರಾಜ್ಯದಾದ್ಯಂತ ಕನ್ನಡ ಜ್ಯೋತಿ ರಥ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 0:08 IST
Last Updated 20 ಸೆಪ್ಟೆಂಬರ್ 2024, 0:08 IST
<div class="paragraphs"><p>ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ ಕನ್ನಡ ಜ್ಯೋತಿ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಗುರುವಾರ ಸಂಜೆ ಚಾಲನೆ ನೀಡಿದರು. ಶಾಸಕ ರವಿಕುಮಾರ್‌, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ ಪಾಲ್ಗೊಂಡಿದ್ದರು</p></div>

ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ ಕನ್ನಡ ಜ್ಯೋತಿ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಗುರುವಾರ ಸಂಜೆ ಚಾಲನೆ ನೀಡಿದರು. ಶಾಸಕ ರವಿಕುಮಾರ್‌, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ ಪಾಲ್ಗೊಂಡಿದ್ದರು

   

– ಪ್ರಜಾವಾಣಿ ಚಿತ್ರ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ 87 ದಿನಗಳವರೆಗೆ ನಾಡಿನಾದ್ಯಂತ ಸಂಚರಿಸಲಿರುವ ‘ಕನ್ನಡ ಜ್ಯೋತಿ ರಥ’ಕ್ಕೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಗುರುವಾರ ಪೂಜೆ ಸಲ್ಲಿಸಿ, ಬೀಳ್ಕೊಟ್ಟರು.

ADVERTISEMENT

‘ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ಜ್ಯೋತಿ ರಥವು ಸಂಚರಿಸಲಿದೆ. ಸಮಸ್ತ ಕನ್ನಡಿಗರನ್ನು ಆಹ್ವಾನಿಸುವ ಉದ್ದೇಶದಿಂದ ಈ ರಥ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಸಚಿವರು ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌. ನಾಗರಾಜು, ‘ರಥವು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯಕ್ಕೆ ಸೆ.22ರ ಮುಂಜಾನೆ ತಲುಪಲಿದೆ. ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಂಡ್ಯ ಜಿಲ್ಲೆ ಪ್ರತಿನಿಧಿಗಳು ಕನ್ನಡ ಜ್ಯೋತಿ ರಥ ಸಂಚಾರಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಅಂದಿನಿಂದ ಸತತವಾಗಿ ರಾಜ್ಯದ 31 ಜಿಲ್ಲೆಗಳಲ್ಲೂ ಸಂಚರಿಸಲಿದೆ’ ಎಂದು ತಿಳಿಸಿದರು.

ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ರಾಜ್ಯದ ಮೂಲೆ ಮೂಲೆಗಳಲ್ಲಿ ಈ ರಥವು ಸಂಚರಿಸಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಜಾಗೃತಿ ಮತ್ತು ಅಭಿಮಾನ ಮೂಡಿಸಲಿದೆ. ಪ್ರಸಿದ್ಧ ಆಧ್ಯಾತ್ಮಿಕ ತಾಣದಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಪೂಜೆ ಸಲ್ಲಿಸಿರುವುದು ಅರ್ಥಪೂರ್ಣವಾಗಿದೆ. ದಾಖಲೆಯ ಸಂಖ್ಯೆಯಲ್ಲಿ ಕನ್ನಡಿಗರು ಸಮ್ಮೇಳನಕ್ಕೆ ಬರಲು ಈ ರಥ ಯಾತ್ರೆಯು ಪ್ರೇರಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ರವಿಕುಮಾರ್‌, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ, ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌, ಕಸಾಪ ಜಿಲ್ಲಾ ಘಟಕದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಕುಮಾರ್‌ ಪಾಲ್ಗೊಂಡಿದ್ದರು.

ರಥದ ವಿಶೇಷತೆ

ಭುವನೇಶ್ವರಿ ದೇವಿ ಪ್ರತಿಮೆಯ ಜತೆಗೆ ಕೃಷಿಯ ಸಂಕೇತವಾದ ಎತ್ತುಗಳೊಂದಿಗೆ ಇರುವ ರೈತ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸರ್‌ ಎಂ. ವಿಶ್ವೇಶ್ವರಯ್ಯ ಮತ್ತು ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳು ಮುಖ್ಯಮಂತ್ರಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರ ಚಿತ್ರಗಳನ್ನು ಈ ರಥವು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.