ಮಂಡ್ಯ: ನಾಲ್ಕನೇ ಶ್ರೇಯಾಂಕದ ಶಶಿಕುಮಾರ್ ಮುಕುಂದ್ ಮತ್ತು ಉದಯೋನ್ಮುಖ ಆಟಗಾರ ಕರಣ್ ಸಿಂಗ್ ಅವರು ವಿಭಿನ್ನ ಶೈಲಿಯ ಗೆಲುವಿನೊಡನೆ, ಐಟಿಎಫ್ ಮಂಡ್ಯ ಓಪನ್ ಪುರುಷರ ಐಟಿಎಫ್ ಟೂರ್ನಿಯ ಪ್ರೀ– ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಪಿಇಟಿ ಟೆನಿಸ್ ಅಂಕಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ, 20 ವರ್ಷದ ಕರಣ್ ಸಿಂಗ್ ಬುಧವಾರ 3–6, 6–3, 6–2 ರಿಂದ ಏಳನೇ ಶ್ರೇಯಾಂಕದ ತೈಪೆಯ ತ್ಸುಂಗ್–ಹಾವೊ ಹುವಾಂಗ್ ಅವರಿಗೆ ಆಘಾತ ನೀಡಿದರು. ಅನುಭವಿ ಆಟಗಾರ ಶಶಿಕುಮಾರ್ ಇನ್ನೊಂದು ಪಂದ್ಯದಲ್ಲಿ 6–3, 6–4 ರಿಂದ ಸ್ವದೇಶದ ಕಬೀರ್ ಹನ್ಸ್ ಅವರನ್ನು ಸೋಲಿಸಲು ಹೆಚ್ಚು ಕಷ್ಟಪಡಲಿಲ್ಲ.
ಪ್ರಜ್ವಲ್‌ಗೆ ನಿರಾಸೆ:
ಮೈಸೂರಿನ ಹುಡುಗ ಎಸ್.ಡಿ. ಪ್ರಜ್ವಲ್ ದೇವ್ ಇನ್ನೊಂದು ಪಂದ್ಯದಲ್ಲಿ ಕೊರಿಯಾದ ಯುನ್ಸಿಯೊಕ್ ಜಾಂಗ್ ಎದುರು ನಿರ್ಣಾಯಕ ಸೆಟ್‌ನಲ್ಲಿ ಮೂರು ‘ಮ್ಯಾಚ್ ಪಾಯಿಂಟ್’ ಕೈಚೆಲ್ಲಿ ನಿರಾಸೆ ಅನುಭವಿಸಬೇಕಾಯಿತು. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಹೋರಾಟದಲ್ಲಿ ಕೊರಿಯಾದ ಆಟಗಾರ 6-2, 5-7, 7-5 ರಿಂದ ಎಂಟನೇ ಶ್ರೇಯಾಂಕದ ಆಟಗಾರನ ವಿರುದ್ಧ ಗೆಲುವು ಸಾಧಿಸಿದರು.
ವಿಷ್ಣುವರ್ಧನ್ ಅವರು 6-3, 3-6, 6-4 ರಿಂದ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಎದುರು ಗೆದ್ದರು. ಗುಜರಾತ್‌ನ ಮಾಧ್ವಿನ್ ಕಾಮತ್ 6-3, 7-6 (6) ರಲ್ಲಿ ನೇರ ಸೆಟ್‌ಗಳಿಂದ ಕಜಕಿಸ್ತಾನದ ಗ್ರಿಗೊರಿಯ್ ಅವರನ್ನು ಸೋಲಿಸಿದರು.
ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಥಿಜ್ಮೆನ್ ಲೂಫ್ ಅವರು 7-6 (5), 1-6, 6-1 ರಿಂದ ಆರನೇ ಶ್ರೇಯಾಂಕದ ಇಂಡೊನೇಷ್ಯಾದ ಎಂ. ರಿಫ್ಕಿ ಫಿತ್ರಿಯಾದಿ ಅವರನ್ನು ಪರಾಭವಗೊಳಿಸಿದರು. ಇತರ ಪಂದ್ಯಗಳಲ್ಲಿ ಒಫೆಕ್ ಶಿಮನೋವ್ (ಇಸ್ರೇಲ್) 6–2, 6–4 ರಿಂದ ಶಿವಾಂಕ್ ಭಟ್ನಾಗರ್ ವಿರುದ್ಧ, ಕ್ರಿಸ್ ವಾನ್ ವಿಕ್ (ದಕ್ಷಿಣ ಆಫ್ರಿಕಾ) 6–1, 7–6 (2) ರಿಂದ ಫೈಸಲ್ ಖಮರ್ ವಿರುದ್ಧ, ಒರೆಲ್ ಕಿಮ್ಹಿ 6–3, 4–6, 6–2 ರಿಂದ ರಿಷಭ್ ಅಗರವಾಲ್ ವಿರುದ್ಧ ಜಯಗಳಿಸಿದರು.
ದಿನದ ಕೊನೆಯ ಮೂರು ಪಂದ್ಯಗಳು ಮಂದ ಬೆಳಕಿನಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.