ಮಂಡ್ಯ: ತಾಲ್ಲೂಕಿನ ಹನಕೆರೆ ಗ್ರಾಮದ ಕಾಲಭೈರವೇಶ್ವರ ದೇವಾಲಯಕ್ಕೆ ಭಾನುವಾರ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಪ್ರವೇಶ ನೀಡಿ, ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರಬಲ ಜಾತಿಗಳ ಕೆಲವರು ಗಲಾಟೆ ನಡೆಸಿದರು.
ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದೆ. ಎರಡು ವರ್ಷದ ಹಿಂದೆ ₹1.5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಹಿಂದಿನಿಂದಲೂ ಇಲ್ಲಿಗೆ ಪರಿಶಿಷ್ಟರ ಪ್ರವೇಶ–ಪೂಜೆಗೆ ಪ್ರಬಲ ಜಾತಿಯ ಜನರು ಅವಕಾಶ ನೀಡಿರಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾಮದ ಪರಿಶಿಷ್ಟ ಸಮುದಾಯದ ಯುವಕರು ಪೊಲೀಸರು ಹಾಗೂ ತಾಲ್ಲೂಕು ಆಡಳಿತದ ಮೊರೆ ಹೋಗಿದ್ದರು. ಶಾಂತಿಸಭೆಯೂ ನಡೆದಿತ್ತು. ಆದಾಗ್ಯೂ ದಲಿತ ಸಮುದಾಯದವರಿಗೆ ಪ್ರವೇಶ ನೀಡಲು ಪ್ರಬಲ ಜಾತಿಗಳು ಒಪ್ಪಿರಲಿಲ್ಲ.
ಶನಿವಾರ ರಾತ್ರಿಯೇ ಗ್ರಾಮದ ಪರಿಶಿಷ್ಟ ಸಮುದಾಯದ ಯುವಕರ ಗುಂಪು ದೇಗುಲದ ಪ್ರವೇಶಕ್ಕೆ ಯತ್ನಿಸಿದ್ದು, ಪ್ರಬಲ ಜಾತಿಗಳ ಗುಂಪು ಇದಕ್ಕೆ ಅವಕಾಶ ನೀಡಿರಲಿಲ್ಲ. ಭಾನುವಾರ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಮಾಜಿ ಶಾಸಕ ಶ್ರೀನಿವಾಸ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯ ಪ್ರವೇಶಿಸಿ, ದೇವರಿಗೆ ಪೂಜೆ ಸಲ್ಲಿಸಿದರು.
ಕಾಲಭೈರವೇಶ್ವರ ಸ್ವಾಮಿ ಪೂಜೆಗೆ ಬಂದಿದ್ದ ದಲಿತರ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಕೆಲವರಷ್ಟೇ ವಿರೋಧಿಸುತ್ತಿದ್ದು, ಸಮಸ್ಯೆ ಶಾಂತಿಯುತವಾಗಿ ಬಗೆಹರಿದಿದೆ.ಶಿವಕುಮಾರ್ ಬಿರಾದಾರ್, ಮಂಡ್ಯ ತಹಶೀಲ್ದಾರ್
ಪ್ರಬಲ ಜಾತಿಗಳ ವಿರೋಧ: ಪರಿಶಿಷ್ಟರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ಗುಂಪೊಂದು ದೇಗುಲದ ಮುಂಭಾಗ ಇಡಲಾಗಿದ್ದ ನಾಮಫಲಕವನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿತು. ದೇವಾಲಯದ ಒಳ ನುಗ್ಗಿದ ಯುವಕರು, ಉತ್ಸವ ಮೂರ್ತಿಯನ್ನು ಹೊತ್ತೊಯ್ದು ಎದುರು ಇದ್ದ ಮಹದೇಶ್ವರ ದೇವಾಲಯದಲ್ಲಿಟ್ಟ ಘಟನೆಯೂ ನಡೆಯಿತು.
‘ ಗ್ರಾಮದಲ್ಲಿರುವ ಎರಡು ಗುಂಪಿನ ದಲಿತರ ಪೂಜೆಗೆ ಅನುಕೂಲವಾ ಗುವಂತೆ ಚಿಕ್ಕಮ್ಮ ಮತ್ತು ಮಂಚಮ್ಮ ದೇಗುಲವನ್ನು ಕಟ್ಟಿಸಿಕೊಟ್ಟಿದ್ದೇವೆ. ಈಗ ಏಕಾಏಕಿ ಕಾಲಭೈರವೇಶ್ವರ ಸ್ವಾಮಿ ದೇಗುಲ ಪ್ರವೇಶಿಸಿ ನಾವು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯ ಮುರಿದಿದ್ದಾರೆ’ ಎಂದು ಪ್ರಬಲ ಜಾತಿಗಳ ಗುಂಪು ಅಧಿಕಾರಿಗಳು ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿತು.
ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಮಾತನಾಡಿ ‘ ಇದು ಮುಜರಾಯಿ ಇಲಾಖೆಗೆ ಸೇರಿದ ದೇಗುಲವಾಗಿದ್ದು, ಎಲ್ಲರಿಗೂ ಮುಕ್ತ ಪ್ರವೇಶವಿದೆ. ಯಾರೂ ಅಡ್ಡಿಪಡಿಸು ವಂತಿಲ್ಲ’ ಎಂದು ಎಚ್ಚರಿಸಿದರು.
ಅಂತಿಮವಾಗಿ ಪೊಲೀಸ್ ಭದ್ರತೆಯಲ್ಲಿ ದೇಗುಲ ಪ್ರವೇಶ ನಡೆದಿದ್ದು, ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಹಾಸನ: ದಲಿತರ ದೇವಾಲಯ ಪ್ರವೇಶಕ್ಕೆ ವಿರೋಧ- ಅರ್ಚಕ ಬಂಧನ
ಕೊಣನೂರು (ಹಾಸನ ಜಿಲ್ಲೆ): ಸಮೀಪದ ಬಿದರೂರಿನ ಬಸವೇಶ್ವರ ದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೇವಾಲಯದ ಅರ್ಚಕ ಕಾಂತರಾಜು ಎಂಬುವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಗ್ರಾಮದಲ್ಲಿ ಈಚೆಗೆ ನಡೆದ ಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ಅಡ್ಡಿಪಡಿಸಿದ ಕುರಿತು ಪ್ರಕರಣ ದಾಖಲಾಗಿತ್ತು.
‘ಗ್ರಾಮದ ಐವರ ವಿರುದ್ಧ ದೂರು ದಾಖಲಾಗಿದ್ದು, ಅರ್ಚಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸಶಸ್ತ್ರ ಪೊಲೀಸ್ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ’ ಎಂದು ಪಿಎಸ್‌ಐ ಗಿರೀಶ್ ಮಾಹಿತಿ ನೀಡಿದರು.
ಉತ್ಸವಕ್ಕೆ ಹಿನ್ನಡೆ: ಬಿದರೂರು ಗ್ರಾಮದಲ್ಲಿ ಪ್ರತಿ ವರ್ಷ ಜಾತ್ರೆ ನಂತರ ಯುಗಾದಿ ಹಬ್ಬದವರೆಗೂ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಭಕ್ತರು, ಹರಕೆ ಹೊತ್ತವರು ಬಸವೇಶ್ವರ ಸ್ವಾಮಿ ಉತ್ಸವ ನಡೆಸುವುದು ಸಂಪ್ರದಾಯವಾಗಿದ್ದು, ಪ್ರಕರಣ ದಾಖಲಾಗಿರುವುದರಿಂದ ಉತ್ಸವಕ್ಕೆ ಹಿನ್ನಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.