ADVERTISEMENT

ಮಂಡ್ಯ: ಮೇಳೈಸಿದ ವಿಜ್ಞಾನ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 13:37 IST
Last Updated 17 ನವೆಂಬರ್ 2024, 13:37 IST
ಮಂಡ್ಯ ನಗರದ ಗೀತಾಂಜಲಿ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ನೆಡೆದ 'ಗೀತಾಂಜಲಿ ಲೈಫ್ ಎಕ್ಸ್‌ಪೊ, ಮೀ ಆ್ಯಂಡ್ ಸೊಸೈಟಿ' ಹಾಗೂ ವಿಜ್ಞಾನ ವಸ್ತು ಪ್ರದರ್ಶನದ ಮಾದರಿಯನ್ನು ಎಸ್‌ಬಿಇಟಿ ಅಧ್ಯಕ್ಷ ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಸೇರಿದಂತೆ ಗಣ್ಯರು ವೀಕ್ಷಣೆ ಮಾಡಿದರು
ಮಂಡ್ಯ ನಗರದ ಗೀತಾಂಜಲಿ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ನೆಡೆದ 'ಗೀತಾಂಜಲಿ ಲೈಫ್ ಎಕ್ಸ್‌ಪೊ, ಮೀ ಆ್ಯಂಡ್ ಸೊಸೈಟಿ' ಹಾಗೂ ವಿಜ್ಞಾನ ವಸ್ತು ಪ್ರದರ್ಶನದ ಮಾದರಿಯನ್ನು ಎಸ್‌ಬಿಇಟಿ ಅಧ್ಯಕ್ಷ ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಸೇರಿದಂತೆ ಗಣ್ಯರು ವೀಕ್ಷಣೆ ಮಾಡಿದರು   

ಮಂಡ್ಯ: ಹಳ್ಳಿಯಿಂದ ದಿಲ್ಲಿವರೆಗಿನ ಬ್ಯಾಂಕಿಂಗ್‌ ಸೇವೆ, ನ್ಯಾಯಾಲಯಗಳು ಹಾಗೂ ಪೊಲೀಸ್‌ ಇಲಾಖೆಯ ಕಾರ್ಯವೈಖರಿಯ ಬಗ್ಗೆ ವಿಜ್ಞಾನ ವಸ್ತು ಪ್ರದರ್ಶನ ಬೆಳಕು ಚೆಲ್ಲಿತು.

ನಗರದ ಗೀತಾಂಜಲಿ ಇಂಟರ್‌ ನ್ಯಾಷನಲ್ ಶಾಲೆ(ಸಿಬಿಎಸ್‌ಇ)ಯಲ್ಲಿ ಭಾನುವಾರ ನಡೆದ ‘ಗೀತಾಂಜಲಿ ಲೈಫ್ ಎಕ್ಸ್‌ಪೊ ಮೀ ಆ್ಯಂಡ್ ಸೊಸೈಟಿ’ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿಜ್ಞಾನದ ಮಾಹಿತಿ ಹಾಗೂ ವಿಶ್ಲೇಷಣೆಗಳು ಪ್ರದರ್ಶನದಲ್ಲಿ ಮೇಳೈಸಿದವು.

ವಿದ್ಯಾರ್ಥಿಗಳು ಪ್ರತಿ ಹಂತದ ಪ್ರದರ್ಶನದಲ್ಲಿಯೂ ತಮ್ಮ ಕೌಶಲ ಪ್ರದರ್ಶಿಸಿದರು. ಶಿಕ್ಷಕರು ಅವರಿಗೆ ಸಾಥ್‌ ನೀಡಿದರು. ತಮ್ಮದೇ ಶೈಲಿಯ ನಿರೂಪಣೆಯಿಂದ ಗಣ್ಯರು ಮತ್ತು ಪ್ರೇಕ್ಷಕರಿಗೆ ಮಾದರಿ ವಿವರಣೆ ನೀಡುತ್ತಿದ್ದ ವಿದ್ಯಾರ್ಥಿಗಳ ಕೌಶಲ ಮೆಚ್ಚುಗೆ ಪಡೆಯಿತು. ಭೇಟಿ ನೀಡಿದ್ದ ಎಲ್ಲರೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮಾತುಗಳನ್ನಾಡಿ ಮುಂದೆ ಸಾಗುತ್ತಿದ್ದ ದೃಶ್ಯವು ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ನೀಡಿತು.

ADVERTISEMENT

ಶಿಕ್ಷಕ ಶ್ರವಣ್‌ ಮತ್ತು ವಿದ್ಯಾರ್ಥಿ ತಂಡವು ರೋಬೋಟಿಕ್ಸ್‌ನಲ್ಲಿ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಹೇಗೆ ಚಾಲನೆಯಾಗುವುದರ ಬಗ್ಗೆ ಹಾಗೂ ಕಂಪ್ಯೂಟರ್‌ ಸೈನ್ಸ್‌(ಕೋಡಿಂಗ್‌) ಬಗ್ಗೆ ಮಾಹಿತಿ ನೀಡಿದರೆ, ಶಿಕ್ಷಕಿ ಶ್ರುತಿ ಮತ್ತು ವಿದ್ಯಾರ್ಥಿಗಳ ತಂಡವು ಗ್ರಾಮ ಪಂಚಾಯಿತಿಯಿಂದ ಸಂಸತ್‌ವರೆಗೂ ರಾಜಕೀಯ ವಿಶ್ಲೇಷಣೆ ಕುರಿತು ಬೆಳಕು ಚೆಲ್ಲಿತು.

ಸುಪ್ರೀಂಕೋರ್ಟ್‌ನಲ್ಲಿ ಪೊಲೀಸರು ಮತ್ತು ವಕೀಲರು ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಶಿಕ್ಷಕಿ ಶಿವರತ್ನ ಮತ್ತು ವಿದ್ಯಾರ್ಥಿಗಳ ತಂಡದವರು ಮಾಹಿತಿ ನೀಡಿದರೆ, ಶಿಕ್ಷಕಿ ಮೋಕ್ಷದಾಯಿನಿ ಮತ್ತು ವಿದ್ಯಾರ್ಥಿಗಳ ತಂಡ ವೇದಿಕ್‌ ಗಣಿತ, ಜಾಪನೀಸ್‌ ಗಣಿತ ವಿಧಾನಗಳ ಮಾದರಿ ಪ್ರದರ್ಶಿಸಿದರು.

ಶಿಕ್ಷಕಿ ತೋಫಿಯಾ ಮತ್ತು ವಿದ್ಯಾರ್ಥಿ ತಂಡವು, ಗ್ರಾಮೀಣ ಬ್ಯಾಂಕ್‌ ನಿಂದ ಭಾರತೀಯ ರಿಸರ್ವ್ ಬ್ಯಾಂಕ್‌ವರೆಗೂ ಯಾವ ರೀತಿ ಕಾರ್ಯಗಳು ಇರುತ್ತವೆ ಎಂಬುದನ್ನು ಅಚ್ಚುಕಟ್ಟಾಗಿ ಪ್ರದರ್ಶನದ ರೀತಿಯಲ್ಲಿ ತೋರಿಸಿದರೆ, ಶಿಕ್ಷಕಿ ಚಂದನಾ ಮತ್ತು ವಿದ್ಯಾರ್ಥಿ ತಂಡವರು ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿದ ಮೇಲೆ ಯಾವ ವಿಷಯ ಓದಬೇಕು ಎನ್ನುವುದು ಸೇರಿದಂತೆ ಅದರಲ್ಲಿಯೂ ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ತೆಗೆದು ಪಾಸಾದವರು ಭವಿಷ್ಯ ರೂಪಿಸಿಕೊಳ್ಳಲು ಯಾವ ವಿಷಯ ಅಧ್ಯಯನ ಮಾಡಬೇಕು ಎಂಬುದರ ಮಾಹಿತಿ ನೀಡಿದರು.

ಪ್ರದರ್ಶನಕ್ಕೆ ಚಾಲನೆ ನೀಡಿದ ಎಸ್‌ಬಿಇಟಿ ಅಧ್ಯಕ್ಷ ಬಿ.ಶಿವಲಿಂಗಯ್ಯ ಮಾತನಾಡಿ, ‘ವಿದ್ಯಾರ್ಥಿ ದಿಸೆಯಲ್ಲಿಯೇ ವಿಜ್ಞಾನ ಮತ್ತು ಕಂಪ್ಯೂಟರ್‌ ಜ್ಞಾನ ಹೆಚ್ಚಿಸಿಕೊಂಡರೆ ಅಂತಹ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಮಂಡ್ಯದ ಪ್ರತಿಭಾವಂತರು ಈಗಾಗಲೇ ಸಾಕಷ್ಟು ಕಡೆ ಉತ್ತಮ ಹೆಸರು ಪಡೆದಿದ್ದು, ವಿದೇಶಗಳಲ್ಲೂ ಪ್ರತಿಭೆ ತೋರಿಸಿದ್ದಾರೆ. ಅದೇ ರೀತಿ ಇನ್ನೂ ಹೆಚ್ಚಿನ ರೀತಿ ಮಂಡ್ಯದ ಜನ ದೇಶ ಮೆಚ್ಚುವ ಹಾಗೆ ಹೆಸರು ಮಾಡಲಿ’ ಎಂದು ಆರೈಸಿದರು.

ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ‘ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು, ಕಂಪ್ಯೂಟರ್ ತರಬೇತಿ ನೀಡಿ ವಿಜ್ಞಾನದ ಬಗ್ಗೆ ಪ್ರಯೋಗಗಳ ಬಗ್ಗೆ ಪ್ರದರ್ಶನ ಏರ್ಪಡಿಸಿದ್ದಾರೆ, ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಿಗೆ ಹಾಗೂ ಪೋಷಕರಿಗೆ ವಿಶೇಷ ಮಾಹಿತಿ ಕೊಡಲು ಇದರಿಂದ ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲೆ ಎಚ್‌.ಸರೋಜಾ ಮಾತನಾಡಿ, ಈ ವಿಶಿಷ್ಟ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ಕೌಶಲ ಮತ್ತು ಸೃಜನಶೀಲತೆ ಹೆಚ್ಚಿಸಿದೆ. ಇಂತಹ ಪ್ರದರ್ಶನಗಳು ವಿದ್ಯಾರ್ಥಿಗಳ ಸಾಮಾಜಿಕ ಕೌಶಲದ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ವಿದ್ಯಾ, ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎಂ. ಶ್ರೀನಿವಾಸ್ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ವಿಜ್ಞಾನದ ಹೊಸ ಆಲೋಚನೆಗಳ ಜೊತೆ ಪಾರಂಪರಿಕ ಆಲೋಚನೆಗಳನ್ನು ಹೊಂದಿಸಬೇಕು
ಮೀರಾ ಶಿವಲಿಂಗಯ್ಯ ಎಸ್‌ಬಿಇಟಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.