ADVERTISEMENT

ಪಾಂಡವಪುರ | ನಾಲೆಗೆ ಚರಂಡಿ ನೀರು: ತಡೆಗೆ ಆಗ್ರಹ

ಪಾಂಡವಪುರ ತಾಲ್ಲೂಕಿನ ವಿವಿಧ ಗ್ರಾಮಗಳ ನಿವಾಸಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 7:28 IST
Last Updated 19 ಜೂನ್ 2024, 7:28 IST
ಪಾಂಡವಪುರ ಪಟ್ಟಣದ ವಿ.ಸಿ ನಾಲೆ ಏರಿ ಮೇಲೆ ಕಾವೇರಿ ನೀರಾವರಿ ನಿಗಮದ ಎಇಇ ಜಯರಾಂ ಹಾಗೂ ಪುರಸಭೆ ಮುಖ್ಯಾಧಿಕಾರಿ ವೀಣಾ ಜತೆ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಚರ್ಚೆ ನಡೆಸಿದರು.
ಪಾಂಡವಪುರ ಪಟ್ಟಣದ ವಿ.ಸಿ ನಾಲೆ ಏರಿ ಮೇಲೆ ಕಾವೇರಿ ನೀರಾವರಿ ನಿಗಮದ ಎಇಇ ಜಯರಾಂ ಹಾಗೂ ಪುರಸಭೆ ಮುಖ್ಯಾಧಿಕಾರಿ ವೀಣಾ ಜತೆ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಚರ್ಚೆ ನಡೆಸಿದರು.   

ಪಾಂಡವಪುರ: ವಿಶ್ವೇಶ್ವರಯ್ಯ ನಾಲೆಗೆ(ವಿ.ಸಿ) ಪಟ್ಟಣದ ಚರಂಡಿ ನೀರು ಸೇರುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಧ್ಯೆ ಭಾಗದಲ್ಲಿ ಹರಿಯುವ ವಿ.ಸಿ.ನಾಲಾ ಏರಿ ಮೇಲೆ ಜಮಾವಣೆಗೊಂಡ ಪ್ರತಿಭಟನಾಕಾರರು ಕಾವೇರಿ ನೀರಾವರಿ ನಿಗಮ ಮತ್ತು ಪುರಸಭೆ ಅಧಿಕಾರಿ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಪಟ್ಟಣದ ಹೌಸಿಂಗ್ ಬೋ‌ರ್ಡ್ ಕಾಲೋನಿ, ಶಾಂತಿನಗರ, ಮಹಾಂಕಾಳೇಶ್ವರಿ ಬಡಾವಣೆ, ಮಹಾತ್ಮಗಾಂಧಿನಗರ ನಿವಾಸಿಗಳು ಬಳಸುವ ಮಲಿನ ನೀರು ಹಾಗೂ ಒಳಚರಂಡಿ ವ್ಯವಸ್ಥೆಯ ತ್ಯಾಜ್ಯ ನೀರು ನಾಲೆಗೆ ಹರಿಯದಂತೆ ಕ್ರಮವಹಿಸಬೇಕೆಂದು ಮನವಿ ಮಾಡಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮವಹಿಸಿಲ್ಲ, ಪ್ರತಿ ಬಾರಿ ಮನವಿ ಮಾಡಿದಾಗಲೂ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಅಗತ್ಯ ಕ್ರಮವಹಿಸಿಲ್ಲ’ ಎಂದು ದೂರಿದರು.

ADVERTISEMENT

ಬಿಜೆಪಿ ಮುಖಂಡ ಎಚ್‌.ಎನ್.ಮಂಜುನಾಥ್ ಮಾತನಾಡಿ, ‘ಮಹತ್ಮಾಗಾಂಧಿ ನಗರ ಮತ್ತು ಹನುಮಂತನಗರದ ಬಳಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದ್ದು, ಇದರ ತ್ಯಾಜ್ಯವೂ ನಾಲೆಗೆ ಸೇರುತ್ತಿದೆ. ಇದರಿಂದ ನಾಲಾ ಕೆಳಭಾಗದ ರೈತರು ಮತ್ತು ನಿವಾಸಿಗಳು ನೀರನ್ನು ಬಳಸಲು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲಾ ಕೆಳಭಾಗದಲ್ಲಿ ಹಲವು ಗ್ರಾಮಗಳಿದ್ದು, ಬಟ್ಟೆ, ಪಾತ್ರೆ ತೊಳೆಯಲು ಹಾಗೂ ಹಸು–ಕರುಗಳಿಗೆ ನೀರು ಕುಡಿಸಲು ಈ ನಾಲೆ ನೀರನ್ನೇ ಬಳಸಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜಾಬ್ದಾರಿತನದಿಂದ ನಾಲೆ ನೀರು ಮಲಿನವಾಗುತ್ತಿದೆ. ಕೆಳಭಾಗದ ಜನರು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ’ ಎಂದು ಹೇಳಿದರು.

ಸ್ಥಳಕ್ಕೆ ಬಂದ ನೀರಾವರಿ ನಿಗಮದ ಎಇಇ ಜಯರಾಮು, ಪುರಸಭೆ ಮುಖ್ಯಾಧಿಕಾರಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಬೇವಿನಕುಪ್ಪೆ ಶಿವರಾಮು, ಉದೇಶ್, ಗ್ರಾ.ಪಂ.ಸದಸ್ಯ ಯಶವಂತ, ಡೇರಿ ಅಧ್ಯಕ್ಷ ಚಂದ್ರಶೇಖರ್, ಹಿರೇಮರಳಿ ಎಚ್‌.ಕೆ.ದೊರೆಸ್ವಾಮಿ, ಜ್ಞಾನೇಶ್, ಪಾರ್ಥ, ಕುಮಾರ, ಚಿಕ್ಕಾಡೆ ಮನು ಇದ್ದರು.

ಹಂದಿ ಸಾಕಾಣಿಕೆ ಕೇಂದ್ರ ತ್ಯಾಜ್ಯ ನಾಲೆಗೆ ನೀರು ಬಳಕೆದಾರರಿಗೆ ಸಾಂಕ್ರಾಮಿಕ ರೋಗ ಭೀತಿ ಹಲವು ಬಾರಿ ಮನವಿ ಮಾಡಿದರೂ ಕ್ರಮ ಇಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.