ADVERTISEMENT

ಶಮೀ ವೃಕ್ಷಕ್ಕೆ ಅಗ್ರ ಪೂಜೆ ಇವರಿಂದಲೇ

ಮೂರು ತಲೆಮಾರುಗಳಿಂದ ಪೂಜೆ ಸಲ್ಲಿಸುತ್ತಿರುವ ಕುಟುಂಬ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 5:22 IST
Last Updated 4 ಅಕ್ಟೋಬರ್ 2024, 5:22 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪದ ಎದುರು ಇರುವ ಶಮೀ ವೃಕ್ಷಕ್ಕೆ ಬಾಬುರಾಯನಕೊಪ್ಪಲಿನ ದೊಡ್ಡೇಗೌಡರ ವಂಶದ ಬಿ.ಎಂ. ಸುಬ್ರಹ್ಮಣ್ಯ– ಪದ್ಮಾ ದಂಪತಿ ಪೂಜೆ ಸಲ್ಲಿಸುತ್ತಿರುವುದು (ಸಂಗ್ರಹ ಚಿತ್ರ)
ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪದ ಎದುರು ಇರುವ ಶಮೀ ವೃಕ್ಷಕ್ಕೆ ಬಾಬುರಾಯನಕೊಪ್ಪಲಿನ ದೊಡ್ಡೇಗೌಡರ ವಂಶದ ಬಿ.ಎಂ. ಸುಬ್ರಹ್ಮಣ್ಯ– ಪದ್ಮಾ ದಂಪತಿ ಪೂಜೆ ಸಲ್ಲಿಸುತ್ತಿರುವುದು (ಸಂಗ್ರಹ ಚಿತ್ರ)   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವ ಬನ್ನಿ (ಶಮೀ ವೃಕ್ಷ) ಪೂಜೆಯೊಡನೆ ಆರಂಭವಾಗಲಿದ್ದು, ಬನ್ನಿ ಮರಕ್ಕೆ ಅಗ್ರ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಬಾಬುರಾಯನಕೊಪ್ಪಲಿನ ಬಿ.ಎಂ. ಸುಬ್ರಹ್ಮಣ್ಯ ಕುಟುಂಬ ಶತಮಾನಗಳಿಂದಲೂ ನಡೆಸಿಕೊಂಡು ಬಂದಿದೆ.

ಕಿರಂಗೂರು ವೃತ್ತದ ಬಳಿಯ ಬನ್ನಿ ಮಂಟಪದ ಮುಂದಿನ ಶಮೀ ವೃಕ್ಷಕ್ಕೆ ಬಿ.ಎಂ. ಸುಬ್ರಹ್ಮಣ್ಯ (ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ) ಅವರ ತಾತ ದೊಡ್ಡೇಗೌಡ ನವರಾತ್ರಿ ಆಚರಣೆ ಸಂದರ್ಭದಲ್ಲಿ ಶಮೀ ಪೂಜೆ ನಡೆಸುತ್ತಿದ್ದರು. ಅವರು ಕಾಲವಾದ ಬಳಿಕ ಸುಬ್ರಹ್ಮಣ್ಯ ಅವರ ತಂದೆ ಡಿ. ಮರೀಗೌಡ ಅವರಿಂದ ಈ ಕೈಂಕರ್ಯ ನಡೆಯುತ್ತಿತ್ತು. ಕಳೆದ 25 ವರ್ಷಗಳಿಂದ ಬಿ.ಎಂ. ಸುಬ್ರಹ್ಮಣ್ಯ ದಂಪತಿ ಬನ್ನಿ ‍ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

ಶ್ರೀರಂಗಪಟ್ಟಣದಲ್ಲಿ 2008ರಲ್ಲಿ ದಸರಾ ಉತ್ಸವ ಪುನರಾರಂಭ ಆಗುವುದಕ್ಕಿಂತ ಮೊದಲೇ, ಮೂರು ತಲೆಮಾರುಗಳಿಂದಲೂ ಸುಬ್ರಹ್ಮಣ್ಯ ಅವರ ವಂಶಸ್ಥರು ಇಲ್ಲಿ ಶಮೀ ಪೂಜೆ ನಡೆಸುತ್ತಾ ಬಂದಿರುವುದು ವಿಶೇಷ.

ADVERTISEMENT

ಬನ್ನಿ ಮಂಟಪದ ಮುಂದಿನ ಶಮೀ ವೃಕ್ಷಕ್ಕೆ ಅಗ್ರ ಪೂಜೆ ಸಲ್ಲಿಸಿದ ನಂತರ ಚಾಮುಂಡೇಶ್ವರಿ ದೇವಿ ಪೂಜೆ, ನಂದಿ ಧ್ವಜ ಪೂಜೆ ಇತರ ವಿಧಿ, ವಿಧಾನಗಳನ್ನು ಪೂರೈಸಿ ಜಂಬೂ ಸವಾರಿಗೆ ಚಾಲನೆ ನೀಡುವುದು ವಾಡಿಕೆ. ಅದರಂತೆ ಸುಬ್ರಹ್ಮಣ್ಯ ಕುಟುಂಬ ಶಮೀ ವೃಕ್ಷಕ್ಕೆ ಅಗ್ರ ಪೂಜೆ ಸಲ್ಲಿಸಿದ ಬಳಿಕ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಪೂಜೆ ನಡೆಯುತ್ತದೆ.

‘ಸರ್ಕಾರ ಇಲ್ಲಿ ದಸರಾ ಉತ್ಸವವನ್ನು ಪುನರಾರಂಭಿಸುವ ಮುನ್ನ ಶಮೀ ವೃಕ್ಷ ಪೂಜೆ, ಚಾಮುಂಡೇಶ್ವರಿ ದೇವಿ ಪೂಜೆ, ಬನ್ನಿ ಮಂಟಪದ ಜೀರ್ಣೋದ್ಧಾರ, ಬಣ್ಣ ಬಳಿಯುವುದು ಸೇರಿದಂತೆ ಎಲ್ಲ ಕಾರ್ಯಗಳನ್ನು ನಮ್ಮ ಕುಟುಂಬವೇ ನಿರ್ವಹಿಸುತ್ತಿತ್ತು. ನಮ್ಮ ಸ್ವಂತ ಖರ್ಚಿನಿಂದಲೇ ಇದನ್ನೆಲ್ಲ ಮಾಡಿ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಈಗ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ದಸರಾ ಉತ್ಸವದ ಜವಾಬ್ದಾರಿ ಹೊತ್ತಿದ್ದಾರೆ. ಹಾಗಾಗಿ ಶಮೀ ವೃಕ್ಷವನ್ನು ಪೂಜಿಸಿ, ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುತ್ತೇವೆ’ ಎಂದು ಬಿ.ಎಂ. ಸುಬ್ರಹ್ಮಣ್ಯ ಹೇಳುತ್ತಾರೆ.

ಮತ್ತೆ ಮರ ಬೆಳೆಸಿದ್ದು: ಬನ್ನಿ ಮಂಟಪದ ಮುಂದೆ ಮೊದಲು ಇದ್ದ ಶಮೀ ವೃಕ್ಷ ಸಂಪೂರ್ಣ ಒಣಗಿ ಹೋಗಿತ್ತು. ಬಿ.ಎಂ. ಸುಬ್ರಹ್ಮಣ್ಯ ಅವರು ಅದನ್ನು ತೆಗೆಸಿ, ರಾಮನಗರದಿಂದ ಬನ್ನಿ ಸಸಿಯನ್ನು ತರಿಸಿ ನೆಟ್ಟು ಬೆಳೆಸಲಾರಂಭಿಸಿದರು. 10 ವರ್ಷಗಳ ಹಿಂದೆ ನೆಟ್ಟಿರುವ ಸಸಿ ಈಗ 30 ಅಡಿಗೂ ಹೆಚ್ಚು ಎತ್ತರದ ಮರವಾಗಿ ಬೆಳೆದಿದೆ. ದಸರಾ ಉತ್ಸವದ ಆರಂಭದ ದಿನ ಇದಕ್ಕೆ ಮೊದಲ ಪೂಜೆ ಸಲ್ಲುತ್ತದೆ. ದಶಮಿಯ ದಿನ ‘ಶಮೀ ಛೇದನ’ ಆಚರಣೆಯೂ ನಡೆಯುತ್ತದೆ.

ಶ್ರೀರಂಗೂರು ವೃತ್ತದ ಬನ್ನಿ ಮಂಟಪದ ಮುಂದೆ ಬಿ.ಎಂ. ಸುಬ್ರಹ್ಮಣ್ಯ ಅವರು ಬೆಳೆಸಿರುವ ಶಮೀ ವೃಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.