ಮಂಡ್ಯ: ಐತಿಹಾಸಿಕ ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದಲ್ಲಿ ಈಗ ಗಂಟೆ ನಾದ ಮೊಳಗುತ್ತಿಲ್ಲ. ಹುಂಡಿ ಹಣಕ್ಕಾಗಿ ದುಷ್ಕರ್ಮಿಗಳು ಮೂವರು ಅರ್ಚಕರನ್ನು ಹತ್ಯೆ ಮಾಡಿದ ನಂತರ ದೇವಾಲಯದಲ್ಲಿ ನೀರವ ಮೌನ ಆವರಿಸಿದೆ.
ಶನಿವಾರ ದೇವಾಲಯದಲ್ಲಿ ವಿಶೇಷ ಪೂಜೆಗಳಿರಲಿಲ್ಲ. ಭಕ್ತರ ಭೇಟಿಗೆ ಅವಕಾಶ ಇರಲಿಲ್ಲ. ದೇವಾಲಯದ ಸುತ್ತಲೂ ಪೊಲೀಸ್ ಪಹರೆ ಇದ್ದು ಇಡೀ ಆವರಣ ಮೌನಕ್ಕೆ ಶರಣಾಗಿತ್ತು. ಸುತ್ತಮುತ್ತಲ ಗ್ರಾಮಗಳ ಜನರು ದೇವಾಲಯದ ಬಳಿಗೆ ಬಂದು ಪ್ರಕರಣದ ಬಗ್ಗೆ ಮಾತನಾಡುವ ದೃಶ್ಯಗಳು ಸಾಮಾನ್ಯವಾಗಿದ್ದವು. ಸದಾ ಧಾರ್ಮಿಕ ವಾತಾವರಣ ಇದ್ದ ದೇವಾಲಯ ಆವರಣದಲ್ಲಿ ಸೂತಕದ ಛಾಯೆ ಎದ್ದು ಕಾಣುತ್ತಿತ್ತು.
ಸಚಿವರ ಭೇಟಿ: ಶನಿವಾರ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಾಲಯದ ಅರ್ಚಕರು ಘಟನೆ ನಡೆದ ಸ್ಥಳ, ಸಿ.ಸಿ.ಟಿ.ವಿ ಕ್ಯಾಮೆರಾಗಳು ಹಾಳಾಗಿರುವ ಕುರಿತು ಮಾಹಿತಿ ನೀಡಿದರು. ದೇವಾಲಯ ಹಾಗೂ ಅರ್ಚಕರಿಗೆ ಸೂಕ್ತ ಭದ್ರತೆ ನೀಡುವಂತೆ ಸಚಿವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ದೇವಾಲಯದ ಅರ್ಚಕರ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಹತ್ಯೆ ಮಾಡಿರುವ ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡಲೇ ಆರೋಪಿಗಳ ಪತ್ತೆಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
‘ಮುಜರಾಯಿ ಇಲಾಖೆ ಅಧಿಕಾರಿಗಳು ದೇವಾಲಯಕ್ಕೆ ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಸಮಗ್ರ ತನಿಖೆ ನಡೆಸುವಂತೆ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಹುಂಡಿ ತೆಗೆಯುವ ವಿಚಾರದಲ್ಲೂ ಸಿಬ್ಬಂದಿ ತಪ್ಪೆಸೆಗಿದ್ದಾರೆ. ಸಾಮಾನ್ಯವಾಗಿ ತಿಂಗಳಿಗೆ ಅಥವಾ ಹುಂಡಿ ತುಂಬಿದ ಸಂದರ್ಭದಲ್ಲೇ ತೆರೆಯಬೇಕು. ಈ ಕುರಿತು ದೇವಾಲಯಗಳಿಗೆ ಸೂಚನೆ ನೀಡಲಾಗುವುದು’ ಎಂದರು.
‘ಪ್ರಾಥಮಿಕ ಮಾಹಿತಿ ಅನ್ವಯ ದುಷ್ಕರ್ಮಿಗಳು ದೇವಾಲಯದ ಮೂರು ಹುಂಡಿಗಳ ಹಣವನ್ನು ಮಾತ್ರ ದೋಚಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಹೆಚ್ಚಿನ ತನಿಖೆ ಕೈಗೊಂಡಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು ಅದರ ಬಗ್ಗೆಯೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಆದಷ್ಟು ಕ್ಷಿಪ್ರಗತಿಯಲ್ಲಿ ಪ್ರಕರಣವನ್ನು ಪೊಲೀಸರು ಭೇದಿಸಲಿದ್ದಾರೆ’ ಎಂದು ಹೇಳಿದರು.
ರಹಸ್ಯ ಕಾರ್ಯಾಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಆರೋಪಿಗಳು ಪತ್ತೆಯಾಗಲಿದ್ದಾರೆ. ಪೊಲೀಸರು ಈ ವಿಚಾರದಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಇದ್ದರು.
ಪರಿಹಾರ ಚೆಕ್ ವಿತರಣೆ
ಹತ್ಯೆಯಾದ ಅರ್ಚಕರ ಕುಟುಂಬಗಳಿಗೆ ಸರ್ಕಾರ ಘೋಷಣೆ ಮಾಡಿರುವ ತಲಾ ₹ 5 ಲಕ್ಷ ಪರಿಹಾರ ಚೆಕ್‌ಗಳನ್ನು ಸಚಿವರ ಕೋಟ ಶ್ರೀನಿವಾಸ ಪೂಜಾರಿ ವಿತರಣೆ ಮಾಡಿದರು.
‘ಮುಖ್ಯಮಂತ್ರಿಗಳ ಸೂಚನೆಯಂತೆ ಅರ್ಚಕರ ಕುಟುಂಬ ಸದಸ್ಯರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಅವಶ್ಯವಿದ್ದರೆ ಇನ್ನೂ ಹೆಚ್ಚಿನ ನೆರವು ನೀಡಲಾಗುವುದು’ ಸಚಿವರು ಹೇಳಿದರು.
ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ಅರ್ಚಕರ ಕುಟುಂಬಗಳ ಜೊತೆ ಸದಾ ಇರುತ್ತೇವೆ. ಅವರ ಮಕ್ಕಳ ಶಿಕ್ಷಣಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು’ ಎಂದರು.
ಮನೆ ಖಾಲಿ: ಪೊಲೀಸರ ನಿಗಾ
ಗುತ್ತಲು, ಅಶೋಕ್ ನಗರ, ನೆಹರೂ ನಗರ ಭಾಗದಲ್ಲಿ ಕಳೆದೆರಡು ದಿನಗಳಲ್ಲಿ ಮನೆ ಖಾಲಿ ಮಾಡಿದವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಕುರಿತು ಪೊಲೀಸರು ಮನೆ ಮಾಲೀಕರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಜೊತೆಗೆ ನಗರದ ಪ್ರಮುಖ ಭಾಗದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ನಿಗಾ ಇಟ್ಟಿದ್ದಾರೆ. ಎಲ್ಲಾ ದಿಕ್ಕಿನಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.