ADVERTISEMENT

ಅನಾಥವಾಗಿದೆ ಐತಿಹಾಸಿಕ ಭತ್ತದ ಕಣಜ

ಡಾ.ಬಾಬು ಜಗಜೀವನರಾಂ ಉದ್ಘಾಟಿಸಿದ್ದ ಇಂಡೋ– ಜಪಾನ್‌ ತಂತ್ರಜ್ಞಾನದ ಘಟಕ

ಎಂ.ಎನ್.ಯೋಗೇಶ್‌
Published 8 ಜುಲೈ 2018, 20:20 IST
Last Updated 8 ಜುಲೈ 2018, 20:20 IST
ಮಂಡ್ಯದ ಶಂಕರನಗರದಲ್ಲಿ ಅನಾಥವಾಗಿ ನಿಂತಿರುವ ಅತ್ಯಾಧುನಿಕ ಭತ್ತ ಸಂಗ್ರಹ ಘಟಕ
ಮಂಡ್ಯದ ಶಂಕರನಗರದಲ್ಲಿ ಅನಾಥವಾಗಿ ನಿಂತಿರುವ ಅತ್ಯಾಧುನಿಕ ಭತ್ತ ಸಂಗ್ರಹ ಘಟಕ   

ಮಂಡ್ಯ: ಅರ್ಧ ಶತಮಾನದ ಹಿಂದೆ ನಗರದ ಶಂಕರಮಠ ಬಡಾವಣೆಯಲ್ಲಿ ಇಂಡೋ–ಜಪಾನ್‌ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ ಐತಿಹಾಸಿಕ ಭತ್ತದ ಕಣಜ (ಸೈಲೊ) ಅನಾಥವಾಗಿದೆ. ಸ್ಮಾರಕದಂತಿರುವ ಬೃಹದಾಕಾರದ ಭತ್ತ ಸಂಗ್ರಹಿಸುವ ಟ್ಯಾಂಕರ್‌ಗಳು, ಕುಸಿದು ಬಿದ್ದಿರುವ ಕಟ್ಟಡಗಳು, ತುಕ್ಕು ಹಿಡಿಯುತ್ತಿರುವ ಯಂತ್ರೋಪಕರಣಗಳು, ಆವರಣದಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳು ಜಿಲ್ಲೆಯಲ್ಲಿ ಭತ್ತ ಬೆಳೆಯುವ ರೈತರ ಕತೆಯನ್ನು ಸಾರಿ ಸಾರಿ ಹೇಳುತ್ತಿವೆ.

1968ರಲ್ಲಿ ₹ 30 ಲಕ್ಷ ವೆಚ್ಚದೊಂದಿಗೆ ನಿರ್ಮಿಸಿದ್ದ ಭತ್ತ ಸಂಗ್ರಹಿಸುವ ಈ ಆಧುನಿಕ ಘಟಕ ಕೆ.ವಿ.ಶಂಕರಗೌಡರ ಕನಸಿನ ಕೂಸಾಗಿತ್ತು. ಭಾರತ ಸರ್ಕಾರದ ಅನುದಾನದಲ್ಲಿ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಆರ್‌ಎಪಿಸಿಎಂಎಸ್‌) 5 ಎಕರೆ ಜಾಗದಲ್ಲಿ ನಿರ್ಮಿಸಿತು. ಕೇಂದ್ರ ಸರ್ಕಾರದ ಆಹಾರ, ವ್ವವಸಾಯ ಮತ್ತು ಸಹಕಾರ ಸಚಿವರಾಗಿದ್ದ ಡಾ.ಬಾಬು ಜಗಜೀವನರಾಂ ಘಟಕ ಉದ್ಘಾಟಿಸಿದ್ದರು. ಸರ್ಕಾರ ಲೆವಿ ನೀತಿ (ಎಕರೆಗಿಷ್ಟು ಭತ್ತವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಮಾರುವುದು) ಜಾರಿಗೊಳಿಸಿದ್ದ ಕಾರಣ ರೈತರು ಈ ಕಣಜಕ್ಕೆ ಭತ್ತ ತಂದು ಮಾರಾಟ ಮಾಡುತ್ತಿದ್ದರು.1 ಲಕ್ಷ ಕ್ವಿಂಟಲ್‌ ಭತ್ತ ಸಂಗ್ರಹ ಸಾಮರ್ಥ್ಯ ಈ ಘಟಕಕ್ಕೆ ಇತ್ತು.

ಭತ್ತ ಸಂಗ್ರಹ ಘಟಕದ ಜೊತೆಗೆ ಜಪಾನ್‌ ತಂತ್ರಜ್ಞಾನದ ಮಾರ್ಡರ್ನ್‌ ಅಕ್ಕಿ ಗಿರಣಿಯನ್ನೂ ಇಲ್ಲಿ ಸ್ಥಾಪಿಸಲಾಗಿತ್ತು. ಇದು ಏಷ್ಯಾ ಖಂಡದಲ್ಲೇ ಅತ್ಯಂತ ಆಧುನಿಕ ರೈಸ್‌ ಮಿಲ್‌ ಎಂದೇ ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಉತ್ಪಾದನೆಯಾಗುತ್ತಿದ್ದ ಉತ್ತಮ ಗುಣಮಟ್ಟದ ಕುಚುಲಕ್ಕಿ ದೇಶದ ನಾನಾ ಭಾಗಕ್ಕೆ ಸರಬರಾಜಾಗುತ್ತಿತ್ತು. ಕ್ರಮೇಣ ಸರ್ಕಾರದ ಲೆವಿ ನೀತಿ ರದ್ದಾದ ಹಿನ್ನೆಲೆಯಲ್ಲಿ ರೈತರು ಈ ಘಟಕಕ್ಕೆ ಭತ್ತ ಮಾರಾಟ ಮಾಡುವುದನ್ನು ನಿಲ್ಲಿಸಿದರು. ಖಾಸಗಿ ದಲ್ಲಾಳಿಗಳ ಲಾಬಿಯಿಂದಾಗಿಯೂ ಭತ್ತದ ಪೂರೈಕೆ ಸ್ಥಗಿತಗೊಂಡಿತು. ಹೀಗಾಗಿ ಈ ಆಧುನಿಕ ಘಟಕ ಇತಿಹಾಸದ ಗರ್ಭ ಸೇರಿತು. ನಂತರ ಕೆಲವು ವರ್ಷಗಳ ಕಾಲ ನಡೆದ ರೈಸ್‌ ಮಿಲ್‌ ಕೂಡ ಸದ್ದು ನಿಲ್ಲಿಸಿತು.

ADVERTISEMENT

ಈ ಘಟಕ ಕೆಲಸ ನಿಲ್ಲಿಸಿಯೇ 25 ವರ್ಷಗಳಾಗಿವೆ. ಆದರೆ ಸೈಲೊ ಟ್ಯಾಂಕರ್‌ಗಳು ಈಗಲೂ ಗಟ್ಟಿಮುಟ್ಟಾಗಿವೆ. 50 ಸಾವಿರ ಕ್ವಿಂಟಲ್‌ ಭತ್ತ ಸಂಗ್ರಹಿಸುವ ಮೂರು ಟ್ಯಾಂಕರ್‌ಗಳು, 30 ಸಾವಿರ ಕ್ವಿಂಟಲ್‌ ಭತ್ತ ಸಂಗ್ರಹಿಸುವ ಸಾಮರ್ಥ್ಯದ ಆರು ಟ್ಯಾಂಕರ್‌ ಈಗಲೂ ಮುಗಿಲೆತ್ತರಕ್ಕೆ ಚಾಚಿ ನಿಂತಿವೆ. ಭತ್ತ ಸುರಿಯುವ ಬ್ರಿಜ್‌ ಕೂಡ ಚೆನ್ನಾಗಿದೆ. ಭತ್ತವನ್ನು ಟ್ಯಾಂಕರ್‌ನಿಂದ ಟ್ಯಾಂಕರ್‌ಗೆ ಕೊಂಡೊಯ್ಯುವ ಎಲಿವೇಟರ್‌ಗಳು ತುಕ್ಕು ಹಿಡಿದು ಬಣ್ಣಗೆಟ್ಟಿವೆ. ಘಟಕದ ಮೇಲೇರುವ ಮೆಟ್ಟಿಲುಗಳು ಸುಸ್ಥಿತಿಯಲ್ಲಿವೆ.

ಯಂತ್ರೋಪಕರಣಗಳು ಹಾಗೂ ಕಬ್ಬಿಣದ ವಸ್ತುಗಳನ್ನು ಕಳ್ಳರು ಲೂಟಿ ಹೊಡೆದಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಘಟಕದ ಆವರಣದಲ್ಲಿ ಕಡಲೆಕಾಯಿ ಎಣ್ಣೆ ತಯಾರಿಸುವ ಘಟಕವೂ ಇತ್ತು. ಈಗ ಎಲ್ಲವೂ ಸ್ಥಗಿತಗೊಂಡಿದ್ದು ಆವರಣವಿಡೀ ಮೌನ ಆವರಿದೆ. ಸುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಆರ್‌ಎಪಿಸಿಎಂಎಸ್‌ ಗೋದಾಮುಗಳಿಗೆ ಬಾಡಿಗೆ ಕೊಟ್ಟಿದೆ.

‘ಈ ಆಧುನಿಕ ಭತ್ತದ ಕಣಜ ಮಂಡ್ಯದ ಹೆಮ್ಮೆಯಾಗಿತ್ತು. ಚೆನ್ನೈ, ದೆಹಲಿ, ಲೂದಿಯಾನ ಹಾಗೂ ಮಂಡ್ಯದಲ್ಲಿ ಮಾತ್ರ ಇಂತಹ ಘಟಕಗಳನ್ನು ಭಾರತ ಸರ್ಕಾರ ನಿರ್ಮಿಸಿತ್ತು. ಒಮ್ಮೆ ಭತ್ತವನ್ನು ಬ್ರಿಜ್‌ನಲ್ಲಿ ಸುರಿದರೆ ಅದು ಎಲ್ಲೆಲ್ಲಿಗೆ ಹೋಗುತ್ತದೆ ಎಂಬುದು ತಿಳಿಯುತ್ತಿರಲಿಲ್ಲ. ಸರ್ಕಾರ ಲೆವಿ ನೀತಿಯನ್ನು ರದ್ದು ಮಾಡಿದ ಕಾರಣ ಈ ಘಟಕ ನಿಂತು ಹೋಯಿತು. ಇದು ಅತ್ಯಂತ ಗುಣಮಟ್ಟದ ಕಾಮಗಾರಿಯಾಗಿದ್ದು ಈಗಲೂ ಕಾಂಕ್ರೀಟ್‌ ಟ್ಯಾಂಕರ್‌ಗಳು ಸುಸ್ಥಿತಿಯಲ್ಲಿವೆ. ರೈತರು ಭತ್ತ ಕೊಟ್ಟರೆ ಈಗಲೂ ಈ ಘಟಕಕ್ಕೆ ಜೀವ ತುಂಬಬಹುದು’ ಎಂದು ಆರ್‌ಎಪಿಸಿಎಂಎಸ್‌ನಲ್ಲಿ ಅಕೌಂಟೆಂಟ್‌ ಆಗಿದ್ದ ಸಿ.ಎನ್‌.ದೇವೇಗೌಡ ಹೇಳಿದರು.

‘ಘಟಕ ನಿರ್ಮಾಣದ ಸಾಲವನ್ನು ಈಗಲೂ ತೀರಿಸುತ್ತಿದ್ದೇವೆ. ವರ್ಷಕ್ಕೆ ₹ 50 ಸಾವಿರ ಹಣ ಸಾಲಕ್ಕೆ ಹೋಗುತ್ತಿದೆ. ಯಂತ್ರೋಪಕರಣಗಳು ಹಾಳಾಗಿರುವ ಕಾರಣ ಘಟಕವನ್ನು ಮತ್ತೆ ಬಳಸಲು ಸಾಧ್ಯವಿಲ್ಲ. ಕಾಂಕ್ರೀಟ್‌ ಟ್ಯಾಂಕರ್‌ಗಳು ಉಳಿದಿವೆಯಷ್ಟೇ. ಅದನ್ನು ತೆರವುಗೊಳಿಸಲೂ ಕೋಟ್ಯಂತರ ರೂಪಾಯ ಖರ್ಚು ಮಾಡಬೇಕು. ಹೀಗಾಗಿ ಘಟಕವನ್ನು ಮುಟ್ಟಲು ಹೋಗಿಲ್ಲ’ ಎಂದು ಮಂಡ್ಯ ಆರ್‌ಎಪಿಸಿಎಂಸ್‌ ವ್ಯವಸ್ಥಾಪಕ ನಿರ್ದೇಶಕ ಎಚ್‌.ಪಿ.ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.