ಮಂಡ್ಯ: ‘ಸಾಮಾಜಿಕ ಜಾಲತಾಣಗಳು ಸಾಹಿತ್ಯ ನುಂಗುತ್ತಿರುವುದರಿಂದ ಕನ್ನಡ ಸಾಹಿತ್ಯ ನಲುಗುತ್ತಿದೆ. ಇದರಿಂದ ಹೊರ ಬರಲು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಜ್ಞೆ ಮೂಡಿಸುವುದು ಅಗತ್ಯ’ ಎಂದು ಸಾಹಿತಿ ಕೆ.ಚಂದ್ರಶೇಖರ್ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಡಾ. ಜೀಶಂಪ ಸಾಹಿತ್ಯ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ 7ನೇ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡಿಗರು ನಮ್ಮ ಪಾರಂಪರಿಕ ಸಾಹಿತ್ಯ ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕಿದೆ. ಯುವಕರಿಗೆ ಫೇಸ್‌ಬುಕ್ ಹಾಗೂ ಪಾಸ್‌ಬುಕ್ ಹೊರತುಪಡಿಸಿದರೆ ಸಾಹಿತ್ಯದ ಬುಕ್ ಬಗ್ಗೆ ಆಸಕ್ತಿಯಿಲ್ಲ. ಅವರಲ್ಲಿ ಸಾಹಿತ್ಯದ ಬಗ್ಗೆ ಚಿಂತನೆ ಹೆಚ್ಚುವಂತೆ ಮಾಡಬೇಕಾಗಿದೆ’ ಎಂದರು.
‘ಪೋಷಕರು ಸಹ ಮಕ್ಕಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ವ್ಯಾಮೋಹ ಹೆಚ್ಚಿಸುತ್ತಿದ್ದಾರೆ. ಬೇರೆ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡದಿರುವುದು ದೊಡ್ಡ ತಪ್ಪು. ಮನೆಗಳಲ್ಲಿ ಧಾರವಾಹಿಗಳು, ರಿಯಾಲಿಟಿ ಷೋಗಳ ಮೇಲೆ ಜನರಿಗಿರುವ ಆಸಕ್ತಿ ಸಾಹಿತ್ಯದ ಮೇಲೆ ಇಲ್ಲ’ ಎಂದು ವಿಷಾದಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್.ಈ.ಗಂಗಾಧರಸ್ವಾಮಿ ಮಾತನಾಡಿ, ‘ಕನ್ನಡಿಗರು ಮೊದಲು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಪರರಾಜ್ಯದವನೊಬ್ಬ ಕನ್ನಡಿಗನನ್ನು ಆತನ ತವರು ಭಾಷೆಯಲ್ಲಿ ಮಾತನಾಡಿಸಿದಾಗ ನಮ್ಮವರು ಸಹ ಆತನ ಭಾಷೆಯಲ್ಲೇ ಮಾತನಾಡಲು ಯತ್ನಿಸುತ್ತಾರೆಯೇ ಹೊರತು ನಮ್ಮ ಭಾಷೆ ಕನ್ನಡ ಪರಿಚಯಿಸುವ ಕೆಲಸ ಮಾಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವಿವಿಧ ಮಹನೀಯರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ನಂತರ ಸಾಹಿತಿ ಎನ್.ಶ್ರೀಕಂಠೇಶ್ವರ ಶರ್ಮಾ ರಚನೆಯ ಜ್ಞಾನ ಚಿಂತಾಮಣಿ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷ ಸಾಹಿತಿ ಈ.ಗಂಗೇಗೌಡ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಲುವೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.