ಮದ್ದೂರು: ಕಡೇ ಕಾರ್ತೀಕ ಸೋಮವಾರದ ಅಂಗವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವಾರು ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ, ಹಳೇ ಬಸ್ ನಿಲ್ದಾಣದ ಬಳಿಯ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನ, ಬಸವೇಶ್ವರ ನಗರದ ಮಹದೇಶ್ವರ ಹಾಗೂ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಮಲೈ ಮಹದೇಶ್ವರ, ಚನ್ನೇಗೌಡನದೊಡ್ಡಿ ಮುತ್ತರಾಯ ಹಾಗೂ ಮಹದೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ಇತಿಹಾಸ ಪ್ರಸಿದ್ಧ ವೈದ್ಯನಾಥೇಶ್ವರ, ಚಿಕ್ಕಂಕನಹಳ್ಳಿ ಗ್ರಾಮದ ನಂದಿಬಸವೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ದೇವರ ವಿಗ್ರಹಕ್ಕೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಮಾಡಲಾಯಿತು.
ಜಿಲ್ಲೆ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ವೈದ್ಯನಾಥಪುರದ ಶಿಂಷಾ ನದಿಯಲ್ಲಿ ಸ್ನಾನ ಮಾಡಿ ಬಳಿಕ ಸರತಿ ಸಾಲಿನಲ್ಲಿ ನಿಂತು ವೈದ್ಯನಾಥೇಶ್ವರ ದರ್ಶನ ಪಡೆದರು. ಪ್ರಸನ್ನ ಪಾರ್ವತಾಂಭ ಟ್ರಸ್ಟ್ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಮದ್ದೂರಿನಿಂದ ವೈದ್ಯನಾಥಪುರಕ್ಕೆ ತೆರಳಲು ಭಕ್ತರ ಅನುಕೂಲಕ್ಕಾಗಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.