ADVERTISEMENT

ಮಂಡ್ಯ | ಉದ್ಯಾನ ಅಧ್ವಾನ; ಅಭಿವೃದ್ಧಿ ಗೌಣ

*ಮುರಿದುಬಿದ್ದ ಮಕ್ಕಳ ಆಟಿಕೆಗಳು *ಕಸದ ತೊಟ್ಟಿಗಳಾದ ಪಾರ್ಕ್ *ಶೌಚಾಲಯ, ದೀಪಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 6:42 IST
Last Updated 8 ಜುಲೈ 2024, 6:42 IST
ಮಂಡ್ಯ ನಗರದ ಮಹಾವೀರ ಸರ್ಕಲ್‌ ಸಮೀಪದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ‘ವಾಕಿಂಗ್ ಪಾತ್‌’ ಹಾಳಾಗಿದ್ದು, ವಾಯುವಿಹಾರಿಗಳಿಗೆ ತೊಂದರೆಯಾಗಿದೆ  –ಪ್ರಜಾವಾಣಿ ಚಿತ್ರ: ಧನುಷ್‌ ಡಿ.ವಿ. 
ಮಂಡ್ಯ ನಗರದ ಮಹಾವೀರ ಸರ್ಕಲ್‌ ಸಮೀಪದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ‘ವಾಕಿಂಗ್ ಪಾತ್‌’ ಹಾಳಾಗಿದ್ದು, ವಾಯುವಿಹಾರಿಗಳಿಗೆ ತೊಂದರೆಯಾಗಿದೆ  –ಪ್ರಜಾವಾಣಿ ಚಿತ್ರ: ಧನುಷ್‌ ಡಿ.ವಿ.    

ಮಂಡ್ಯ: ನಗರದ ಉದ್ಯಾನಗಳಿಗೆ ಕಾಯಕಲ್ಪ ಬೇಕಿದ್ದು, ಪಾರ್ಕ್‌ಗಳಿಗೆ ಹೆಸರಿನ ಫಲಕಗಳನ್ನು ಅಳವಡಿಸುವ ಮೂಲಕ ಅದರ ಗೊಂದಲ ಸರಿಪಡಿಸುವ ಕೆಲಸವನ್ನು ನಗರಸಭೆ ಮತ್ತು ಜಿಲ್ಲಾಡಳಿತ ಮಾಡಬೇಕು ಎಂಬುದು ನಿವಾಸಿಗಳು ಆಗ್ರಹವಾಗಿದೆ.

ಉದ್ಯಾನಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಕಾಗದ ಸೇರಿದಂತೆ ತ್ಯಾಜ್ಯವನ್ನು ಬಿಸಾಡಲಾಗಿದೆ. ಕುಳಿತುಕೊಳ್ಳುವ ಆಸನಗಳು ಮುರಿದುಬಿದ್ದಿವೆ. ಮಕ್ಕಳ ಆಟಿಕೆಗಳು ಹಾಳಾಗಿವೆ. ಕೆಲವು ಉದ್ಯಾನಗಳಲ್ಲಿ ವ್ಯಾಯಾಮದ ಉಪಕರಣಗಳನ್ನು ಅಳವಡಿಸಿದ್ದರೂ, ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿವೆ. 

ಉದ್ಯಾನಗಳಲ್ಲಿ ಗಿಡಗಂಟಿ ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿವೆ. ದೀಪದ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಸಂಜೆ ಮತ್ತು ರಾತ್ರಿ ವೇಳೆ ಉದ್ಯಾನಗಳಿಗೆ ಹೋಗಲು ಮಹಿಳೆಯರು ಮತ್ತು ಮಕ್ಕಳು ಭಯಪಡುವಂತಾಗಿದೆ. ಉದ್ಯಾನಗಳು ಅಧ್ವಾನಗೊಂಡಿದ್ದರೂ ನಗರಸಭೆಯ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. 

ADVERTISEMENT

ಸ್ವರ್ಣಸಂದ್ರ ನಗರದ ಶಿವಕುಮಾರ ಸ್ವಾಮೀಜಿ ಪಾರ್ಕ್‌, ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ವನದ ಎರಡು ಪಾರ್ಕ್‌ಗಳು ಹಾಗೂ ಹೌಸಿಂಗ್‌ ಬೋರ್ಡ್‌ನ ಬೋರೇಗೌಡ ಪಾರ್ಕ್‌ ಸದ್ಯಕ್ಕೆ ಸ್ವಚ್ಛವಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಬಾಲಭವನದ ಪಾರ್ಕ್‌ ಸೇರಿದಂತೆ ಕೆಲವು ಪಾರ್ಕ್‌ಗಳು ಶೇ 30ರಷ್ಟು ಚೆನ್ನಾಗಿವೆ. ಇನ್ನುಳಿದ ಪಾರ್ಕ್‌ಗಳಲ್ಲಿ ಮೂಲಸೌಲಭ್ಯ ವಂಚಿತವಾಗಿರುವುದನ್ನು ಕಾಣುತ್ತೇವೆ ಎಂದು ನಗರ ನಿವಾಸಿಗಳಾದ ಶಂಕರ್‌ ಜೇಷ್ಠ, ಟಿ.ವರಪ್ರಸಾದ್‌, ವಿಜಯ್‌ ಕೀರ್ತಿ ಆರೋಪಿಸುತ್ತಾರೆ.

ಮುರಿದುಬಿದ್ದ ಮಕ್ಕಳ ಆಟಿಕೆಗಳು

ಮಳವಳ್ಳಿ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಸಮೀಪದ ಉದ್ಯಾನ ಹೊರತುಪಡಿಸಿ ಉಳಿದ ಹಲವು ಉದ್ಯಾನಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ.

ಪಟ್ಟಣದ ಮೂರನೇ ವಾರ್ಡ್ ನಲ್ಲಿ ಇರುವ ಉದ್ಯಾನದಲ್ಲಿ ಕೆಲವು ಮಕ್ಕಳ ಆಟಿಕೆ ಸಲಕರಣೆಗಳು, ಆಸನಗಳು ಮುರಿದು ಹೋಗಿವೆ. ಶೌಚಾಲಯದ ಹಾಗೂ ಕುಡಿಯುವ ನೀರಿನ ಸೌಲಭ್ಯವಿಲ್ಲದಂತಾಗಿದೆ. ಅಲ್ಲದೇ ಬೆಳೆದು ನಿಂತಿರುವ ಗಿಡಗಂಟಿಗಳಿಂದ ಜನರು ವಾಯುವಿಹಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಬೀದಿ ನಾಯಿಗಳ ಹಾಗೂ ಕೋತಿಗಳ ಕಾಟದಿಂದ ಜನರು ರೋಸಿ ಹೋಗಿದ್ದಾರೆ.

ದಶಕಗಳ ಹಿಂದೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಪಟ್ಟಣದ ದೊಡ್ಡಕೆರೆಯ ದಡದಲ್ಲಿ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನೀರಾವರಿ ಇಲಾಖೆಯ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನ ನಿರ್ಮಾಣ ಮಾಡಿದ್ದರು. ಅದರ ನಿರ್ವಹಣೆ ಜವಾಬ್ದಾರಿ ಹೊರಬೇಕಾಗಿದ್ದ ಪುರಸಭೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಉದ್ಯಾನಗಳಲ್ಲಿನ ಕಲ್ಲುಹಾಸುಗಳು ಕಿತ್ತು ಹೋಗಿವೆ.

ಕಳೆದ ಕೆಲ ದಿನಗಳ ಹಿಂದೆ ನೀರಾವರಿ ಇಲಾಖೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನವನ್ನು ಪುರಸಭೆ ಹಸ್ತಾಂತರ ಮಾಡಲು ಮುಂದಾಗಿದ್ದು, ಇನ್ನೂದಾರೂ ಪುರಸಭೆ ಸೂಕ್ತ ವ್ಯವಸ್ಥೆ ಕಲ್ಪಿಸುವುದೇ ಕಾದು ನೋಡಬೇಕಿದೆ.

ನಿರ್ವಹಣೆಯಿಲ್ಲದೆ ಸೊರಗಿದ ಪಾರ್ಕ್‌

ಮದ್ದೂರು: ಪಟ್ಟಣದ ವ್ಯಾಪ್ತಿಯ ಲೀಲಾವತಿ ಬಡಾವಣೆಯಲ್ಲಿರುವ ಲೀಲಾವತಿ ಉದ್ಯಾನವನ, ಸಿದ್ಧಾರ್ಥ ನಗರದ ಅಂಬೇಡ್ಕರ್ ಪಾರ್ಕ್ ಸೇರಿದಂತೆ ಇನ್ನೆರಡು ಚಿಕ್ಕ ಪಾರ್ಕ್‌ಗಳು ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿವೆ.

ಪಟ್ಟಣದ ಪ್ರಮುಖ ಉದ್ಯಾನವಾದ ಲೀಲಾವತಿ ಪಾರ್ಕ್‌ನಲ್ಲಿ ನಿರ್ವಹಣೆ ಮಾಡಲು ಕೇವಲ ಒಬ್ಬರು ಪೌರಕಾರ್ಮಿಕರು ಮಾತ್ರ ಇದ್ದು, ಉಳಿದ ಯಾವುದೇ ಉದ್ಯಾನಗಳಿಗೆ ಒಬ್ಬರೂ ಪೌರಕಾರ್ಮಿಕರು ಇಲ್ಲದಿರುವುದು ವಿಪರ್ಯಾಸ. ಇದರಿಂದಾಗಿ ಪಾರ್ಕ್ ನಲ್ಲಿರುವ ಮಕ್ಕಳ ಆಟಿಕೆಗಳು ಹಾಗೂ ಹಿರಿಯ ನಾಗರಿಕರಿಗೆ ಇರುವ ವ್ಯಾಯಾಮದ ಸಲಕರಣೆಗಳು ನಿರ್ವಹಣೆಯಿಲ್ಲದೆ ಹಾಳಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಗಿಡಗಂಟಿ ಬೆಳೆದುಕೊಂಡು ಉದ್ಯಾನದ ಅಂದ ಹಾಳಾಗುತ್ತಿದ್ದು, ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ ಎಂದು ಹಿರಿಯ ನಾಗರಿಕರು ದೂರಿದ್ದಾರೆ. 

ಹೈಟೆಕ್‌ ಉದ್ಯಾನ; ಜನರಿಗೆ ವರದಾನ

ಪಾಂಡವಪುರ: ಪಟ್ಟಣದಲ್ಲಿರುವ ಹೈಟೆಕ್ ಉದ್ಯಾನವು ಅತ್ಯುತ್ತಮವಾಗಿದ್ದು, ಸಾರ್ವಜನಿಕರಿಗೆ ತುಂಬ ಅನುಕೂಲವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಸಾರ್ವಜನಿಕರು, ಹಿರಿಯ ನಾಗರಿಕರು ವಾಕಿಂಗ್ ಮಾಡುವುದಲ್ಲದೆ, ಕುಳಿತು ವಿಶ್ರಾಂತ ಪಡೆಯುತ್ತಿದ್ದಾರೆ. ಉದ್ಯಾನದಲ್ಲಿರುವ ಆಟಿಕೆಗಳು ಮಕ್ಕಳಿಗೆ ಅನುಕೂಲವಾಗಿದ್ದು, ಮಕ್ಕಳು ತುಂಬ ಖುಷಿಯಿಂದ ಆಟವಾಡಿ ಸಂತಸಪಡುತ್ತಿದ್ದಾರೆ. ಆದರೆ ಉದ್ಯಾನದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ಸೌಕರ್ಯಗಳಿರುವುದಿಲ್ಲ. ಉದ್ಯಾನದ ನಿರ್ವಹಣೆಯ ಕೊರತೆ ಇದೆ ಎಂದು ನಿವಾಸಿಗಳು ದೂರಿದ್ದಾರೆ. 

ಸುಂದರ ಉದ್ಯಾನದ ಕೊರತೆ

ಕೆ.ಆರ್.ಪೇಟೆ: ಪಟ್ಟಣದಲ್ಲಿ 50 ಸಾವಿರ ಜನಸಂಖ್ಯೆ ಇದ್ದು ಪುರಸಭೆಯ ಆಡಳಿತವನ್ನು ಹೊಂದಿದೆ. ಆದರೆ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಸುಂದರ ಹಸಿರು ಉದ್ಯಾನಗಳನ್ನು ನಿರ್ಮಾಣ ಮಾಡುವುದರಲ್ಲಿ ಪುರಸಭೆ ವಿಫಲವಾಗಿದೆ. ಗ್ರಾಮಭಾರತಿ ಶಾಲೆಯ ಪಕ್ಕ ಇರುವ ಪುರಸಭೆಯ ಮೈದಾನವನ್ನು ಉದ್ಯಾವನ್ನಾಗಿ ಪುರಸಭೆಯವರು ಅಭಿವೃದ್ಧಿಗೊಳಿಸಬಹುದಾಗಿದ್ದರೂ ಕೈಚೆಲ್ಲಿರುವುದು ಬಡಾವಣೆಯ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. 18ನೇ ವಾರ್ಡಿನಲ್ಲಿ ಉದ್ಯಾನದ ಅಭಿವೃದ್ಧಿಗೆ ವಾರ್ಡ್ ಸದಸ್ಯ ಸಂತೋಷ್ ಕುಮಾರ್ ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ್ದರೂ ಪುರಸಭೆಯು ಕ್ರಮ ಕೈಗೊಂಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಪುರಸಭೆಯ ವ್ಯಾಪ್ತಿಗೆ ಬರುವ ಹೊಸ ಹೊಳಲು ಚಿಕ್ಕಕೆರೆಯನ್ನು ಅಭಿವೃದ್ಧಿಗೊಳಿಸಿ ಉದ್ಯಾನ ಬೋಟಿಂಗ್ ವ್ಯವಸ್ಥೆ ಪಾರ್ಕ್ ಮುಂತಾದವುಗಳನ್ನು ನಿರ್ಮಿಸಲು ಹಿಂದಿನ ಬಿಜೆಪಿ ಸರ್ಕಾರ ₹10 ಕೋಟಿ  ವೆಚ್ಚದಲ್ಲಿ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಿತ್ತು. ಆದರೆ ಈಗ ಅದು ನನೆಗುದಿಗೆ ಬಿದ್ದಿದೆ. ಅದೇ ರೀತಿಯಲ್ಲಿ ದೇವಿರಮ್ಮಣ್ಣಿ  ಕೆರೆಯ ಸುತ್ತ ವಾಯು ವಿಹಾರಿಗಳಿಗೆ ಫುಟ್‌ಪಾತ್‌  ನಿರ್ಮಿಸುವ ಯೋಜನೆ ಕೂಡ ಪೂರ್ಣಗೊಂಡಿಲ್ಲ. 

ಅಧ್ವಾನಗೊಂಡ ಉದ್ಯಾನ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸ್ಥಳೀಯ ಪುರಸಭೆಯ ಸುಪರ್ದಿಯಲ್ಲಿರುವ ನಾಲ್ಕು ಉದ್ಯಾನಗಳ ಪೈಕಿ ಮೂರು ಉದ್ಯಾನಗಳು ತೀರಾ ಅಧ್ವಾನಗೊಂಡಿವೆ. ಪಟ್ಟಣದ ಜೈನ ಬಸದಿ ಬಡಾವಣೆಯ ಉದ್ಯಾನ ವಾಹನಗಳನ್ನು ನಿಲ್ಲಿಸುವ ತಾಣವಾಗಿದೆ. ಅಲ್ಲಲ್ಲಿ ತ್ಯಾಜ್ಯ ಚೆಲ್ಲಾಡುತ್ತಿದೆ. ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಕಾವೇರಿ ನದಿ ದಡದಲ್ಲಿರುವ ಉದ್ಯಾನವನದ ಎಡ ಭಾಗದಲ್ಲಿ ಹಾಕಿದ್ದ ಕಲ್ಲು ಬೆಂಚುಗಳು ಮುರಿದು ಬಿದ್ದಿವೆ. ನದಿ ಸಂರಕ್ಷಣಾ ಗೋಡೆ ಕೂಡ ಕುಸಿದೆ. ಆಲಂಕಾರಿಕ ದೀಪಗಳು ಕೆಟ್ಟು ಹೋಗಿವೆ. ಪುರಸಭೆ ವ್ಯಾಪ್ತಿಯ ಗಂಜಾಂನ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿ ಕುರಾದ್‌ ಬೀದಿ ಸಮೀಪ ಇರುವ ಸಾರ್ವಜನಿಕ ಉದ್ಯಾನ ದುಸ್ಥಿತಿ ತಲುಪಿದೆ. ಜೋಕಾಲಿ ಇತರ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಪಾದಚಾರಿ ಮಾರ್ಗದ ಸಿಮೆಂಟ್‌ ಬ್ಲಾಕ್‌ಗಳು ಕಿತ್ತು ಬಂದಿವೆ. ಉದ್ಯಾನದ ಗೇಟ್‌ ಕೂಡ ಮುರಿದಿದ್ದು ಸ್ಥಳೀಯರು ಉದ್ಯಾನದ ಒಳಗೆ ದನಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಶ್ರೀರಂಗನಾಥಸ್ವಾಮಿ ದೇವಾಲಯದ ಬಲ ಪಾರ್ಶ್ವದಲ್ಲಿರುವ ಉದ್ಯಾನವನದ ಪಾದಚಾರಿ ಮಾರ್ಗದಲ್ಲಿ ಕೆಲವೆಡೆ ಗುಂಡಿಗಳು ನಿರ್ಮಾಣವಾಗಿವೆ. ಮರದ ಬೇರುಗಳು ಪಾದಚಾರಿ ಮಾರ್ಗಕ್ಕೂ ಹಬ್ಬಿದ್ದು ವಾಯು ವಿಹಾರಿಗಳು ಎಡವಿ ಬೀಳುತ್ತಿದ್ದಾರೆ. ಉದ್ಯಾನದ ಒಂದು ಮೂಲೆಯಲ್ಲಿ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ ಎಂದು ವಾಯುವಿಹಾರಿಗಳು ದೂರಿದ್ದಾರೆ. 

ಹಾಳುಕೊಂಪೆಯಾದ ಪಾರ್ಕ್‌ ನಾಗಮಂಗಲ: ಪಟ್ಟಣದ ಹಿರಿಕೆರೆಯ ಏರಿಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಲಾಗಿದ್ದ ಸಾರ್ವಜನಿಕ ಉದ್ಯಾನವು ಕೆಲವೇ ವರ್ಷಗಳಲ್ಲೇ ನಿರ್ವಹಣೆಯಿಲ್ಲದೇ ಹಳ್ಳ ಹಿಡಿದಿದೆ. ವರ್ಷ ಕಳೆಯುವ ವೇಳೆಗೆ ಎಲ್ಲಾ ಸವಲತ್ತುಗಳು ಸ್ಥಗಿತವಾಗುವ ಮೂಲಕ ಹಾಳು ಕೊಂಪೆಯಾಗಿದೆ.  ಉದ್ಯಾನಕ್ಕೆ ಬರುವ ಜನರಿಗೆ ಕುಡುಕರು ಜೂಜುಕೋರರು ಮತ್ತು ಸೋಮಾರಿಗಳ ಬೇಜವಾಬ್ದಾರಿ ವರ್ತನೆಯು ಸಹ ಮುಜುಗರ ಉಂಟು ಮಾಡುವಂತಿರುತ್ತದೆ. ಉದ್ಯಾನಕ್ಕೆ ಅಳವಡಿಸಿದ್ದ ವಿದ್ಯುತ್ ದೀಪಗಳನ್ನು ಸಹ ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಅಲ್ಲದೇ ಶೌಚಾಲಯವು ಉಪಯೋಗಕ್ಕೆ ಬರದಂತಾಗಿದೆ. ‌ಕಿಡಿಗೇಡಿಗಳು ಇರುವ ಆಸನಗಳನ್ನು ಹೊಡೆದು ಹಾಕಿದ್ದು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ನೆಲಹಾಸುಗಳು ಸಹ ಕಿತ್ತು ಬಂದಿದ್ದು ಉದ್ಯಾನ‌ ತುಂಬ ಗಿಡಗಂಟಿಗಳು ಬೆಳೆದು ನಿಂತಿದ್ದು ಕಾಡಿನಂತಾಗಿದೆ ಎಂದು ಜನರು ದೂರಿದ್ದಾರೆ. 

ಯಾರು ಏನಂತಾರೆ...?

ಉದ್ಯಾನ ಆಧುನೀಕರಣಗೊಳ್ಳಲಿ

ನಗರದ ಹೌಸಿಂಗ್ ಬೋಡ್‌ನಲ್ಲಿರುವ ಬೋರೇಗೌಡ ಪಾರ್ಕ್‌ನಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆಯಾಗಬೇಕು. ನಗರಸಭೆ ಮುಂಭಾಗ ಇರುವ ಗಾಂಧಿ ಪಾರ್ಕ್‌ ಅನ್ನು ಸಹ ಅಭಿವೃದ್ಧಿಪಡಿಸಬೇಕು. ನಗರದ ವಿವಿಧೆಡೆ ಇರುವ ಎಲ್ಲಾ ಉದ್ಯಾನಗಳನ್ನು ಜನರ ಉಪಯೋಗಕ್ಕೆ ಯೋಗ್ಯವಾಗುವಂತೆ ಆಧುನೀಕರಣಗೊಳಿಸಬೇಕು - ಬಿ.ಎಂ.ಅಪ್ಪಾಜಪ್ಪ ಕೋಶಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು

ಪಾರ್ಕ್‌ನಲ್ಲಿ ಒಣಗಿರುವ ರಂಬೆ ಕಡಿಯಿರಿ

ಇಲ್ಲಿನ ಅಶೋಕ ನಗರದ ಬಾಲಭವನ ಒಳಗೊಂಡಿರುವ ಉದ್ಯಾನದಲ್ಲಿ ಶೌಚಾಲಯ ವ್ಯವಸ್ಥೆ ಗಬ್ಬೆದ್ದು ನಾರುತ್ತಿದೆ. ವಾಯುವಿಹಾರಕ್ಕೆ ಬರುವ ನಾಗರಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ನಾಗರಿಕರು ವ್ಯಾಯಾಮ ಮಾಡುವ ಹಾಗೂ ಮಕ್ಕಳು ಆಟವಾಡುವ ಉಪಕರಣಗಳು ದುಸ್ಥಿತಿಯಲ್ಲಿವೆ. ಕೆಲವು ಮರಗಳಲ್ಲಿರುವ ಒಣಗಿದ ರೆಂಬೆಗಳನ್ನು ತೆರವುಗೊಳಿಸಬೇಕು. ಹಾಳಾಗಿರುವ ವಿದ್ಯುತ್ ದೀಪದ ವ್ಯವಸ್ಥೆಯನ್ನು ಸರಿಪಡಿಸಬೇಕು - ಕೆಂಪಯ್ಯ ನಿವೃತ್ತ ಪ್ರಾಂಶುಪಾಲರು ಮಂಡ್ಯ

₹3 ಕೋಟಿಯಲ್ಲಿ ಪಾರ್ಕ್‌ ಅಭಿವೃದ್ಧಿ

‘ಶಾಸಕರ ನಿಧಿಯಿಂದ ಉದ್ಯಾನಗಳ ಅಭಿವೃದ್ಧಿಗೆ ₹3 ಕೋಟಿ ಅನುದಾನ ಬಂದಿದ್ದು ಪುರಸಭೆ ವ್ಯಾಪ್ತಿಯ ಎಲ್ಲ ಉದ್ಯಾನಗಳನ್ನು ಪುನರುಜ್ಜೀವನಗೊಳಿಸಲಾಗುವುದು. ಕಿರಂಗೂರು ಬನ್ನಿ ಮಂಟಪ ವೃತ್ತದಿಂದ ಪಶ್ಚಿಮವಾಹಿನಿವರೆಗೆ ರಸ್ತೆ ವಿಭಜಕದ ಮೇಲೆ ಹಸಿರು ಲಾನ್‌ ಮತ್ತು ಆಲಂಕಾರಿಕ ಗಿಡಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ – ಎಂ.ಎಲ್‌. ದಿನೇಶ್‌ ಪುರಸಭೆ ಸದಸ್ಯ ಶ್ರೀರಂಗಪಟ್ಟಣ

ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ

ಮದ್ದೂರು ಪಟ್ಟಣದ ಲೀಲಾವತಿ ಅಂಬೇಡ್ಕರ್ ಉದ್ಯಾನ ಸೇರಿದಂತೆ ಇತರೆ ಪಾರ್ಕ್‌ಗಳು ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು ಈ ಬಗ್ಗೆ ಪುರಸಭಾ ಸದಸ್ಯರು ಹಲವಾರು ಬಾರಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ - ಸುರೇಶ್ ಹಾಲಿ ಸದಸ್ಯ ಪುರಸಭೆ ಮದ್ದೂರು.‌

ವರದಿ: ಸಿದ್ದು ಆರ್‌.ಜಿ.ಹಳ್ಳಿ

ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್‌, ಹಾರೋಹಳ್ಳಿ ಪ್ರಕಾಶ್‌, ಮೋಹನ್‌ ರಾಗಿಮುದ್ದನಹಳ್ಳಿ, ಯು.ವಿ. ಉಲ್ಲಾಸ್‌, ಎಂ.ಆರ್‌. ಅಶೋಕ್‌, ಟಿ.ಕೆ. ಲಿಂಗರಾಜು

ಮಂಡ್ಯ ನಗರದ ರೈಲ್ವೆ ಸ್ಟೇಷನ್‌ ಸಮೀಪದ ಜ್ಯುಬಿಲಿ ಪಾರ್ಕ್‌ ತಂಬಿಬೇಲಿ ಮುರಿದುಬಿದ್ದಿರುವ ದೃಶ್ಯ
ನಾಗಮಂಗಲ ಪಟ್ಟಣದ ಹಿರಿಕೆರೆಯ ಏರಿಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಲಾಗಿರುವ ಸಾರ್ವಜನಿಕ ಉದ್ಯಾನದಲ್ಲಿ ಆಸನ ಮುರಿದುಬಿದ್ದಿರುವ ದೃಶ್ಯ 
ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿ ಕುರಾದ್‌ ಬೀದಿ ಸಮೀಪ ಇರುವ ಸಾರ್ವಜನಿಕ ಉದ್ಯಾನದ ದುಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.