ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸೋಮವಾರ ನಡೆದ ದಸರಾ ಉತ್ಸವದಲ್ಲಿ ಜಾನಪದ ಕಲಾ ತಂಡಗಳು ಜನಮನ ರಂಜಿಸಿದವು.
ವೀಗಾಸೆ ಕಲಾವಿದರು ಕತ್ತಿ ಜಳಪಿಸುತ್ತಾ ವೀರಾವೇಶದಿಂದ ಹೆಜ್ಜೆ ಹಾಕಿದರು. ಭರತನಾಟ್ಯ ಕಲಾವಿದೆಯರು ಅಲ್ಲಲ್ಲಿ ಗೆಜ್ಜೆ ಕಟ್ಟಿ, ವಿವಿಧ ಭಾವ ಭಂಗಿಗಳಲ್ಲಿ ಕುಣಿದು ರಂಜಿಸಿದರು. ನವಿಲು ಕಲಾವಿದೆಯರು ರೆಕ್ಕೆ ಬಿಚ್ಚಿ ಹಾರುವಂತೆ ಅಭಿನಯ ಮಾಡಿ ತೋರಿದರು. ಕೇರಳದ ಚಂಡೆ ಕಲಾವಿದರು ಡುಮ್ಮು ಟಕ್ಕ ಟಕ್ಕ ಸದ್ದು ಮಾಡುತ್ತಾ ಸಾಗಿದರು.
ಕೋಳಿ ವೇಷಧಾರಿಗಳು ಥೇಟ್ ಕೋಳಿಗಳಂತೆ ಕೊಕ್ಕೋ ಎಂದು ಕೂಗುತ್ತಾ, ಕಾಲು ಕೆರೆಯುತ್ತಾ ಪುಟ ಪುಟನೆ ನಡೆದು ಪ್ರೇಕ್ಷಕರ ಗಮನ ಸೆಳೆದರು. ಯಕ್ಷಗಾನ, ಬೆದರು ಬೊಂಬೆ, ಪಟದ ಕುಣಿತ, ನಂದಿ ಕೋಲು, ಕೋಲಾಟ, ಕಂಸಾಳೆ, ಮಹಿಳೆಯರ ಗುಂಪು ಕೋಲಾಟ, ಹಲಗೆ ಮೇಳಗಳು ಉತ್ಸವ ಕಳೆಗಟ್ಟುವಂತೆ ಮಾಡಿದವು.
ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ಬೆಂಕಿ ಚಕ್ರ ಕಲಾವಿದರು ಧಗ ಧಗನೆ ಉರಿಯುವ ಚಕ್ರ ತಿರುಗಿಸಿ ಧೈರ್ಯ ಪ್ರದರ್ಶಿಸಿದರು. ಚಕ್ರ ತಿರುಗಿಸುವಾಗ ಪಕ್ಕದಲ್ಲಿದ್ದವರು ಬೆದರಿ ಹಿಂದೆ ಸರಿದರು. ಕುದುರೆಗಳು ತಮ್ಮದೇ ಗಾಂಭೀರ್ಯದಿಂದ ನಡೆದವು. ರಾಜಸ್ಥಾನಿ ನೃತ್ಯ ತಂಡದ ಯುವಕರು ತಮ್ಮ ವೇಶ ಭೂಷಣದ ಮೂಲಕ ಆ ರಾಜ್ಯದ ಸಾಂಪ್ರದಾಯಿಕ ಉಡುಗೆಯನ್ನು ಪ್ರದರ್ಶಿಸಿದರು. ಈ ತಂಡದ ಯುವತಿಯರು ವಯ್ಯಾರ ತೋರಿದರು. ಜಂಬೂ ಸವಾರಿಯ ಮುಂದೆ ಶಹನಾಯಿ, ಸ್ಯಾಕ್ಸೋಫೋನ್, ಡೋಲು ಕಲಾವಿದರು ವಾದ್ಯ ನುಡಿಸುತ್ತಾ ಸಾಗಿದರು.
ಸ್ತಬ್ದಚಿತ್ರಗಳ ಪೈಕಿ ಭಾರತೀಯ ಬೌದ್ಧ ಮಹಾಸಭಾ ಸಿದ್ದಪಡಿಸಿದ್ದ ‘ಯುದ್ದ ಬೇಡ, ಬುದ್ದ ಬೇಕು’ ಸ್ತಬ್ದ ಚಿತ್ರ ನೋಡುಗರ ಗಮನ ಸೆಳೆಯಿತು.
ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ತೋಟಗಾರಿಕೆ, ಆರೋಗ್ಯ ಇತರ ಇಲಾಖೆಗಳ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿದ್ದವು. ಬಾಲ್ಯ ವಿವಾಹ ಪದ್ಧತಿ, ಜಾಗೃತಿ ಸ್ತಬ್ದಚಿತ್ರ ನೈಜವಾಗಿತ್ತು. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಸ್ತಬ್ದಚಿತ್ರವೂ ಈ ಉತ್ಸವದಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.