ADVERTISEMENT

ಶ್ರೀರಂಗಪಟ್ಟಣ | ಸ್ವಂತ ಹಣದಿಂದ ನಾಲೆ ಸ್ವಚ್ಛಗೊಳಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 14:14 IST
Last Updated 29 ಜೂನ್ 2024, 14:14 IST
   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ರಾಂಪುರ ಬಳಿ ಮುಚ್ಚಿ ಹೋದ ಸ್ಥಿತಿಯಲ್ಲಿದ್ದ ಸಿಡಿಎಸ್‌ ನಾಲೆಯ ವಿತರಣಾ ನಾಲೆಯನ್ನು ರೈತರೇ ಹಣ ಖರ್ಚು ಮಾಡಿ ಶನಿವಾರ ಸ್ವಚ್ಛಗೊಳಿಸಿದರು.

ರಾಂಪುರದಿಂದ ಮೂಲ ಗೌತಮ ಕ್ಷೇತ್ರದ ಕಡೆಗೆ ಹರಿಯುವ ವಿತರಣಾ ನಾಲೆ ಗಿಡ ಗಂಟಿಗಳಿಂದ ಸಂಪೂರ್ಣ ಮುಚ್ಚಿ ಹೋಗಿತ್ತು. ರೈತರಾದ ಆರ್‌.ಕೆ. ರಾಮಚಂದ್ರು, ಮಹದೇವು, ಯೋಗೇಶ್‌, ಕೃಷ್ಣಪ್ಪ, ಜಯರಾಂ, ಸುನಿಲ್‌, ಶ್ರೀಕಂಠು, ಸದಾನಂದ, ಟೈಲರ್‌ ಮಂಜು ಇತರರು ₹10 ಸಾವಿರಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ, ಜೆಸಿಬಿ ಯಂತ್ರ ತರಿಸಿ ನಾಲೆಯನ್ನು ಸ್ವಚ್ಛಗೊಳಿಸಿದರು. ತಾವೂ ನಾಲೆಗೆ ಇಳಿದು ಒಂದೂವರೆ ಕಿ.ಮೀ. ಉದ್ದದ ಈ ವಿತರಣಾ ನಾಲೆಯಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆಗೆದು ಹಸನು ಮಾಡಿದರು.

‘ನಾಲೆಯನ್ನು ಸ್ವಚ್ಛಗೊಳಿಸುವಂತೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಯಾರೂ ಇತ್ತ ಗಮನ ಹರಿಸುತ್ತಿರಲಿಲ್ಲ. ನಾಲೆ ಮುಚ್ಚಿಹೋಗುವ ಸ್ಥಿತಿ ತಲುಪಿತ್ತು. ನೂರಕ್ಕೂ ಹೆಚ್ಚು ರೈತರ ಜಮೀನಿಗೆ ನೀರು ಸಿಗದೆ ನಷ್ಟ ಅನುಭವಿಸುತ್ತಿದ್ದರು. ಅಧಿಕಾರಿಗಳ ಬಗ್ಗೆ ನಂಬಿಕೆ ಇಲ್ಲದ ಕಾರಣ ಸ್ವಂತ ಹಣ ಹಾಕಿ ನಾಲೆಯನ್ನು ನಾವೇ ಸ್ವಚ್ಛಗೊಳಿಸಿದ್ದೇವೆ’ ಎಂದು ರೈತ ಶ್ರೀಕಂಠು ಹೇಳಿದರು.

ADVERTISEMENT

‘ಈ ವಿತರಣಾ ನಾಲೆಗೆ ಹೊಂದಿಕೊಂಡ ರಸ್ತೆ ಒತ್ತುವರಿಯಾಗಿದೆ. ಅದನ್ನು ತೆರವು ಮಾಡಿಸಿ ನಕಾಶೆಯಲ್ಲಿ ಇರುವಂತೆ ರಸ್ತೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ನ್ಯಾಯಾಲಯದ ಆದೇಶ ಇದ್ದರೂ ತಾಲ್ಲೂಕು ಆಡಳಿತ ಅತಿಕ್ರಮ ತೆರವು ಮಾಡಿಸುತ್ತಿಲ್ಲ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.