ADVERTISEMENT

ಶ್ರೀರಂಗಪಟ್ಟಣ | ಕಾವೇರಿಯಲ್ಲಿ ಪ್ರವಾಹ: ಆಶ್ರಮದಿಂದ 8 ಮಂದಿ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:23 IST
Last Updated 20 ಜುಲೈ 2024, 14:23 IST
ಶ್ರೀರಂಗಪಟ್ಟಣ ಸಮೀಪ ಪಶ್ಚಿಮವಾಹಿನಿ ಬಳಿ ಕಾವೇರಿ ನದಿ ತೀರಕ್ಕೆ ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಶೇಕ್‌ ತನ್ವೀರ್‌ ಆಸಿಫ್‌, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು
ಶ್ರೀರಂಗಪಟ್ಟಣ ಸಮೀಪ ಪಶ್ಚಿಮವಾಹಿನಿ ಬಳಿ ಕಾವೇರಿ ನದಿ ತೀರಕ್ಕೆ ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಶೇಕ್‌ ತನ್ವೀರ್‌ ಆಸಿಫ್‌, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು   

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕುಮಾರ ನೇತೃತ್ವದ ತಂಡ ಶನಿವಾರ ತಾಲ್ಲೂಕಿನ ವಿವಿಧೆಡೆ ನದಿ ತೀರಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿತು.

ಜಲಾಶಯದ ತಗ್ಗಿನಲ್ಲಿರುವ ಬೆಳಗೊಳ ಸಮೀಪದ ಪ್ರವಾಸಿ ತಾಣಗಳಾದ ಬಲಮುರಿ ಮತ್ತು ಎಡಮುರಿ ಫಾಲ್ಸ್‌ಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಬಲಮುರಿ ಬಳಿ ಇದ್ದ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಬೆಳಗೊಳ ಬಳಿ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಭಂ ಭಂ ಆಶ್ರಮದಲ್ಲಿ ಇರುವವರನ್ನು ಸಂಪರ್ಕಿಸಿ ನಡುಗಡ್ಡೆಯಿಂದ ಹೊರಕ್ಕೆ ಬರುವಂತೆ ತಿಳಿಸಿದರು. ಆಶ್ರಮದಲ್ಲಿ ಇದ್ದ 18 ಮಂದಿಯ ಪೈಕಿ 8 ಮಂದಿಯನ್ನು ಹೊರಕ್ಕೆ ಕರೆಸಿದರು. ಉಳಿದವರನ್ನೂ ಈಚೆಗೆ ಕರೆಸಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅಲ್ಲಿಂದ ಕಾರೇಕುರ ಬಳಿಗೆ ತೆರಳಿದ ಅಧಿಕಾರಿಗಳು ನದಿಯ ತೀರಕ್ಕೆ ಹೋಗದಂತೆ ರೈತರಿಗೆ ಸೂಚಿಸಿದರು. ಪಟ್ಟಣ ಸಮೀಪದ ಪಶ್ಚಿಮವಾಹಿನಿ ತಾಣಕ್ಕೂ ಭೇಟಿ ನೀಡಿದ ಅಧಿಕಾರಿಗಳ ತಂಡ ನದಿ ದಡದಲ್ಲಿರುವ ದೇವಾಲಯ ಮತ್ತು ಮನೆಗಳ ಬಗ್ಗೆ ಮಾಹಿತಿ ಪಡೆಯಿತು. ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಇತರ ಕಾರ್ಯಗಳನ್ನು ಪ್ರವಾಹ ಪರಿಸ್ಥಿತಿ ತಗ್ಗುವವರೆಗೆ ಸ್ಥಗಿತಗೊಳಿಸುವಂತೆ ಹೇಳಿದರು.

‍ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿ ಇತರರ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ರಾಂಪುರ ಬಳಿಯ ಗೌತಮ ಕ್ಷೇತ್ರ ದ್ವೀಪದಲ್ಲಿರುವ ಗಜಾನನ ಸ್ವಾಮೀಜಿ ಅವರಿಗೆ ಹೊರಗೆ ಬರುವಂತೆ ನೋಟಿಸ್‌ ನೀಡಲಾಗಿದೆ ಎಂದು ಕಂದಾಯ ನಿರೀಕ್ಷಕ ಭಾಸ್ಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.