ADVERTISEMENT

ಸ್ಟಾರ್‌ ಚಂದ್ರು ಗೆಲುವು ನಿಶ್ಚಿತ, ಭಯ ಬೇಡ: ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 15:13 IST
Last Updated 24 ಮೇ 2024, 15:13 IST
ಕೆವಿಎಸ್‌ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿದರು. ಸಿ.ಡಿ.ಗಂಗಾಧರ್‌, ಬಿ.ಎಲ್‌.ದೇವರಾಜು, ಎಂ.ಶ್ರೀನಿವಾಸ್‌, ಎನ್‌.ಅಪ್ಪಾಜಿಗೌಡ, ಗಣಿಗ ರವಿಕುಮಾರ್‌ ಇದ್ದಾರೆ
ಕೆವಿಎಸ್‌ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿದರು. ಸಿ.ಡಿ.ಗಂಗಾಧರ್‌, ಬಿ.ಎಲ್‌.ದೇವರಾಜು, ಎಂ.ಶ್ರೀನಿವಾಸ್‌, ಎನ್‌.ಅಪ್ಪಾಜಿಗೌಡ, ಗಣಿಗ ರವಿಕುಮಾರ್‌ ಇದ್ದಾರೆ   

ಮಂಡ್ಯ: ‘ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಜೆಡಿಎಸ್‌ ಮುಖಂಡರ ಧ್ವನಿ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಮಾತನಾಡಲು ಕಾಂಗ್ರೆಸ್‌ ಕಾರ್ಯಕರ್ತರು ಹಿಂಜರಿಕೆ, ಭಯ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರ ಗೆಲುವು ನಿಶ್ಚಿತವಾಗಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ವಿಧಾನ ಪರಿಷತ್‌, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನಮಗೂ ಚುನಾವಣೆ ನಡೆಸಿ ಸಾಕಷ್ಟು ಅನುಭವವಿದೆ. ಚುನಾವಣೆ ಹೇಗೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಚೆನ್ನಾಗಿ ಗೊತ್ತಿದೆ. ಅದರ ಆಧಾರದ ಮೇಲೆ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಚುನಾವಣೆಯಲ್ಲಿ ಸಾರ್ವಜನಿಕರು, ಮಹಿಳೆಯರು ನಮ್ಮ ಅಭ್ಯರ್ಥಿಯ ಕೈಹಿಡಿದಿದ್ದಾರೆ. ಗ್ಯಾರಂಟಿ ಯೋಜನೆಗಳ ಪರವಾಗಿ ಜನರು ಮತದಾನ ಮಾಡಿದ್ದಾರೆ’ ಎಂದರು.

ADVERTISEMENT

‘ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೆ.ಟಿ.ಶ್ರೀಕಂಠೇಗೌಡರಿಗೆ ಟಿಕೆಟ್ ತಪ್ಪಿಸಿ ಜೆಡಿಎಸ್‌ ಬೇರೆಯವರಿಗೆ ಟಿಕೆಟ್‌ ನೀಡಿದೆ. ಅವರಿಗೂ ಶಿಕ್ಷಕರ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆ ಅಭ್ಯರ್ಥಿಯಲ್ಲಿರುವ ಬೇರೆ ಶಕ್ತಿ ನೋಡಿ ಟಿಕೆಟ್ ನೀಡುವ ನಿರ್ಧಾರ ಮಾಡಿದ್ದಾರೆ. ಕೇವಲ ದುಡ್ಡಿದ್ದ ಮಾತ್ರಕ್ಕೆ ಚುನಾವಣೆಯನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಶಿಕ್ಷಕರೊಂದಿಗೆ ನಿರಂತರ ಒಡನಾಟ, ಸಂಪರ್ಕವಿರಬೇಕು. ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಾಮರ್ಥ್ಯವಿರಬೇಕು’ ಎಂದು ತಿಳಿಸಿದರು.

‘ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರು ಶಿಕ್ಷಕರ ಜೊತೆ ತುಂಬಾ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಸತತವಾಗಿ ಶಿಕ್ಷಕರ ಸಂಪರ್ಕದಲ್ಲಿದ್ದಾರೆ. ಶಿಕ್ಷಕರ ಕಷ್ಟಸುಖಗಳಿಗೆ ಮರಿತಿಬ್ಬೇಗೌಡರು ಸ್ಪಂದಿಸಿದ್ದಾರೆ. ಅವರು ಕಾಂಗ್ರೆಸ್‌ಗೆ ಹೊಸಬರೇನಲ್ಲ, ಹಿಂದೊಮ್ಮೆ ಕಾಂಗ್ರೆಸ್‌ನಿಂದಲೇ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆಯಾಗಿದ್ದರು’ ಎಂದರು.

‘ಮರಿತಿಬ್ಬೇಗೌಡರು ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದರು. ಈಗ ಜೆಡಿಎಸ್‌ನವರ ಸಹವಾಸ ಹೇಗಿದೆ ಎನ್ನುವುದರ ಬಗ್ಗೆ ಜ್ಞಾನೋದಯವಾಗಿ ಮರಳಿ ಕಾಂಗ್ರೆಸ್ ಸೇರಿದ್ದಾರೆ. ಅವರ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು, ಶಿಕ್ಷಕರ ಮನವೊಲಿಸಿ ಮರಿತಿಬ್ಬೇಗೌಡರ ಗೆಲುವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದರು.

‘ಬ್ಲಾಕ್ ಮಟ್ಟದ ಕಾಂಗ್ರೆಸ್ ಅಧ್ಯಕ್ಷರು ಜವಾಬ್ದಾರಿ ವಹಿಸಿಕೊಂಡು ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು. ಚುನಾವಣೆ ದಿನ 100 ಜನರು ಮತಗಟ್ಟೆಗಳ ಬಳಿ ಇರಬೇಕು. ಈ ಚುನಾವಣೆಯನ್ನು ಗಂಭೀರವಾಗಿ ಕಾರ್ಯಕರ್ತರು ಪರಿಗಣಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು’ ಎಂದರು.

‘ಪ್ರಜ್ವಲ್ ರೇವಣ್ಣ ಕೃತ್ಯವನ್ನು ಸಮರ್ಥಿಸುವ, ಬೆಂಬಲಿಸುವವರು ಜೆಡಿಎಸ್‌ನೊಳಗೆ ಇದ್ದಾರೆ ಎನ್ನುವುದು ದೊಡ್ಡ ದುರಂತ. ಈ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಏನೇ ಮಾತನಾಡಿದರೂ ಅದನ್ನು ಬೆಂಬಲಿಸಿ ಆ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಹಾಕುತ್ತಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಏನೇ ಮಾತನಾಡಿದರೂ ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಬಲಿಸುವ ಪ್ರಕ್ರಿಯೆ ರಾಜ್ಯದ ಯಾವ ಜಿಲ್ಲೆಗಳಲ್ಲೂ ನಡೆಯುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರೂ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಬೇಕು’ ಎಂದರು.

ಕಾಂಗ್ರೆಸ್‌ ಮುಖಂಡ ಎಚ್.ಬಿ.ರಾಮು ಮಾತನಾಡಿ ‘ಒಕ್ಕಲಿಗ ನಾಯಕನಾಗಿ ಡಿ.ಕೆ.ಶಿವಕುಮಾರ್ ಬೆಳವಣಿಗೆ ಕಾಣುವುದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹಿಸುತ್ತಿಲ್ಲ. ಅದಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹಿಂದೆಲ್ಲಾ ಚಿಕ್ಕಬಳ್ಳಾಫುರ, ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸುತ್ತಿದ್ದ ಕುಮಾರಸ್ವಾಮಿ ಈಗ ದ್ವೇಷದ ಕಾರಣಕ್ಕಾಗಿಯೇ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ’ ಎಂದರು.

ಸಭೆಯಲ್ಲಿ ಶಾಸಕ ಪಿ.ರವಿಕುಮಾರ್, ಮುಖಂಡರಾದ ಎಂ.ಶ್ರೀನಿವಾಸ್, ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ವಿಜಯ್‌ರಾಮೇಗೌಡ, ಸಿ.ತ್ಯಾಗರಾಜು, ಸುರೇಶ್, ರುದ್ರಪ್ಪ ಇದ್ದರು.

ಕುಸಿದ ಬೆಟ್ಟಿಂಗ್‌ ಮೊತ್ತ

‘ಚುನಾವಣೆ ಮುಗಿದ ಬಳಿಕ ಜೆಡಿಎಸ್ ಪರವಾಗಿ ಕೆಲವರು ಒಂದು ಲಕ್ಷಕ್ಕೆ ₹ 2 ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದರು. ಜಿಲ್ಲೆಯಾದ್ಯಂತ ಅವರ ಧ್ವನಿಯೇ ಹೆಚ್ಚಾಗಿತ್ತು. ಆದರೆ ಬೆಟ್ಟಿಂಗ್‌ ಮೊತ್ತ ಕ್ರಮೇಣ ಕುಸಿಯುತ್ತಾ ಬಂತು ಲಕ್ಷಕ್ಕೆ ಲಕ್ಷವಾಯಿತು. ಈಗಂತೂ ಬೆಟ್ಟಿಂಗ್ ಕಟ್ಟುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರ ಗೆಲುವಿನ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.