ADVERTISEMENT

ಹಿಟ್ಟಿಲ್ಲದ ಹೊತ್ತಲ್ಲಿ ಜನಪದ ಹಾಡು ಕಲಿತೆ: ಮಳವಳ್ಳಿ ಮಹದೇವಸ್ವಾಮಿ

ರಾಜ್ಯ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿದ ಮಳವಳ್ಳಿ ಮಹದೇವಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 13:03 IST
Last Updated 23 ಜೂನ್ 2023, 13:03 IST
ಮಳವಳ್ಳಿ ಮಹದೇವಸ್ವಾಮಿ
ಮಳವಳ್ಳಿ ಮಹದೇವಸ್ವಾಮಿ   

ಮಂಡ್ಯ: ‘ಮನೆಯಲ್ಲಿ ಹಿಟ್ಟಿಲ್ಲದ ಹೊತ್ತಲ್ಲಿ ಜನಪದ ಹಾಡು ಕಲಿತುಕೊಂಡೆ, ಎಷ್ಟೋ ಕಷ್ಟವನ್ನು ಪಟ್ಟ ಮೇಲೆ ಈ ಸ್ಥಾನಕ್ಕೆ ಬರಲು ಜನಪದವೇ ಕಾರಣವಾಯಿತು’ ಎಂದು ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹೇಳಿದರು.

ನಗರದ ಪಿಇಎಸ್‌ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಪಿಇಎಸ್‌ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ 27ನೇ ವರ್ಷದ ಕೆ.ವಿ.ಶಂಕರಗೌಡ ಸ್ಮರಣಾರ್ಥ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ನಗರದ ಪಿಇಎಸ್‌ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದ ಗೀತೆ ಸ್ಪರ್ಧೆಯನ್ನು ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಉದ್ಘಾಟಿಸಿದರು. ಕೆ.ಆರ್.ದಯಾನಂದ, ಡಾ.ಜೆ.ಮಹಾದೇವ ಇದ್ದಾರೆ

ಗ್ರಾಮೀಣ ಭಾಗದಲ್ಲಿ ಜನಪದ ಸಾಹಿತ್ಯ ಉಳಿಯಬೇಕು. ಜನಪದದಲ್ಲಿ ಹಲವು ಗಾದೆ ಮಾತುಗಳು ಲೋಕರೂಢಿಯಲ್ಲಿವೆ. ಅವುಗಳನ್ನು ವಿದ್ಯಾರ್ಥಿಗಳು ಗಮನಿಸಬೇಕು. ಜನಪದವು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ವಿದ್ಯಾರ್ಥಿಗಳು ತಮ್ಮ ತಂದೆ, ತಾಯಂದಿರ ಮಾತುಗಳನ್ನು ಆಲಿಸಿ ಅವರ ಅಣತಿಯಂತೆ ನಡೆಯಬೇಕು. ಕೋಲಾಟ, ತಮಟೆ, ನಗಾರಿ, ಕಂಸಾಳೆ ಸೇರಿದಂತೆ ಎಷ್ಟೋ ಕಲೆಗಳಿವೆ, ಅವುಗಳನ್ನು ಶ್ರದ್ಧೆಯಿಂದ ಕಲಿತುಕೊಂಡರೆ ನಿಮ್ಮ ಭವಿಷ್ಯ ಉಜ್ವಲಗೊಳ್ಳಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ಓದಿದವರಿಗೆಲ್ಲಾ ಕೆಲಸ ಸಿಗುವುದಿಲ್ಲ ಎಂಬುವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ, ಅದರಂತೆ ನಡೆದುಕೊಳ್ಳುವುದು ಮುಖ್ಯವಾಗಬೇಕು. ಈ ಹಿಂದೆ ಸಿನಿಮಾದಲ್ಲಿ ಹಾಡುಗಳಿಗಾಗಿ ಬರೆಯುತ್ತಿದ್ದ ಸಾಹಿತ್ಯವು ಎಲ್ಲರ ಮನೆ ಹಾಗೂ ಮನಸ್ಸು ಮುಟ್ಟುತ್ತಿತ್ತು, ಈಗಿನ ಸಾಹಿತ್ಯ ಅರ್ಥವಾಗುವುದಿಲ್ಲ ಅದರ ಬಗ್ಗೆ ಆಲೋಚನೆ ಬಿಟ್ಟು, ಉತ್ತಮ ಸಾಹಿತ್ಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ ಮಾತನಾಡಿ, ಕಲೆ, ಸಾಂಸ್ಕೃತಿಕ ಪ್ರಕಾರಗಳಲ್ಲಿನ ಸಾಧಕರನ್ನು ಗುರುತಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ, ಜಿಲ್ಲೆಯಲ್ಲಿ ಕಲೆ ಉಳಿಯಬೇಕು. ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರ ಸೇವೆ ಇದೇ ರೀತಿ ಮುಂದುವರಿಯಲಿ’ ಎಂದು ಆಶಿಸಿದರು.

ಪ್ರಾಂಶುಪಾಲ ಜೆ.ಮಹಾದೇವ ಮಾತನಾಡಿ, ‘ಕೆ.ವಿ.ಶಂಕರಗೌಡ ಅವರ ಹೆಸರಿನಲ್ಲಿ ಜನಪದ ಗಾಯನ ಸ್ಪರ್ಧೆ ಆಯೋಜನೆ ಮಾಡಿದ್ದೇವೆ. ಶಂಕರಗೌಡರಿಗೆ ಅತೀ ಆಪ್ತವಾದುದು ರಂಗಗೀತೆ, ಅದನ್ನು ಬಿಟ್ಟರೆ ಜನಪದ ಗೀತೆ’ ಎಂದು ಹೇಳಿದರು.

ನಂತರ ರಾಜ್ಯ ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗಾಯಕರು ಗಾಯನ ಪ್ರಸ್ತುತ ಪಡಿಸಿದರು.

ಜನಪದ ಗಾಯಕರಾದ ನರಸಿಂಹಮೂರ್ತಿ, ವೈರಮುಡಿ, ಪ್ರಾಧ್ಯಾಪಕ ಪ್ರೊ.ನಂದೀಶ್‌ ಕುಮಾರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.