ADVERTISEMENT

ಆದಿಚುಂಚನಗಿರಿ: ನಾಳೆಯಿಂದ ರಾಜ್ಯಮಟ್ಟದ ಜನಜಾಗೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 0:37 IST
Last Updated 2 ಅಕ್ಟೋಬರ್ 2024, 0:37 IST
ಪ್ರಸನ್ನನಾಥ ಸ್ವಾಮೀಜಿ
ಪ್ರಸನ್ನನಾಥ ಸ್ವಾಮೀಜಿ   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಅ.3ರಿಂದ 10ರವರೆಗೆ 28ನೇ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಜನಜಾಗೃತಿ ಶಿಬಿರವನ್ನು ಆಯೋಜಿಸಲಾಗಿದ್ದು, ಆಸಕ್ತರು ನೋಂದಾಯಿಸಿಕೊಳ್ಳಬಹುದು’ ಎಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.

‘ಮಠವು ಇಂದಿನ ಪೀಳಿಗೆಯ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡುವ ನಿಟ್ಟಿನಲ್ಲಿ 27 ವರ್ಷಗಳಿಂದ ಆಯೋಜಿಸುತ್ತಿರುವ ರಾಜ್ಯಮಟ್ಟದ ಜನ ಜಾಗೃತಿ ಶಿಬಿರಕ್ಕೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಗುರುವಾರ (ಅ.3) ಸಂಜೆ ಚಾಲನೆ ನೀಡಲಿದ್ದಾರೆ. ಗುರುವಾರ (ಅ.10) ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಏಳು ದಿನಗಳ ಶಿಬಿರದಲ್ಲಿ ಪರಿಸರ ನೈರ್ಮಲ್ಯ, ಆರೋಗ್ಯ ರಕ್ಷಣೆಯ ಅರಿವು, ಪ್ರಾರ್ಥನೆ, ಧ್ಯಾನ ಸೇರಿದಂತೆ ಅನೇಕ ವಿಚಾರಗಳ ಕುರಿತು ಉಪನ್ಯಾಸದೊಂದಿಗೆ ಯೋಗಾಭ್ಯಾಸ, ಜ್ಯೋತಿಷ್ಯ, ಭಜನೆ, ಪೂಜಾ ವಿಧಾನ ಮತ್ತು ರಾಷ್ಟ್ರೀಯ ಭಾವೈಕ್ಯ ಕುರಿತು ತರಬೇತಿ ನೀಡಲಾಗುವುದು.

ADVERTISEMENT

‘14 ವರ್ಷ ಮೇಲ್ಪಟ್ಟ ಬಾಲಕ, ಬಾಲಕಿಯರು ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಎಲ್ಲಾ ಶಿಬಿರಾರ್ಥಿಗಳಿಗೆ ಮಠದಿಂದ ಉಚಿತ ಊಟ, ವಸತಿ ಸೌಲಭ್ಯವಿದೆ. ಶಿಬಿರಾರ್ಥಿಗಳು ಯೋಗಾಭ್ಯಾಸಕ್ಕೆ ಅಗತ್ಯವಾದ ಉಡುಪು, ದೈನಂದಿನ ಬಳಕೆ ವಸ್ತುಗಳು, ಹೊದಿಕೆಯೊಂದಿಗೆ ತಟ್ಟೆ, ಲೋಟ ತರಬೇಕು. ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಶಿಬಿರಾರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಕಡ್ಡಾಯವಾಗಿ ತರಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.