ಮಂಡ್ಯ: ಜಿಲ್ಲೆಯ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲುಗಾರಿಕೆ ನಡೆಯುತ್ತಿದ್ದು ದಶಕದಿಂದಲೂ ಅಪಾರ ಪ್ರಮಾಣದ ಪ್ರಾಕೃತಿಕ ನಾಶವಾಗಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಸಹಕಾರದಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ರಕ್ಷಣೆ ಮಾಡವಲ್ಲಿ ಮೌನಕ್ಕೆ ಶರಣಾಗಿದ್ದಾರೆ.
ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ ಕಾವಲು ಪ್ರದೇಶದ ಸರ್ವೆ ನಂ.1ರ ವ್ಯಾಪ್ತಿಯಲ್ಲಿ 1,487 ಎಕರೆ ಅರಣ್ಯ ಪ್ರದೇಶವಿದೆ. ಈ ಎಲ್ಲಾ ಪ್ರದೇಶ ಅಕ್ರಮ ಕ್ರಷರ್‌ಗಳಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಹೊನಗಾನಹಳ್ಳಿ ಗ್ರಾಮದ ಸರ್ವೆ ನ.127ರ 301 ಎಕರೆ ಪ್ರದೇಶ ಕಲ್ಲು ಗಣಿಗಳ ಪಾಲಾಗಿದೆ. ಜೊತೆಗೆ ಚಿನಕುರಳಿ ವ್ಯಾಪ್ತಿಯ ಸರ್ವೆ ನಂ.70ರಲ್ಲಿ 257 ಎಕರೆ ಕಲ್ಲುಗಣಿಗಾರಿಕೆಗೆ ಒಳಗಾಗಿದೆ.
ಈ ಮೂರು ಗ್ರಾಮ ವ್ಯಾಪ್ತಿಯ ಒಟ್ಟು 2,050 ಎಕರೆ ಪ್ರದೇಶ ಅರಣ್ಯ ಇಲಾಖೆಗೆ ಸೇರಿರುವ ಬಗ್ಗೆ ದಾಖಲಾತಿಗಳಿವೆ. ಆರ್‌ಟಿಸಿಯಲ್ಲೂ ಅರಣ್ಯ, ಅಮೃತ್ ಮಹಲ್ ಕಾವಲು ಎಂದು ನಮೂದಾಗಿದೆ. ಆದರೆ ಗಣಿ ಮಾಲೀಕರು, ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅರಣ್ಯ ಪ್ರದೇಶದಲ್ಲಿ ಗಣಿ ಗುತ್ತಿಗೆ ಪಡೆಯಲು ಯಶಸ್ವಿಯಾಗಿದ್ದಾರೆ. ಜೊತೆಗೆ ಅಕ್ರಮ ಕ್ರಷರ್ ಸ್ಥಾಪಿಸಿ, 200–300 ಅಡಿ ಆಳದವರೆಗೆ ಕಂದಕ ತೋಡಿ ಅಲ್ಲಿಯ ಪರಿಸರ ಹಾಳು ಮಾಡಿದ್ದಾರೆ.
‘ಬೇಬಿಬೆಟ್ಟದಲ್ಲಿ ಭೋವಿ ಸಮುದಾಯದ ಜನರು ಕೈಕುಳಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಇದರಿಂದ ಅರಣ್ಯಕ್ಕೆ ಯಾವುದೇ ತೊಂದರೆ ಇರಲಿಲ್ಲ. ಆದರೆ ಶ್ರೀಮಂತ ಗಣ್ಯ ವ್ಯಕ್ತಿಗಳು ದೊಡ್ಡ ಯಂತ್ರ ಅಳವಡಿಸಿ, ಸ್ಫೋಟಕಗಳಿಂದ ಕಲ್ಲು ಸಿಡಿಸಿ ಅರಣ್ಯ ಭೂಮಿಯನ್ನು ಬೆಂಗಾಡು ಮಾಡಿದ್ದಾರೆ’ ಎಂದು ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ಕೆ.ಟಿ.ಗೋವಿಂದೇಗೌಡ ಹೇಳಿದರು.
ಸೂಕ್ಷ್ಮ ಪರಿಸರ ವಲಯದಲ್ಲೂ ಕಲ್ಲು ಗಣಿ: ಬೇಬಿಬೆಟ್ಟ ಮಾತ್ರವಲ್ಲದೇ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲೂ ಕಲ್ಲು ಗಣಿಗಾರಿಕೆ ಮಿತಿಮೀರಿದೆ. ಕಾವೇರಿ ನದಿ ತೀರದಲ್ಲೇ ಬರುವ ಗೆಂಡೆಹೊಸಹಳ್ಳಿ ಪಕ್ಷಿಧಾಮದ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಹಿಂದೆಯೇ ಘೋಷಣೆ ಮಾಡಲಾಗಿದೆ. ಮೂಲ ದಾಖಲಾತಿಗಳಲ್ಲಿ ಈ ಮಾಹಿತಿ ಇದೆ.
ಗೆಂಡೆಹೊಸಹಳ್ಳಿ ವ್ಯಾಪ್ತಿಯಲ್ಲಿ ಹಂಗರಹಳ್ಳಿ, ಮುಂಡುಗದೊರೆ, ಟಿ.ಎಂ.ಹೊಸೂರು, ಸಿದ್ದಾಪುರ ಗ್ರಾಮಗಳು ಬರುತ್ತವೆ. ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಚಟುವಟಿಕೆಯಿಂದಾಗಿ ಸೂಕ್ಷ್ಮ ಪರಿಸರ ವಲಯಕ್ಕೆ ಧಕ್ಕೆಯಾಗಿದೆ.
‘ಜಲ್ಲಿ ಕ್ರಷರ್‌ಗಳಲ್ಲಿ ಕಲ್ಲು ಬಂಡೆ ಸ್ಫೋಟಿಸಲು ಬಳಸುವ ಸಿಡಿಮದ್ದಿನಿಂದ ಗಾಳಿ, ನೀರು, ಮಣ್ಣು ವಿಷವಾಗುತ್ತಿದೆ. ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಜನಪ್ರತಿನಿಧಿಗಳು ಗಣಿ ಮಾಲೀಕರಿಂದ ಹಣ ಪಡೆದು ಕ್ರಷರ್ ಚಟುವಟಿಕೆ ನಡೆಸಲು ಸಮ್ಮತಿ ನೀಡಿದ್ದಾರೆ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನವಾಗಿದ್ದಾರೆ’ ಎಂದು ಮಹದೇವಪುರ ಗ್ರಾಮದ ವ್ಯಕ್ತಿಯೊಬ್ಬರು ಆರೋಪಿಸಿದರು.
‘ಬೇಬಿಬೆಟ್ಟ ಕಾವಲು ಪ್ರದೇಶದಲ್ಲಿ ಪರಿಸರ ಅನುಮೋದನೆ ಪತ್ರ ಪಡೆಯದ 30 ಕಲ್ಲು ಗಣಿ ಗುತ್ತಿಗೆಯನ್ನು ನಿಯಮಾನುಸಾರ ರದ್ದು ಮಾಡಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ಹೇಳಿದರು.
‘ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಸಂದರ್ಭದಲ್ಲಿ ಅರಣ್ಯ ಭೂಮಿ ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಹಕಾರವಿಲ್ಲದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಹೇಳಿದರು.
ಆದಿಚುಂಚನಗಿರಿ ಮಠಕ್ಕೂ ಧಕ್ಕೆ
ನಾಗಮಂಗಲ ತಾಲ್ಲೂಕು ಹದ್ದಿನಕಲ್ಲು ಬೆಟ್ಟ ಹಾಗೂ ಅಕ್ಕಪಕ್ಕ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಸಮೀಪದಲ್ಲೇ ಇರುವ ಆದಿಚುಂಚನಗಿರಿ ಮಠಕ್ಕೂ ಧಕ್ಕೆ ಉಂಟಾಗಿದೆ. ಇದು ಮೀಸಲು ಅರಣ್ಯ ಪ್ರದೇಶವಾಗಿದ್ದು ನಿಯಮಗಳನ್ನು ಗಾಳಿಗೆ ತೂರಿ ನೂರಾರು ಗಣಿ ಕಂಪನಿಗಳು ಪರಿಸರ ಹಾಳು ಮಾಡುತ್ತಿವೆ.
ಇದೇ ವ್ಯಾಪ್ತಿಯಲ್ಲಿ ಮಯೂರ ವನ ಇದ್ದು ಅಲ್ಲಿಯ ನವಿಲು ಹಾಗೂ ಇತರ ಪ್ರಾಣಿ, ಪಕ್ಷಿಗಳ ವಾಸಕ್ಕೆ ಧಕ್ಕೆ ಉಂಟಾಗಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
‘ಆದಿಚುಂಚನಗಿರಿ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕುರಿತು ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ತಿಳಿಸಿದ್ದೇವೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದಾರೆ’ ಎಂದು ಹಟ್ನ ಗ್ರಾಮದ ರೈತ ಮುಖಂಡ ರಮೇಶ್ ಹೇಳಿದರು.
* ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಗಣಿ ಗುತ್ತಿಗೆ ನೀಡಲಾಗಿದೆ. ಕೆಲ ಪ್ರದೇಶ ಪರೋಕ್ಷವಾಗಿ ಅರಣ್ಯ ಇಲಾಖೆಗೆ ಬರುತ್ತದೆ. ಹೀಗಾಗಿ ನಮ್ಮ ಇಲಾಖೆಯಿಂದ ಅ ಪ್ರದೇಶವನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.
–ಎನ್.ಶಿವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.