ಮಂಡ್ಯ: ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ ಗೋಮಾಳ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ನಿತ್ಯ 1,200 ಟ್ರಕ್ ಜಲ್ಲಿ, ಬೋರ್ಡರ್ಸ್, ಕಲ್ಲು ಚಪ್ಪಡಿ ಮೈಸೂರು, ಬೆಂಗಳೂರು ನಗರಗಳಿಗೆ ರವಾನೆಯಾಗುತ್ತಿತ್ತು ಎಂಬ ವಿಚಾರ ಅಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬೃಹತ್ ಪ್ರಮಾಣವನ್ನು ಅನಾವರಣಗೊಳಿಸುತ್ತದೆ.
ಬೇಬಿಬೆಟ್ಟ ಸರ್ವೆ ನಂಬರ್ 1ರಲ್ಲಿರುವ 1,437 ಎಕರೆ ಪ್ರದೇಶದಲ್ಲಿ ನೂರಾರು ಗಣಿ ಕಂಪನಿಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಕೇವಲ 88 ಗಣಿಗಳಿಗೆ ಅನುಮತಿ ಇದ್ದರೂ ಕಾರ್ಯಾಚರಣೆ ನಡೆಸುತ್ತಿರವ ಗಣಿ ಕಂಪನಿಗಳ ಸಂಖ್ಯೆ 500 ದಾಟಿದೆ.
ಸಾವಿರಾರು ಅಡಿವರೆಗೆ ಕಂದಕ ತೋಡಿ ಗಣಿಗಾರಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ‘ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ದ ತಂಡ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸಮೀಪದಲ್ಲೇ ಇರುವ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿತ್ತು.
ವರದಿ ಬಂದು ವರ್ಷ ಕಳೆದರೂ ಅಕ್ರಮ ಗಣಿಗಾರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಗಣಿಗಾರಿಕೆ ನಿಷೇಧ ಎಂಬುದು ಕೇವಲ ಹಾವು–ಏಣಿ ಆಟವಾಗಿದೆ. ನಿಷೇಧವಿದ್ದಾಗಲೂ ಗಣಿ ಮಾಲೀಕರು ರಾತ್ರಿಯ ವೇಳೆ ಗಣಿ ಚಟುವಟಿಕೆ ನಡೆಸಿದ್ದಾರೆ. ಕಲ್ಲು ಸಾಗಿಸುವುದನ್ನು ತಡೆಯಲು ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಜಲಾಶಯಕ್ಕೆ ಧಕ್ಕೆ ಇದೆಯೋ, ಇಲ್ಲವೋ ಎಂಬ ಬಗ್ಗೆ ವೈಜ್ಞಾನಿಕ ತನಿಖೆ ಮಾಡಲೂ ಸರ್ಕಾರ ವಿಫಲವಾಗಿದೆ.
ಇಲ್ಲಿಯವರೆಗೂ ನಿಷೇಧದ ನಡುವೆಯೂ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆ ಇದೆ ಎಂದು ಸಂಸದೆ ಸುಮಲತಾ ಹೇಳಿಕೆ ಕೊಟ್ಟ ನಂತರ ಈಗ ತಾತ್ಕಾಲಿಕವಾಗಿ ಗಣಿ ಚಟುವಟಿಕೆಕೆ ಸ್ಥಗಿತಗೊಂಡಿದೆ. ವಿವಾದ ತಣ್ಣಗಾಗುತ್ತಿದ್ದಂತೆ ಮತ್ತೆ ಗಣಿಗಳ ಸದ್ದು ಮೊಳಗುತ್ತದೆ. ನಿತ್ಯ 1,200ಕ್ಕೂ ಹೆಚ್ಚು ಟ್ರಕ್‌ಗಳು ಕಲ್ಲು ಸಾಗಿಸುತ್ತವೆ ಎಂಬ ಮಾಹಿತಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಬಳಿ ಇದ್ದರೂ ಅದನ್ನು ತಡೆಯಲು ಸಾಧ್ಯವಾಗದಿರುವುದು ಅನುಮಾನಾಸ್ಪದವಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಾರೆ.
‘ಗಣಿ ನಿಷೇಧಿಸಿದ್ದರೂ ಕಲ್ಲು, ಚಪ್ಪಡಿ ಟ್ರಕ್‌ಗಳು ಹೇಗೆ ಓಡಾಡುತ್ತವೆ? ಬೇಬಿಬೆಟ್ಟದ ಸುತ್ತಲೂ ಮಾಹಿತಿದಾರರನ್ನು ನೇಮಕ ಮಾಡಲಾಗಿದೆ. ಯಾರೇ ಅಧಿಕಾರಿ, ಪೊಲೀಸರು ಬಂದರೂ ಕ್ಷಣಮಾತ್ರದಲ್ಲಿ ಮಾಹಿತಿ ರವಾನೆಯಾಗುತ್ತದೆ. ಅವರು ಹೋದ ಮೇಲೆ ಎಂದಿನಂತೆ ಗಣಿ ಚಟುವಟಿಕೆ ಆರಂಭವಾಗುತ್ತದೆ. ಇದಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯ ಲೋಕೇಶ್ ಆರೋಪಿಸಿದರು.
ಕಾಳಜಿ ಇಲ್ಲ: ಐತಿಹಾಸಿಕ ಜಲಾಶಯದ ಬಗ್ಗೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳಿಗೆ, ಮುಖಂಡರಿಗೆ ಕಾಳಜಿ ಇಲ್ಲದಿರುವುದು ಪದೇಪದೇ ಬಹಿರಂಗಗೊಳ್ಳುತ್ತಿದೆ. ಶಾಸಕರು, ಮಾಜಿ ಶಾಸಕರ ಬೆಂಬಲಿಗರೇ ಗಣಿ ಮಾಲೀಕರಾಗಿರುವ ಕಾರಣ ಅವರು ಗಣಿ ಚಟುವಟಿಕೆಯನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಕೆಆರ್‌ಎಸ್ ಜಲಾಶಯದ ಸುರಕ್ಷತೆ ಬಗ್ಗೆ ಮಾತನಾಡುವವರೇ ಇಲ್ಲವಾಗಿದ್ದಾರೆ. ರಾಜಕಾರಣಿಗಳಿಗೆ ಜಲಾಶಯದ ಸುರಕ್ಷತೆಗಿಂತ ಗಣಿಗಾರಿಕೆಯೇ ಮುಖ್ಯವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ದಂಡ, ರಾಜಧನ ವಸೂಲಿ ವಿಫಲ
30ಕ್ಕೂ ಹೆಚ್ಚು ಅನಧಿಕೃತ ಗಣಿಗಳ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ₹ 800 ಕೋಟಿಗೂ ಹೆಚ್ಚು ದಂಡ ವಿಧಿಸಿದೆ. ರಾಜಧನ ಸೇರಿ ಸಾವಿರ ಕೋಟಿ ಹಣ ಬರಬೇಕಾಗಿದೆ. ಆದರೆ ಜಿಲ್ಲಾಡಳಿತ ದಂಡ, ರಾಜಧನ ವಸೂಲಿ ಮಾಡಲು ಸಾಧ್ಯವಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.
‘ಗಣಿ ಮತ್ತು ಖನಿಜ ಅಭಿವೃದ್ಧಿ, ನಿಯಂತ್ರಣ ಕಾಯ್ದೆ (ಎಂಎಂಡಿಆರ್‌ಎ) ತಿದ್ದುಪಡಿ ಅನ್ವಯ ₹ 3 ಸಾವಿರ ಕೋಟಿ ರಾಜಧನ ಹಾಗೂ ದಂಡ ಬರಬೇಕಾಗಿದೆ. ಕಾಯ್ದೆಯಲ್ಲಿದ್ದ ಹಳೆಯ ದಂಡವನ್ನೇ ವಿಧಿಸಲಾಗಿದೆ. ಆದರೂ ಗಣಿ ಮಾಲೀಕರು ದಂಡ, ರಾಜಧನ ಪಾವತಿಸಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
***
ಗಣಿಗಾರಿಕೆಯಿಂದ ಜಲಾಶಯಕ್ಕೆ ಉಂಟಾಗುತ್ತಿರುವ ಪರಿಣಾಮಗಳ ಪರೀಕ್ಷೆ ಶೀಘ್ರದಲ್ಲೇ ನಡೆಯುವುದು. ಈಗಾಗಲೇ ಅದಕ್ಕೆ ಸರ್ಕಾರ ಅನುಮತಿ ನೀಡಿದೆ.
– ಎಸ್.ಅಶ್ವತಿ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.