ADVERTISEMENT

ಕ್ವಾರಿ ಲಾರಿ ತಡೆದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:17 IST
Last Updated 13 ಜೂನ್ 2024, 14:17 IST
   

ಶ್ರೀರಂಗಪಟ್ಟಣ: ತಾಲ್ಲೂಕಿನ ಟಿ.ಎಂ. ಹೊಸೂರು ಮತ್ತು ಆಸುಪಾಸಿನಲ್ಲಿ ಜಲ್ಲಿ ಕ್ರಷರ್‌ ಮತ್ತು ಕಲ್ಲು ಕ್ವಾರಿ ನಡೆಸುವವರು ನಿಗಧಿಗಿಂತ ಹೆಚ್ಚು ಭಾರದ ಲಾರಿಗಳಲ್ಲಿ ಜಲ್ಲಿ, ಎಂ– ಸ್ಯಾಂಡ್‌, ಡಸ್ಟ್‌  ಸಾಗಿಸುತ್ತಿರುವುದರಿಂದ ರಸ್ತೆ ಹಾಳಾಗುತ್ತಿದ್ದು, ಭಾರಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗುರುವಾರ ಗ್ರಾಮಸ್ಥರು ಕೆಲಕಾಲ ಲಾರಿಗಳನ್ನು ತಡೆದರು.

ಟಿ.ಎಂ. ಹೊಸೂರು, ಕಾಳೇನಹಳ್ಳಿ, ಶ್ರೀರಾಂಪುರ, ಚನ್ನನಕೆರೆ ಇತರ ಕಡೆ ಇರುವ ಜಲ್ಲಿ ಕ್ರಷರ್‌ ಮತ್ತು ಕಲ್ಲು ಕ್ವಾರಿಗಳಿಂದ 30ರಿಂದ 40 ಟನ್‌ ತೂಕದ ಸರಕು ತುಂಬಿ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಇಷ್ಟು ಭಾರದ ಲಾರಿಗಳು ಓಡಾಡುತ್ತಿರುವುದರಿಂದ ಈ ಭಾಗದ ರಸ್ತೆಗಳು  ಹಾಳಾಗುತ್ತಿದೆ. ಈ ಮಾರ್ಗದಲ್ಲಿ ಇಷ್ಟು ಭಾರ ಹೊತ್ತ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

 ಡಿವೈಎಸ್ಪಿ ಮುರಳಿ, ಸಿಪಿಐಗಳಾದ ಬಿ.ಜಿ. ಕುಮಾರ್‌, ಬಿ.ಎಸ್. ಪ್ರಕಾಶ್‌ ನೇತೃತ್ವದ ಪೊಲೀಸರ ತಂಡ ವಾಹನಗಳನ್ನು ತಡೆದು ನಿಲ್ಲಿಸಿದ್ದ ಗ್ರಾಮಸ್ಥರನ್ನು ಚದುರಿಸಿದರು. ಗ್ರಾಮದ ಮುಖಂಡರ ಜತೆ ಚರ್ಚಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು.  ಮೂರು ತಾಸು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ADVERTISEMENT

‘ಜಲ್ಲಿ ಕ್ರಷರ್‌ ಮತ್ತು ಕಲ್ಲು ಕ್ವಾರಿ ಡನೆಸುವ ಸ್ಥಳೀಯರ ನಡುವೆ ಭಿನ್ನಾಭಿಪ್ರಾಯ ಇದೆ.  ಕೆಲವರಿಗೆ ಸೇರಿದ ಲಾರಿಗಳನ್ನು ಮಾತ್ರ ತಡೆಯಲಾಗಿತ್ತು ಎಂಬ ಮಾಹಿತಿ ಬಂದಿದೆ. ಎರಡೂ ಕಡೆಯವರ ಜತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ನಿಯಮ ಮೀರಿದರೆ ಲಾರಿಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಸಿಪಿಐ ಬಿ.ಜಿ. ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.