ಮಂಡ್ಯ: ಸ್ವಾಮಿ ವಿವೇಕಾನಂದ ಅವರು ಮತ್ತು ಸುಭಾಷ್ ಚಂದ್ರ ಬೋಸ್ ಅವರು ಯುವ ಜನತೆಗೆ ಸ್ಫೂರ್ತಿದಾಯಕರಾಗಿದ್ದಾರೆ. ದೇಶ ಸೇವೆಗೆ ಸೇರುವ ಯುವ ಪಡೆ ಮತ್ತಷ್ಟು ಹೆಚ್ಚಾಗಬೇಕು ಎಂದು ಮಿಮ್ಸ್ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್ ಸಲಹೆ ನೀಡಿದರು.
ನಗರದ ಮಾಂಡವ್ಯ ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನ, ಸೈನಿಕರ ದಿನಾಚರಣೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ನಿವೃತ್ತ ಸೈನಿಕರಿಗೆ ಸನ್ಮಾನ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರೇ ದೇಶದ ಭವಿಷ್ಯವಾಗಿದ್ದಾರೆ. ದೇಶ ಭಕ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಅರ್ಪಣಾಮನೋಭಾವ ಮುಖ್ಯವಾಗಬೇಕು. ನೇತಾಜಿ ಅವರ ಹಾದಿಯಲ್ಲಿಯೇ ಸಾಗಬೇಕು, ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದರು.
ದೇಶ ಸೇವೆಗೆ ಸೇರುತ್ತಿದ್ದ ಮುಂಚೂಣಿಯಲ್ಲಿ ಕೊಡಗು, ಮಡಿಕೇರಿ ಭಾಗದವರೇ ಹೆಚ್ಚಿದ್ದರು, ಆದರೆ ಬದಲಾದ ಕಾಲಘಟ್ಟದಲ್ಲಿ ಉತ್ತರ ಕರ್ನಾಟಕ, ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಯುವಕರ ತಂಡವೇ ದೇಶ ಸೇವೆಗೆ ತಮ್ಮ ಪ್ರಾಣವನ್ನು ಮುಡಿಪಾಗಿ ಇಟ್ಟಿದ್ದಾರೆ. ಯುವಕರು ದೇಶ ಸೇವೆಗೆ ಸೇರುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೃಷಿಕ್ ಲಯನ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಸ್ವಾಮಿ ವಿವೇಕಾನಂದ ಮತ್ತು ಸುಭಾಷ್ ಚಂದ್ರಬೋಸ್ ಅವರ ಮೌಲ್ಯಯುತ ಬದುಕು ನಮ್ಮೆಲ್ಲರಿಗೂ ಪ್ರಸ್ತುತವಾಗುತ್ತದೆ ಎಂದು ಹೇಳಿದರು.
ನಿವೃತ್ತ ಸೈನಿಕರಾದ ಮುಟ್ಟನಹಳ್ಳಿ ಎಂ.ವಿ.ರವಿ, ಮಲ್ಲನಾಯಕನಕಟ್ಟೆ ಎಸ್.ವಿದ್ಯಾಧರ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ಯುವಕರು, ಸಂಘಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಒಟ್ಟು 50 ಯುನಿಟ್‌ಗಳನ್ನು ಸಂಗ್ರಹಿಸಲಾಯಿತು.
ಶಿಬಿರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚೇರ್ಮನ್ ಮೀರಾ ಶಿವಲಿಂಗಯ್ಯ, ಎಸ್.ಬಿ.ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ಶಿವಲಿಂಗಯ್ಯ, ಪ್ರಾಂಶುಪಾಲರಾದ ಸರೋಜ, ಸುಮಾ, ಸಂಸ್ಥೆಯ ರಂಗಸ್ವಾಮಿ, ಷಡಕ್ಷರಿ, ಜವರೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.