ಕಿಕ್ಕೇರಿ: ‘ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಣೆ ಮಾಡುವುದೂ ಕೂಡ ಒಂದು ದೊಡ್ಡ ದಂಧೆಯಾಗಿದೆ. ಜಿಲ್ಲೆಯಲ್ಲಿ ಸುಮಾರು ₹ 35 ಕೋಟಿಗೂ ಹೆಚ್ಚಿನ ವ್ಯವಹಾರ ಇದರಲ್ಲಿದೆ’ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ಬಾಬೂರಾಜ್ ತಿಳಿಸಿದರು.
ಸಮೀಪದ ಉದ್ದಿನಮಲ್ಲನ ಹೊಸೂರು ಗ್ರಾಮದಲ್ಲಿ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ, ಮಂಡ್ಯದ ವಿ.ಸಿ ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ತೆಂಗಿನಘಟ್ಟ-ಶ್ರವಣನಹಳ್ಳಿ ವೃತ್ತದ ಕಬ್ಬು ಬೆಳೆಗಾರರಿಗಾಗಿ ಪ್ರಗತಿಪರ ರೈತ ದಿವಾಕರ್ ಅವರ ಜಮೀನಿನಲ್ಲಿ ನಡೆದ ‘ಕಬ್ಬು ಬೆಳೆ ಬೇಸಾಯ, ನಿರ್ವಹಣಾ ಕ್ರಮಗಳ ಕುರಿತ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.
‘ಕಬ್ಬು ಹಂಗಾಮಿನ ಆರಂಭದಲ್ಲಿ ಕಡಿಮೆಯಿರುವ ಕಟಾವಿನ ದರವು ದಿನದಿಂದ ದಿನಕ್ಕೆ ಹೆಚ್ಚಿ ಕಬ್ಬಿನ ಉತ್ಪಾದನಾ ದರದ ಶೇ 40ರಷ್ಟನ್ನು ಮೀರುತ್ತದೆ. ಬಳ್ಳಾರಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಭಾಗದಿಂದ ನಮ್ಮ ಕಾರ್ಖಾನೆಗೆ ಕಬ್ಬು ಕಟಾವು ಮಾಡುವ ಕೃಷಿ ಕೂಲಿ ಕಾರ್ಮಿಕರು ಬರುತ್ತಿದ್ದಾರೆ. ಸ್ಥಳೀಯ ರೈತರು, ಕಾರ್ಮಿಕರು ಕೂಡ ಈ ಕಟಾವು ಮಾಡುವ ಕೆಲಸವನ್ನು ಉದ್ದಿಮೆಯಾಗಿ ಸ್ವೀಕರಿಸಿದಲ್ಲಿ ಆರ್ಥಿಕ ಪ್ರಗತಿ ಸಾಧಿಸಬಹುದು’ ಎಂದು ಅವರು ಸಲಹೆ ನೀಡಿದರು. ಕಾರ್ಖಾನೆಯು ಪ್ರಸ್ತುತ 5 ಲಕ್ಷ ಟನ್ ಕಬ್ಬನ್ನು ಅರೆದಿದ್ದು, ಇನ್ನೂ 3 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದೆ’ ಎಂದು ತಿಳಿಸಿದರು.
ಕಬ್ಬು ಬೇಸಾಯಕ್ಕೆ ತಜ್ಞರ ಸಲಹೆ ಪಡೆದಲ್ಲಿ ಹೆಚ್ಚು ಇಳುವರಿ, ಹೆಚ್ಚು ಲಾಭ ಪಡೆಯಬಹುದು ಎಂದು ಕಬ್ಬು ಬೆಳೆ ತಜ್ಞ ಕೇಶವಯ್ಯ ತಿಳಿಸಿದರು.
‘ಸಾವಯವ ಕೃಷಿ ಪದ್ಧತಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೇಸಾಯ ಮಾಡಿದರೆ ಪ್ರತಿ ಎಕರೆಗೆ 60 ಟನ್ನಿಗೆ ಕಡಿಮೆಯಿಲ್ಲದಂತೆ ಬೆಳೆ ಪಡೆಯಬಹುದು. ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆಯ ಜೊತೆಗೆ ಇಳುವರಿ ಕೂಡ ಕಡಿಮೆಯಾಗುತ್ತದೆ. ಕಬ್ಬು ಕಟಾವಿನ ನಂತರ ತರಗಿಗೆ ಬೆಂಕಿ ಹಾಕದೇ ಅದನ್ನೇ ಗೊಬ್ಬರವಾಗಿ ಪರಿವರ್ತಿಸಿ’ ಎಂದು ಸಲಹೆ ನೀಡಿದರು.
ಕೃಷಿ ವಿಜ್ಞಾನಿ ಸ್ವಾಮಿಗೌಡ ಕಬ್ಬು ಬೆಳೆಗೆ ಬರುವ ಗೊಣ್ಣೆಹುಳು ರೋಗ ನಿಯಂತ್ರಣ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಬ್ಬು ಬೆಳೆಗಾರ ಗೂಡೆಹೊಸಳ್ಳಿ ದಿವಾಕರ್, ಕಾರ್ಖಾನೆಯ ಕಬ್ಬು ವಿಭಾಗದ ಕ್ಷೇತ್ರಾಧಿಕಾರಿ ದತ್ತಾತ್ರೇಯ, ಮಹೇಶ್, ಪುಟ್ಟೇಗೌಡ, ದೇವೇಗೌಡ, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಮುಖಂಡರಾದ ಬಲರಾಮೇಗೌಡ, ಕಾಳೇಗೌಡ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.