ADVERTISEMENT

ಸುಮಲತಾ ಅವರಿಂದ ಬಿಡಿಗಾಸೂ ಬಂದಿಲ್ಲ: ಶಾಸಕ ರವೀಂದ್ರ ಶ್ರೀಕಂಠಯ್ಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 6:31 IST
Last Updated 31 ಜನವರಿ 2023, 6:31 IST
ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸೋಮವಾರ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ರಾಜು ಇದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸೋಮವಾರ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ರಾಜು ಇದ್ದರು   

ಶ್ರೀರಂಗಪಟ್ಟಣ: ‘ಸಂಸದೆ ಸುಮಲತಾ ಅವರಿಂದ ಈ ಕ್ಷೇತ್ರಕ್ಕೆ ಬಿಡಿಗಾಸು ಅನುದಾನ ಬಂದಿಲ್ಲ. ಅನುದಾನ ತಂದಿದ್ದರೆ ಅದರ ವಿವರ ನೀಡಲಿ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು ಹಾಕಿದರು.

ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಸೋಮವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಭಿವೃದ್ಧಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸಂಸದರು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ಪ್ರಸಿದ್ಧ ಪ್ರವಾಸಿ ತಾಣವಾದ ಈ ಊರಿನಲ್ಲಿ ರೈಲು ನಿಲ್ಲಿಸಲೂ ಅವರಿಂದ ಸಾಧ್ಯವಾಗಿಲ್ಲ. ದಿಶಾ ಸಭೆಯಲ್ಲಿ ಜೆಡಿಎಸ್‌ ಶಾಸಕರು ಪಾಲ್ಗೊಳ್ಳುತ್ತಿಲ್ಲ ಎಂದು ಸುಮ್ಮನೆ ಅವರು ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಪಟ್ಟಣದ ರಥಸಪ್ತಮಿ ಜಾತ್ರೆಯಲ್ಲಿ ಜಾಯಿಂಟ್‌ ವೀಲ್‌ ಯಂತ್ರಕ್ಕೆ ಬಾಲಕಿಯ ತಲೆ ಕೂದಲು ಸಿಕ್ಕಿಕೊಂಡು ಕಿತ್ತು ಬಂದಿರುವುದು ದುರದೃಷ್ಟಕರ. ಕೆಲವರ ಒತ್ತಡದಿಂದ ಆ ಯಂತ್ರವನ್ನು ಹಾಕಲಾಗಿದೆ. ಜಾಯಿಂಟ್‌ ವೀಲ್‌ ಮಾಲೀಕರ ನಿರ್ಲಕ್ಷ್ಯದಿಂದ ಬಾಲಕಿ ಗಂಭೀರ ಸಮಸ್ಯೆಗೆ ಸಿಲುಕಿದ್ದಾಳೆ. ಬಾಲಕಿಯ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡುವ ಜತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ನೆರವು ಕೊಡಿಸುತ್ತೇನೆ ಎಂದು ಅವರು ಹೇಳಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಈ ಕ್ಷೇತ್ರಕ್ಕೆ ನನ್ನ ಹೆಸರನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಅಭ್ಯರ್ಥಿಯ ಬದಲಾವಣೆ ಸಾಧ್ಯತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ತಾಲ್ಲೂಕಿನ ನೇರಲಕೆರೆ, ಬಳ್ಳೇಕೆರೆ ಮತ್ತು ಶ್ರೀನಿವಾಸ ಅಗ್ರಹಾರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಮತ್ತು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇಂದ್ರೀಯ ಪ್ರಯೋಗಾಲಯ ನಿರ್ಮಾಣ ಕಾಮಗಾರಿಗೆ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು. ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.