ADVERTISEMENT

ಟಿ.ಸಿ. ಅಳವಡಿಕೆಗೆ ಹೆಚ್ಚು ಹಣ ವಸೂಲಿ: ಆಕ್ರೋಶ

ಸೆಸ್ಕ್‌ ಅಧಿಕಾರಿಗಳೊಂದಿಗೆ ನಡೆದ ರೈತರ ಸಭೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:25 IST
Last Updated 23 ಏಪ್ರಿಲ್ 2021, 5:25 IST
ಪಾಂಡವಪುರದಲ್ಲಿ ಸೆಸ್ಕ್‌ ಅಧಿಕಾರಿಗಳು ಹಾಗೂ ರೈತ ಸಂಘ ಮುಖಂಡರ ಸಭೆ ನಡೆಯಿತು
ಪಾಂಡವಪುರದಲ್ಲಿ ಸೆಸ್ಕ್‌ ಅಧಿಕಾರಿಗಳು ಹಾಗೂ ರೈತ ಸಂಘ ಮುಖಂಡರ ಸಭೆ ನಡೆಯಿತು   

ಪಾಂಡವಪುರ: ರೈತರ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್‌ (ಟಿ.ಸಿ.) ಅಳವಡಿಸಲು ಗುತ್ತಿಗೆದಾರರ ಅಗತ್ಯಕ್ಕಿಂತ ಹೆಚ್ಚು ಹಣ ಪಡೆದು ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಅಲ್ಲದೆ, ಸೆಸ್ಕ್ ಜೆಇಗಳು ವಿದ್ಯುತ್ ಪೂರೈಕೆ ವಿಚಾರದಲ್ಲಿ ರೈತರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಇಂಥ ವ್ಯವಸ್ಥೆ ಸರಿಪಡಿಸಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದರು.

ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ರೈತ ಸಂಘ ಹಾಗೂ ಸೆಸ್ಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಕ್ರಮ ಸಕ್ರಮದಡಿಯಲ್ಲಿ ಟಿ.ಸಿ.ಅಳವಡಿಸಲು ಗುತ್ತಿಗೆದಾರರು ನಿಗದಿತ ಬೆಲೆಗಿಂತ ಹೆಚ್ಚುವರಿಯಾಗಿ ₹ 40ರಿಂದ 50ಸಾವಿರ ವಸೂಲಿ ಮಾಡುತ್ತಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ಟಿ.ಸಿ.ಅಳವಡಿಲು ಅರ್ಹತೆ ಇದ್ದರೂ ಸತಾಯಿಸುತ್ತಿದ್ದಾರೆ. ರೈತರು ನಿಯಮದ ಪ್ರಕಾರ ಟಿ.ಸಿ. ಅಳವಡಿಕೆಗೆ ಎಷ್ಟು ಹಣ ನೀಡಬೇಕು ಎಂದು ತಮ್ಮ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರನ್ನು ವಂಚಿಸುತ್ತಾರೆ. ಟಿ.ಸಿ.ಅಳವಡಿಸಲು ಅರ್ಜಿ ನೀಡಿ ಹೆಚ್ಚು ಹಣ ನೀಡಿದರೆ 2ನೇ ತಿಂಗಳಲ್ಲಿ ಟಿ.ಸಿ.ಅಳವಡಿಸುತ್ತಾರೆ. ಇಲ್ಲದಿದ್ದರೆ 2–3 ವರ್ಷವಾದರೂ ರೈತರ ಕೆಲಸ ಆಗುವುದಿಲ್ಲ. ರೈತರನ್ನು ವಂಚಿಸುತ್ತಿರುವ ಗುತ್ತಿಗೆದಾರರ ಮೇಲೆ ಕ್ರಮವಹಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಭಾಗ್ಯಜ್ಯೋತಿ ವಿದ್ಯುತ್ ನಿಲ್ಲಿಸದಿರಿ: ಬಡವರು ಹಾಗೂ ಕೆಲವು ಜನಸಾಮಾನ್ಯ ರಿಗೆ ಭಾಗ್ಯಜ್ಯೋತಿ ವಿದ್ಯುತ್ ಕಲ್ಪಿಸಲಾಗಿದೆ. ಅವರಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕಿದೆ. ಆದರೆ, ಅಂಥವರಿಗೆ ವಿದ್ಯುತ್ ದರ ಕಟ್ಟಲು ಒತ್ತಡ ಹೇರಲಾಗುತ್ತಿದೆ. ಯಾವುದೇ ಕಾರಣಕ್ಕೂ ಭಾಗ್ಯಜ್ಯೋತಿ ಫಲಾನುಭವಿಗಳಲ್ಲಿ ವಿದ್ಯುತ್ ದರ ವಸೂಲಿ ಮಾಡಕೂಡದು ಎಂದರು.

ನಿತ್ಯ 7 ಗಂಟೆ ವಿದ್ಯುತ್ ನೀಡಿ: ‌ಬೆಳಗ್ಗಿನ ವೇಳೆ ವೇಳೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 6 ಗಂಟೆಯಾದರೂ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದರು. ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿದೆ ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಾಡೆ ಹರೀಶ್ ಮಾತನಾಡಿ, ರೈತರಿಗೆ ಸಮರ್ಪಕ ವಿದ್ಯುತ್ ನೀಡಿ, ಸೆಸ್ಕ್ ಕಚೇರಿಗೆ ಬರುವ ರೈತರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು. ಸೆಸ್ಕ್ ಜೆಇಗಳು ರೈತರು ಹಾಗೂ ಜನರೊಂದಿಗೆ ಅನುಚಿತವಾಗಿ ವರ್ತಿಸಬಾರದು. 2 ತಿಂಗಳಲ್ಲಿ ರೈತರ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಟಿ.ಎಸ್.ಛತ್ರ ಸೇರಿದಂತೆ ಕೆಲವು ಗ್ರಾ.ಪಂ.ವ್ಯಾಪ್ತಿಯಲ್ಲಿ ಹಗಲಲ್ಲೂ ವಿದ್ಯುತ್ ದೀಪ ಉರಿಯುತ್ತಿರುವ ಬಗ್ಗೆ ರೈತ ಮುಖಂಡ ಇಂಗಲುಗುಪ್ಪೆ ಲೋಕೇಶ್ ಪ್ರಶ್ನಿಸಿದರು. ಟಿ.ಎಸ್.ಛತ್ರ ಗ್ರಾಮದಲ್ಲಿ ಸೆಸ್ಕ್ ಕಚೇರಿ ತೆರೆದು 4 ವರ್ಷಗಳಾಗಿವೆ. ಆದರೆ ಕಚೇರಿಗೆ ಬೀಗ ಬಿದ್ದಿದ್ದು, ಗಿಡಗಂಟಿಗಳು ಬೆಳೆನಿಂತಿವೆ ಎಂದರು.

ಮಹದೇಶ್ವರಪುರದಿಂದ ಸುಂಕಾ ತೊಣ್ಣೂರು ಮಾರ್ಗವಾಗಿ ಇರುವ ವಿದ್ಯುತ್ ಲೈನ್‌ಗಳ ಮೇಲೆ ಮರ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಸೆಸ್ಕ್ ಜೆಇಗಳಿಗೆ ಮನವಿ ಮಾಡಿದರೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ದೂರಿದರು.

ಸೆಸ್ಕ್ ಇಇ ಕೆ.ಎಸ್.ರಘು ಮಾತನಾಡಿ, ರೈತ ಮುಖಂಡರು ಗಮನಕ್ಕೆ ತಂದಿರುವ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು. ₹ 2ಕೋಟಿ ಅನುದಾನದಲ್ಲಿ ಆನ್‌ ಅಂಡ್ ಆಫ್‌ ವ್ಯವಸ್ಥೆ ಹಾಗೂ ₹ 47ಲಕ್ಷ ವೆಚ್ಚದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಪರಿವರ್ತಕ ಅಳವಡಿಕೆ ಕಾರ್ಯ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ಮುಖಂಡರಾದ ಹೊಸಕೋಟೆ ವಿಜಯಕುಮಾರ್, ಕಾಡೇನಹಳ್ಳಿ ಸತೀಶ್, ನೀಲನಹಳ್ಳಿ ಸತ್ಯನಾರಾಯಣ್, ವೈ.ಜಿ.ಮಂಜುನಾಥ್, ವೈ.ಪಿ.ರಘು, ಬೇವಿನಕುಪ್ಪೆ ಅನಿಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.