ಎಂ.ಎನ್.ಯೋಗೇಶ್
ಮಂಡ್ಯ: ರಾಜ್ಯ ಸರ್ಕಾರ ಒಂದೇ ಕಂತಿನಲ್ಲಿ ₹ 50 ಕೋಟಿ ಕೊಟ್ಟರೂ ಮೈಷುಗರ್ ಕಾರ್ಖಾನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕಾರ್ಖಾನೆ ಯಂತ್ರೋಪಕರಣಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಕಳೆದೆರಡು ದಿನಗಳಿಂದ ಕಬ್ಬು ಅರೆಯದ ಕಾರಣ ರೈತರು ಕಬ್ಬು, ಎತ್ತು, ಗಾಡಿಯೊಂದಿಗೆ ಕಾರ್ಖಾನೆ ಯಾರ್ಡ್‌ನಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿ ಕಾರ್ಖಾನೆ ಕಾರ್ಯನಿರ್ವಹಣೆಯಲ್ಲಿ ತೊಡಕಾಗಿದೆ. ಬಾಯ್ಲರ್‌ಗೆ ಬಕಾಸ್ ಪೂರೈಸುವ ಕನ್ವೇಯರ್ ಬೆಲ್ಟ್ ತುಂಡಾಗಿದ್ದು ಕಬ್ಬು ಅರೆಯುವ ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೇಲಿಂದ ಮೇಲೆ ಬೆಲ್ಟ್ ತುಂಡಾಗುತ್ತಿರುವ ಕಾರಣ ಕಾರ್ಖಾನೆ ಕುಂಟುತ್ತಾ ಸಾಗುತ್ತಿದೆ. ಕಾರ್ಖಾನೆ ಆರಂಭವಾಗಿ 10 ದಿನ ಕಳೆದರೂ ಕಬ್ಬು ಅರೆದ ಪ್ರಮಾಣ 15 ಸಾವಿರ ಮೆಟ್ರಿಕ್ ಟನ್ ದಾಟಿಲ್ಲ.
ವಿದ್ಯುತ್, ಕನ್ವೇಯರ್ ಬೆಲ್ಟ್ ಮಾತ್ರವಲ್ಲದೇ ಹಲವು ಯಂತ್ರಗಳ ತಾಂತ್ರಿಕ ಸಮಸ್ಯೆ ಕಾರ್ಖಾನೆ ಸಿಬ್ಬಂದಿಯನ್ನು ಕಾಡುತ್ತಿದೆ. ಹೊಸ ಕಾರ್ಮಿಕರಲ್ಲಿ ತಾಂತ್ರಿಕ ಕೌಶಲದ ಕೊರತೆ ಇದ್ದು ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಕಬ್ಬು ಪೂರೈಸಲು ಕಾಯುತ್ತಿರುವ ರೈತರು ಹಗಲು– ರಾತ್ರಿ ಎನ್ನದೇ ಕಾಯುತ್ತಿದ್ದು ಅವರ ಗೋಳು ಕೇಳುವವರು ಇಲ್ಲವಾಗಿದ್ದಾರೆ.
ನೀರು, ಮೇವಿನ ಕೊರತೆ
ಕಾರ್ಖಾನೆ ಯಾರ್ಡ್‌ನಲ್ಲಿ ಸಾವಿರಾರು ಎತ್ತಿನ ಗಾಡಿಗಳು, ಲಾರಿಗಳು, ಟ್ರ್ಯಾಕ್ಟರ್‌ಗಳು ತಮ್ಮ ಸರದಿಗಾಗಿ ಕಾಯುತ್ತಾ ನಿಂತಿವೆ. ಕಾರ್ಖಾನೆಯೇ ಸಮರ್ಪಕವಾಗಿ ನಡೆಯದ ಕಾರಣ ರೈತರು ಕಂಗಾಲಾಗಿದ್ದಾರೆ. ರಾತ್ರಿಯಿಡೀ ಗಾಡಿಯ ಕೆಳಗೆ ಮಳೆ, ಚಳಿ ಎನ್ನದೆ ಮಲಗುತ್ತಿರುವ ರೈತರು ಆತಂಕ ಎದುರಿಸುತ್ತಿದ್ದಾರೆ.
ಸದ್ಯ ಸಮಸ್ಯೆ ಬಗೆಹರಿದಿದ್ದು ಕಬ್ಬು ಅರೆಯುವ ಪ್ರಕ್ರಿಯೆ ಆರಂಭಗೊಂಡಿದೆ ಯಾರ್ಡ್‌ನಲ್ಲಿರುವ ಕಬ್ಬು ಅರೆಯಲಾಗುತ್ತಿದೆ. ಸೋಮವಾರ ಬೆಳಿಗ್ಗೆ 10 ಗಂಟೆ ನಂತರ ಹೊಸ ಕಬ್ಬು ತರುವಂತೆ ಸೂಚಿಸಲಾಗಿದೆ. ಡಾ.ಕುಮಾರ್, ಜಿಲ್ಲಾಧಿಕಾರಿ
ಒಂದು ದಿನದೊಳಗೆ ಕಬ್ಬು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ರೈತರು ಬಂದಿದ್ದಾರೆ. ಆದರೆ 2 ದಿನ ಕಳೆದರೂ ಕಾರ್ಖಾನೆ ಕಬ್ಬು ಯಾರ್ಡ್ ಖಾಲಿಯಾಗದ ಕಾರಣ ಎತ್ತುಗಳಿಗೆ ಮೇವು, ನೀರು ಪೂರೈಸುವುದು ರೈತರಿಗೆ ಸವಾಲಾಗಿದೆ. ಕಾರ್ಖಾನೆ ಆವರಣದಲ್ಲಿ ಕುಡಿಯುವ ನೀರಿನ ಕೊರತೆಯೂ ಇದ್ದು ಎತ್ತುಗಳಿಗೆ ನೀರು ಕುಡಿಸುವುದಕ್ಕೂ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಕಾರ್ಖಾನೆ ಆವರಣದಲ್ಲಿ ಬೆಳಕೂ ಇಲ್ಲ, ಹೀಗಾಗಿ ಕತ್ತಲೆಯಲ್ಲೇ ಮಲಗುತ್ತಿದ್ದೇವೆ. ಕಾರ್ಖಾನೆ ಹಲವು ದಿನಗಳಿಂದ ನಿಂತಿದ್ದ ಕಾರಣ ಯಾರ್ಡ್‌ನಲ್ಲಿ ಗಿಡಗಂಟಿ ಬೆಳೆದು ನಿಂತಿದೆ. ಹಾವು ಹಲ್ಲಿಗಳ ಭಯ ಕಾಡುತ್ತಿದೆ. ಕಾರ್ಖಾನೆಯಲ್ಲಿ ರಿಪೇರಿ ಇದೆ ಎಂದು ಹೇಳಿಯೇ 2 ದಿನ ಕಳೆದಿದೆ’ ಎಂದು ಕೀಲಾರ ಗ್ರಾಮದ ರೈತರೊಬ್ಬರು ಬೇಸರ ವ್ಯಕ್ತಪಡಿಸಿದರು.
ಹೆಬ್ಬಾಳ ಸೇರಿತಾ ಹಾಲು?
ಕಾರ್ಖಾನೆಯಲ್ಲಿ ತಾಂತ್ರಿಕ ಸಮಸ್ಯೆ ಇರುವ ಕಾರಣ ಅರೆಯಲಾಗಿದ್ದ ಕಬ್ಬಿನ ಹಾಲನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಲು ಸಾಧ್ಯವಾಗದೇ ಮೋರಿಗೆ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಒಮ್ಮೆ ಸಂಗ್ರಹಗೊಂಡ ಹಾಲನ್ನು 24 ಗಂಟೆಯೊಳಗೆ ಕಾಯಿಸಿ ಸಕ್ಕರೆ ತಯಾರಿಸಬೇಕು. ಆದರೆ ಕಾರ್ಖಾನೆಯಲ್ಲಿ ಹಾಲು ಕಾಯಿಸುವ ಅತ್ಯಾಧುನಿಕ ವ್ಯವಸ್ಥೆ (ಬಾಯ್ಲಿಂಗ್ ಯೂನಿಟ್) ಇಲ್ಲದ ಪರಿಣಾಮ ಅಪಾರ ಪ್ರಮಾಣದ ಹಾಲು ವ್ಯರ್ಥವಾಗುತ್ತಿದ್ದು ಹೆಬ್ಬಾಳ ಸೇರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಕಾರ್ಖಾನೆಗಳ ಲಾಬಿ?
ಮೈಷುಗರ್ ಕಾರ್ಖಾನೆ ತಾಂತ್ರಿಕ ಸಮಸ್ಯೆ ಎದುರಿಸಲು ಜಿಲ್ಲೆಯಲ್ಲಿರುವ ಖಾಸಗಿ ಕಾರ್ಖಾನೆಗಳ ಲಾಬಿಯೂ ಕಾರಣ ಎಂಬ ಅನುಮಾನ ಇದೆ. ಖಾಸಗಿ ಕಾರ್ಖಾನೆಯವರು ಕಾರ್ಮಿಕರು ಕಾರ್ಖಾನೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಮೈಷುಗರ್ ತೊಂದರೆ ಎದುರಿಸುವಂತೆ ನೋಡಿಕೊಳ್ಳುತ್ತಾರೆ ಎಂಬ ಅನುಮಾನ ಮೊದಲಿನಿಂದಲೂ ಇದೆ. ‘ಈ ಹಿಂದೆ ಮೈಷುಗರ್‌ನಿಂದ ವಜಾಗೊಂಡಿದ್ದ ಹಲವು ಕಾರ್ಮಿಕರನ್ನು ಮತ್ತೆ ನೇಮಕ ಮಾಡಿಕೊಳ್ಳಲಾಗಿದೆ. ಇವರು ಖಾಸಗಿ ಕಾರ್ಖಾನೆಗಳಲ್ಲೂ ಕೆಲಸ ಮಾಡುತ್ತಿದ್ದರು. ಇವರ ಮೇಲೆ ಖಾಸಗಿ ಕಾರ್ಖಾನೆ ಅಧಿಕಾರಿಗಳು ಪ್ರಭಾವ ಬೀರಿರುವ ಸಾಧ್ಯತೆಯೂ ಇದೆ’ ಎಂದು ಹಿರಿಯ ಕಾರ್ಮಿಕರೊಬ್ಬರು ಅನುಮಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.