ಹಲಗೂರು: ‘ಮಳವಳ್ಳಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೂ ಪಠ್ಯ ಪುಸ್ತಕ, ಸಮವಸ್ತ್ರ ಸರಬರಾಜು ಮಾಡಲಾಗಿದ್ದು ಶಾಲೆಯ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್ ತಿಳಿಸಿದರು.
ಸಮೀಪದ ಕೆಂಪಯ್ಯನದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ‘ಶಾಲಾ ಆರಂಭೊತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೇ 29ರಂದು ದಾಖಲಾತಿ ಆಂದೋಲನ, ಶಾಲಾ ಸ್ವಚ್ಛತೆ ಮತ್ತು ಸಿದ್ಧತೆಗೆ ಮುಂದಾಗಿದ್ದು, 30ರಂದು ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿಯೂ ತಳಿರು ತೋರಣ ಕಟ್ಟಿ ಸಿಂಗಾರ ಮಾಡಿ, ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಗಳಿಗೆ ಸ್ವಾಗತಿಸಲು ಸಜ್ಜುಗೊಳಿಸಲಾಗಿದೆ’ ಎಂದರು.
ಶಾಲೆ ಆರಂಭದ ಮೊದಲ ದಿನ ಎತ್ತಿನಗಾಡಿಯಲ್ಲಿ ಸರಸ್ವತಿ ದೇವಿಯ ಭಾವಚಿತ್ರ ಇರಿಸಿ, ಪೂಜಾ ಕುಣಿತ, ತಮಟೆ, ನಗಾರಿ ವಾದ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಮೆರವಣಿಗೆ ಮುಖಾಂತರ ಶಾಲೆಗೆ ಕರೆತರಲಾಯಿತು. ವಿದ್ಯಾರ್ಥಿನಿಯರು ಪೂರ್ಣಕುಂಭಗಳೊಂದಿಗೆ ಸಾಗಿದರೇ, ವಿದ್ಯಾರ್ಥಿಗಳು ತಮಟೆ ವಾದನಕ್ಕೆ ನೃತ್ಯ ಮಾಡಿ ಖುಷಿಪಟ್ಟರು. ನಂತರ ವಿದ್ಯಾರ್ಥಿಗಳಿಗೆ ಸಿಹಿಯೂಟ ಬಡಿಸಲಾಯಿತು.
ಶಾಲೆಯ ಶ್ರೇಯೋಭಿವೃದ್ಧಿಗೆ ಪರಸ್ಪರ ಸಹಕಾರ ನೀಡಿ, ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿರುವುದಕ್ಕೆ ಮುಖ್ಯ ಶಿಕ್ಷಕ ಸುಂದ್ರಪ್ಪ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ದಯಾನಂದ್, ಮುಖ್ಯ ಶಿಕ್ಷಕ ಸುಂದ್ರಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಶಂಕರ್, ಸದಸ್ಯರಾದ ರವಿ, ಆಶಾ ಕೆಂಚೇಗೌಡ, ಮುಖಂಡರಾದ ಮೋಹನ್ ಕುಮಾರ್, ರಾಮು, ಮಾದೇಗೌಡ ಮತ್ತು ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.