ಚಿತ್ರದುರ್ಗ: ‘ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಳ್ಳುವ ದಿನಗಳು ಸಮೀಪಿಸುತ್ತಿವೆ. ಯೋಜನೆಗೆ ತಾಂತ್ರಿಕ ತೊಡಕಾಗಿದ್ದ ಅಬ್ಬಿನಹೊಳಲು ಸ್ಥಳ ಸಮಸ್ಯೆ ಬಗೆಹರಿದಿದ್ದು ಕಾಮಗಾರಿ ಭರದಿಂದ ಸಾಗಿದೆ. ಮುಂಗಾಯು ಮುಗಿಯುವುದರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪ್ರಸ್ತುತ ಭದ್ರಾ ಜಲಾಶಯದಿಂದ ಪ್ರತಿ ನಿತ್ಯ 700 ಕ್ಯಸೆಕ್ ನೀರು ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಎತ್ತಿನಹೊಳೆ ಮುಖ್ಯ ಕಾಲುವೆ 32.50 ಕಿ.ಮೀ.ಯಲ್ಲಿ ಬೇಲೂರು ತಾಲ್ಲೂಕಿನ ಹೊಲಬಗೆರೆ ಗ್ರಾಮದ ಎಸ್ಕೆಪ್ ಮೂಲಕ ವೇದಾವತಿ ನದಿಗೆ ನೀರು ಹರಿಸುವ, ಆ ಮೂಲಕ ವಿವಿ ಸಾಗರ ತುಂಬಿಸುವ ಪ್ರಸ್ತಾವವೂ ಇದೆ’ ಎಂದರು.
‘ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್ ಉತ್ಪಾದನೆ ನಂತರ ಸಮುದ್ರಕ್ಕೆ ಹರಿದು ಹೋಗುವ ಸುಮಾರು 40 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಈ ಯೋಜನೆ ಮೂಲಕವೂ ವಾಣಿವಿಲಾಸ ಸಾಗರ ಜಲಾಶಯದಲ್ಲಿ ನೀರು ಶೇಖರಿಸಿ ನಂತರ ಬೆಂಗಳೂರಿಗೆ ನೀರೊಯ್ಯುವ ಪ್ರಸ್ತಾವದ ಸರ್ವೆ ಕಾರ್ಯ ಪ್ರಾರಂಭಿಸಲಾಗಿದೆ’ ಎಂದರು.
‘ಈ ಬಾರಿ ವಾಣಿ ವಿಲಾಸ ಸಾಗರ ಭರ್ತಿಯಾಗುವ ಎಲ್ಲಾ ಅವಕಾಶಗಳು ದಟ್ಟವಾಗಿದ್ದು, ಇದರಿಂದ ನಮ್ಮ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಳವಾಗವುದು ಬಹುತೇಕ ನಿಶ್ಚಿತವಾಗಿದೆ. ಇದರಿಂದ ರೈತರು ಉತ್ತಮ ಇಳುವರಿ ಪಡೆದು ಸಬಲರಾಗುತ್ತಾರೆ’ ಎಂದರು.
‘ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಪೂರ್ವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,30,694 ರೈತರ ತಾಕುಗಳ ಪೈಕಿ 1,28,375 ತಾಕುಗಳ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. 2023ರ ಮುಂಗಾರು ಹಂಗಾಮಿನಲ್ಲಿ 81,501 ರೈತರು ₹ 284.22 ಕೋಟಿ ಬೆಳೆ ವಿಮೆ ಪಡೆದಿದ್ದಾರೆ’ ಎಂದರು.
‘2024ರ ಮುಂಗಾರು ಹಂಗಾಮಿನಲ್ಲಿ 1,12,101 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದು, ಜಿಲ್ಲೆಯು ರಾಜ್ಯದಲ್ಲಿ 8ನೇ ಸ್ಥಾನದಲ್ಲಿದೆ. 2023 ಮುಂಗಾರು ಹಂಗಾಮಿನಲ್ಲಿ 1,44,166 ರೈತರಿಗೆ ₹ 125.75 ವಿಮಾ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ’ ಎಂದರು.
‘ಗ್ರಾಮೀಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಇತ್ತೀಚಿಗೆ ವಿದ್ಯಾರ್ಥಿ ವೇತನ ಘೋಷಿಸಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಶಾಸನ ನೀಡುತ್ತಿದೆ. ಜಿಲ್ಲೆಯಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಸಾರಿಗೆ-ಸಂಪರ್ಕ, ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ, ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರು, ಮಹಿಳೆಯರು, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಸದ ಗೋವಿಂದ ಎಂ.ಕಾರಜೋಳ, ಆದಿಜಾಂಬವ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಇದ್ದರು.
ಸರ್ಕಾರವು ಜನರ ಸರ್ವತೋಮುಖ ಏಳಿಗೆಗಾಗಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಿರಾತಂಕವಾಗಿ ಸಾಗುತ್ತಿದ್ದು ಜನರಿಗೆ ಅನುಕೂಲವಾಗಿದೆ. ಮುಂದೆಯೂ ಯಾವುದೇ ಅಡ್ಡಿಯಿಲ್ಲದೆ ಈ ಯೋಜನೆಗಳು ಮುಂದುವರಿಯಲಿವೆ’ ಎಂದು ಸಚಿವ ಡಿ.ಸುಧಾಕರ್ ನೀಡಿದರು. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 450 ಲಕ್ಷ ಗೃಹಜ್ಯೋತಿ ಯೋಜನೆಯಡಿ 3.71 ಲಕ್ಷ ಗೃಹಲಕ್ಷ್ಮಿ ಯೋಜನೆಯಡಿ 3.81 ಲಕ್ಷ ಯುವನಿಧಿ ಯೋಜನೆಯಡಿ 4726 ಮಂದಿ ಹಾಗೂ ಶಕ್ತಿ ಯೋಜನೆಯಡಿ 2.60 ಕೋಟಿ ಮಹಿಳೆಯರು ಸದುಪಯೋಗ ಪಡೆದುಕೊಂಡಿದ್ದಾರೆ. ಇಡೀ ದೇಶದಲ್ಲಿಯೇ ಮೊದಲು ಜಾರಿಗೆ ತಂದಿರುವ ಈ ಐದು ಗ್ಯಾರಂಟಿ ಯೋಜನೆಗಳು ಬಡವರನ್ನು ಕೆಳವರ್ಗದ ಜನರನ್ನು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆ. ‘ಯುವಕರಿಗೆ ಉದ್ಯೋಗ ನೀಡುವ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಮುಂದಿರುತ್ತದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ’ ಎಂದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ನೋಡುಗರ ಮನಸೂರೆಗೊಂಡಿತು. ಕೋಟೆ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಭಂಟ ಶೂರ ಸಂಗೊಳ್ಳಿ ರಾಯಣ್ಣನ ಕುರಿತು ನೃತ್ಯ ಪ್ರದರ್ಶಿಸಿದರು.
ಸಂಗೊಳ್ಳಿ ರಾಯಣ್ಣನ ಜಯಂತಿಯೂ ಇದ್ದ ಹಿನ್ನೆಲೆಯಲ್ಲಿ ಈ ನೃತ್ಯ ಪ್ರದರ್ಶನ ನೋಡುಗರಲ್ಲಿ ರೋಮಾಂಚನ ಮೂಡಿಸಿತು. ಪಿಳ್ಳೇಕೆರನಹಳ್ಳಿ ಬಾಪೂಜಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಸುರಪುರ ವೆಂಕಟಪ್ಪ ನಾಯಕ ಜೀವನ ವೃತ್ತಾಂತದ ನೃತ್ಯ ರೂಪಕ ಪ್ರದರ್ಶಿಸಿದರು. ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದೇಶದ ವಿವಿಧತೆಯಲ್ಲಿ ಏಕತೆ ಮೂಡಿಸುವ ಸಂದೇಶವುಳ್ಳ ನೃತ್ಯ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.