ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ, ಕಾವೇರಿ ನದಿಯ ಮಧ್ಯೆ ದಾಸ ಶ್ರೇಷ್ಠ ಕನಕದಾಸರು ಕುಳಿತು ಧ್ಯಾನ ಮಾಡಿದ ‘ಕನಕನ ಬಂಡೆ‘ ತಾಣದ ಅಭಿವೃದ್ಧಿ ಮಾತಿಗೆ ಮಾತ್ರ ಸೀಮಿತವಾಗಿದೆ.
ಮಹದೇವಪುರದ ಪೂರ್ವ ದಿಕ್ಕಿನಲ್ಲಿ, ನದಿಯ ಮಧ್ಯೆ ಇರುವ ಕನಕನ ಬಂಡೆ ತಾಣವನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ಒತ್ತಾಯ ದಶಕದಿಂದಲೂ ಕೇಳಿ ಬರುತ್ತಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಐದಾರು ವರ್ಷಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಿಗಮದಿಂದ ಒಂದಷ್ಟು ರಸ್ತೆ ಅಭಿವೃದ್ಧಿ ಕೆಲಸವೂ ಆಗಿದೆ. ಆದರೆ ಕಾವೇರಿ ನದಿಯ ದಡದಿಂದ 100 ಮೀಟರ್ ದೂರದಲ್ಲಿರುವ ಕನಕನ ಬಂಡೆಯನ್ನು ಸ್ಪರ್ಶಿಸಿ ಪುಳಕಿತರಾಗಬೇಕು ಎಂಬ ಭಕ್ತರ ಬಯಕೆ ಇನ್ನೂ ಈಡೇರಿಲ್ಲ.
ಈ ತಾಣವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಬೇಕು ಎಂದು ಕನಕ ಶ್ರೀ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕನಕ ಗುರುಪೀಠದ ಕೆ.ಆರ್. ನಗರ ಶಾಖೆಯ ಈಶ್ವರಾನಂದಪುರಿ ಸ್ವಾಮೀಜಿ ಇಲ್ಲಿಗೆ ಬಂದು ಹೋಗಿದ್ದಾರೆ. ಈ ತಾಣದ ಅಭಿವೃದ್ಧಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತನಾಡುತ್ತೇನೆ ಎಂಬ ಮಾತನ್ನೂ ಆಡಿದ್ದರು. ಸಿ.ಎಚ್. ವಿಜಯಶಂಕರ್ ಮೇಘಾಲಯ ರಾಜ್ಯಪಾಲರಾಗುವ ಮುನ್ನ ಟ್ರಸ್ಟ್ ಅವರಿಗೂ ಮನವಿ ಸಲ್ಲಿಸಿತ್ತು.
‘ಕನಕದಾಸರು ಧ್ಯಾನ ಮಾಡಿರುವ ಈ ಪವಿತ್ರ ಬಂಡೆಯ ಪರಿಸರವನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಮುಖಂಡರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾರೂ ಇತ್ತ ಆಸಕ್ತಿ ವಹಿಸುತ್ತಿಲ್ಲ’ ಎಂದು ಕನಕ ಶ್ರೀ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಸಿದ್ದರಾಜು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕನಕದಾಸರು ಬಾಳೆ ಎಲೆಯ ಮೇಲು ತೇಲುತ್ತಾ ನದಿಯನ್ನು ದಾಟಿದ ದೃಶ್ಯವನ್ನು ಕಂಡ ಅಂಬಿಗನಿಗೆ ಅವರ ಬಗ್ಗೆ ಭಕ್ತಿ ಉಂಟಾಗಿ ಗುಡಿ ಕಟ್ಟಿದ ಎಂದು ಸ್ಥಳೀಯರು ಹೇಳುತ್ತಾರೆ. ಅದಕ್ಕೆ ಪುಷ್ಠಿ ನೀಡುವಂತೆ ಕನಕನ ಬಂಡೆ ಸಮೀಪ, ನದಿಯ ದಡದಲ್ಲಿ ಕನಕನ ಗುಡಿ ಈಗಲೂ ಇದೆ. ‘ಪ್ರತಿ ಶನಿವಾರ ಮತ್ತು ವಿಶೇಷ ಸಂದರ್ಭಗಳಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತವೆ’ ಎಂದು ಕನಕನ ಗುಡಿಯ ಅರ್ಚಕ ಬೋರಯ್ಯ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.