ಶ್ರೀರಂಗಪಟ್ಟಣ: ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ಮರಳಾಗಾಲ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳ ಚಾವಣಿಗಳು ಹಾರಿ ಹೋಗಿವೆ.
ಗ್ರಾಮದ ಬೋರೆ ಪ್ರದೇಶದಲ್ಲಿರುವ ಪ್ರೇಮಮ್ಮ, ಭಾಗ್ಯಮ್ಮ, ನಿಂಗಣ್ಣ, ಲಕ್ಷ್ಮಮ್ಮ, ಸ್ವಾಮಿ, ನರಸಿಂಹ ಇತರರ ಮನೆಗಳ ಹೆಂಚುಗಳು ಜಂತಿ ಸಹಿತ ಮುರಿದು ಬಿದ್ದಿವೆ. ಕಲ್ನಾರ್ ಸೀಟುಗಳು ಹತ್ತಾರು ಮೀಟರ್ ದೂರ ಹಾರಿ ಹೋಗಿ ಬಿದ್ದಿವೆ. ಕೆಲವು ಮನೆಗಳ ಜಂತಿ, ರಿಪೀಸುಗಳು ಕೂಡ ಮುರಿದಿವೆ.
ಮೇಲೆ ಹೆಂಚುಗಳು ಬಿದ್ದ ಪರಿಣಾಮ ಮನೆಯಲ್ಲಿದ್ದ ಪಾತ್ರೆ, ಪಗಡೆ, ಬಟ್ಟೆ, ಆಹಾರ ಧಾನ್ಯ ಮತ್ತು ಟಿವಿಗಳು ಹಾನಿಗೀಡಾಗಿವೆ. ಮನೆಗಳಲ್ಲಿ ಇದ್ದವರಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಇದೇ ಗ್ರಾಮದ ಕೃಷ್ಣೇಗೌಡ ಅವರ ಆಲೆಮನೆಯ ಛಾವಣಿಯ ಕಲ್ನಾರ್ ಸೀಟುಗು ಅರ್ಧದಷ್ಟು ಮುರಿದು ಬಿದ್ದಿವೆ.
‘ಸುಮಾರು ₹ ಒಂದು ಲಕ್ಷ ನಷ್ಟ ಉಂಟಾಗಿದೆ’ ಎಂದು ಕೃಷ್ಣೇಗೌಡ ಹೇಳಿದ್ದಾರೆ.
‘ಬಿರುಗಾಳಿಯಿಂದ ಹಾನಿಗೀಡಾಗಿರುವ ಮನೆಗಳ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ಕೃಷ್ಣೇಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಗೌರಿಪುರ ಬಳಿ ಬಿರುಗಾಳಿಗೆ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪೀಹಳ್ಳಿ ಬಳಿ, ನಾಲೆಯ ತಿರುವಿನಲ್ಲಿ ಬುಧವಾರ ರಾತ್ರಿ ಅರಳಿಮರದ ರೆಂಬೆ ಮುರಿದು ಗುಡಿಸಲಿನ ಮೇಲೆ ಬಿದ್ದಿದೆ. ಗುಡಿಸಲಿನಲ್ಲಿ ಮಲಗಿದ್ದ ಲಕ್ಷ್ಮಣ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.