ADVERTISEMENT

ಮಂಡ್ಯ | ಐದು ವರ್ಷ ಮುಚ್ಚಿದ್ದ ಶಾಲೆ ಈಗ ಮಾದರಿ: ಖಾಸಗಿ ಶಾಲೆಗಳಿಗೆ ಸಡ್ಡು

ಆರ್.ಜಿತೇಂದ್ರ
Published 21 ಡಿಸೆಂಬರ್ 2023, 6:50 IST
Last Updated 21 ಡಿಸೆಂಬರ್ 2023, 6:50 IST
ಪುರದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಗಳದಲ್ಲಿ ಬಿಸಿಯೂಟ ಸೇವಿಸುತ್ತಿರುವ ಮಕ್ಕಳು
ಪುರದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಗಳದಲ್ಲಿ ಬಿಸಿಯೂಟ ಸೇವಿಸುತ್ತಿರುವ ಮಕ್ಕಳು   

ಮಂಡ್ಯ: ಐದು ವರ್ಷ ಮುಚ್ಚಿದ್ದ ಸರ್ಕಾರಿ ಶಾಲೆಯಲ್ಲೀಗ 118 ವಿದ್ಯಾರ್ಥಿಗಳಿದ್ದಾರೆ! ಸುತ್ತಲಿನ ಗ್ರಾಮಗಳಿಗೆ ಮಾದರಿಯಾಗಿ, ಖಾಸಗಿ ಶಾಲೆಗಳ ಮಕ್ಕಳನ್ನೂ ಸೆಳೆಯತೊಡಗಿದೆ. ಸ್ಥಳಾವಕಾಶದ ಕೊರತೆಯಿಂದ ಈ ವರ್ಷ ದಾಖಲಾತಿಯನ್ನು ನಿರಾಕರಿಸಲಾಗಿದೆ. ಪ್ರವೇಶ ಕೊಡುವಂತೆ ಜನಪ್ರತಿನಿಧಿಗಳು ಶಿಫಾರಸು ಮಾಡುವ ಮಟ್ಟಕ್ಕೆ ಬೆಳೆದಿದೆ.

ಇದು ತಾಲ್ಲೂಕಿನ ದುದ್ದ ಹೋಬಳಿಯ ಪುರದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಇದ್ದು, ಮುಂದಿನ ಸಾಲಿನಿಂದಲೇ ಆರನೇ ತರಗತಿ ಆರಂಭಕ್ಕೆ ಸಿದ್ಧತೆ ನಡೆದಿದೆ.

ವಿದ್ಯಾರ್ಥಿಗಳ ಕೊರತೆಯಿಂದಾಗಿ 2017ರಿಂದ 2021ರವರೆಗೆ ಮುಚ್ಚಿದ ಬಳಿಕ ಶಾಲೆಯು ಕುಡುಕರ ಅಡ್ಡೆಯಾಗಿತ್ತು. 2021ರ ಡಿಸೆಂಬರ್‌ನಲ್ಲಿ ವರ್ಗವಾಗಿ ಬಂದ ಶಿಕ್ಷಕ ಎಂ.ಸಿ. ನಾಗೇಶ್, ಎಸ್‌ಡಿಎಂಸಿ ಸಮಿತಿ ಸದಸ್ಯರ ಜೊತೆಗೂಡಿ ಮನೆಮನೆಗೆ ತಿರುಗಿ 12 ವಿದ್ಯಾರ್ಥಿಗಳೊಂದಿಗೆ ಶಾಲೆಯನ್ನು ಮತ್ತೆ ಆರಂಭಿಸಿದರು.

ADVERTISEMENT

ಕಳೆದ ಸಾಲಿನಲ್ಲಿ 1ರಿಂದ 5ನೇ ತರಗತಿವರೆಗೆ 48 ಮಕ್ಕಳು ದಾಖಲಾಗಿದ್ದು, ಈ ವರ್ಷ 64 ಮಕ್ಕಳಿದ್ದಾರೆ. 2022ರಿಂದ ‘ಮಕ್ಕಳ ಮನೆ’ ಹೆಸರಿನಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣವನ್ನೂ ನೀಡಲಾಗುತ್ತಿದ್ದು, ಸುತ್ತಲಿನ 11 ಗ್ರಾಮಗಳಿಂದ ಮೊದಲ ವರ್ಷ 50 ಹಾಗೂ ಈ ವರ್ಷ 54 ಚಿಣ್ಣರು ದಾಖಲಾಗಿದ್ದಾರೆ. ಉಚಿತ ಸಮವಸ್ತ್ರ, ಬಿಸಿಯೂಟ, ಶೂ ಜೊತೆಗೆ ದಾನಿಗಳ ನೆರವಿನಿಂದ ಪುಸ್ತಕ, ಬ್ಯಾಗ್ ವಿತರಿಸಲಾಗಿದೆ.   ವ್ಯಾನ್ ವ್ಯವಸ್ಥೆಯೂ ಇದೆ. ಗ್ರಾಮಸ್ಥರು ಕಾನ್ವೆಂಟ್ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಇಲ್ಲಿಗೆ ಸೇರಿಸಿದ್ದಾರೆ.

ಹೊರ ಆವರಣವನ್ನು ಕಲಾವಿದರ ಸಹಾಯದಿಂದ ಟ್ರೇನ್‌ ಮಾದರಿಯಲ್ಲಿ ಚಿತ್ರಿಸಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆಟದ ಮೈದಾನ, ಪುಟ್ಟ ಕೈತೋಟವಿದ. ನಾಗೇಶ್‌ ಜೊತೆಗೆ ಕೆ.ಜೆ. ಗೋವಿಂದರಾಜು ಎಂಬ ಮತ್ತೊಬ್ಬ ಶಿಕ್ಷಕರಿದ್ದಾರೆ.

ಕೊಠಡಿ, ಶೌಚಾಲಯದ ಕೊರತೆ:

ಮಕ್ಕಳು, ಶಿಕ್ಷಕರೂ ಸೇರಿ 120 ಮಂದಿಗೆ ಒಂದೇ ಶೌಚಾಲಯವಿದೆ. ನಾಲ್ಕು ಕೊಠಡಿಗಳ ಪೈಕಿಮೂರನ್ನು ತರಗತಿಗಳಿಗೆ ಹಾಗೂ ಇನ್ನೊಂದನ್ನು ಶಿಕ್ಷಕರು ಹಾಗೂ ಅಕ್ಷರದಾಸೋಹ ಸಾಮಗ್ರಿಗಳಿಗಾಗಿ ಮೀಸಲಿರಿಸಲಾಗಿದೆ.

‘ಶಾಲೆಗೆ ಇನ್ನೂ 3–4 ಕೊಠಡಿ ಹಾಗೂ ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ. ನರೇಗಾ ಅಡಿ ಶೌಚಾಲಯ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ಶಾಲೆ ಪಾಲಿನ ವಂತಿಗೆ ಸಿಗದೆ ಕಾಮಗಾರಿ ಆರಂಭಗೊಂಡಿಲ್ಲ. ಕೊಠಡಿಗಳು ಸೋರುತ್ತಿದ್ದು, ದುರಸ್ತಿ ಅಗತ್ಯವಿದೆ. ಮಕ್ಕಳಿಗೆ ಮೇಜು, ಅಡುಗೆ ಕೋಣೆ ಹಾಗೂ ಸಿಬ್ಬಂದಿ ಬೇಕು. ಸೌಲಭ್ಯ ನೀಡಿದರೆ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಲಿದೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಜವರೇಗೌಡ.

ಪುರದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಗಳ
ಬಸವೇಶ್ವರ ಸಮುದಾಯ ಭವನದಲ್ಲಿ ‘ಮಕ್ಕಳ ಮನೆ’ ಎಲ್‌ಕೆಜಿ ಯುಕೆಜಿ ತರಗತಿ ನಡೆದಿರುವುದು
ನನ್ನ ಇಬ್ಬರು ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಮೈಸೂರಿನ ಶಾಲೆಯಿಂದ ಮಗನನ್ನು ಬಿಡಿಸಿ ಇಲ್ಲಿಗೆ ಸೇರಿಸಿದ್ದು ಕಲಿಕೆ ಉತ್ತಮವಾಗಿದೆ
ಶ್ರುತಿ ಪೋಷಕರು
ಇಡೀ ಶಾಲೆಗೆ ಒಂದೇ ಶೌಚಾಲಯವಿದೆ. ಕೊಠಡಿಗಳ ಕೊರತೆಯೂ ಇದೆ. ಸಮುದಾಯ ಭವನದಲ್ಲಿ ಕಲಿಯುತ್ತಿರುವ ಎಲ್‌ಕೆಜಿ ಯುಕೆಜಿ ಮಕ್ಕಳಿಗೆ ತುರ್ತಾಗಿ ಕೊಠಡಿಗಳ ಅಗತ್ಯವಿದೆ
ಜವರೇಗೌಡ ಎಸ್‌ಡಿಎಂಸಿ ಅಧ್ಯಕ್ಷ
ಸಮುದಾಯ ಭವನದಲ್ಲಿ ಕಲಿಕೆ!
‘ಮಕ್ಕಳ ಮನೆ’ ಎಲ್‌ಕೆಜಿ ಯುಕೆಜಿ ತರಗತಿಗಳನ್ನು ಪಕ್ಕದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ. ಸಮಾರಂಭಗಳು ನಡೆಯುವಾಗ ಮಕ್ಕಳನ್ನು ಮತ್ತೆ ಶಾಲೆಗೇ ಕಳಿಸುವುದರಿಂದ ಕುಳಿತುಕೊಳ್ಳಲಿಕ್ಕೂ ಸ್ಥಳಾವಕಾಶವಿಲ್ಲದಂತಾಗುತ್ತದೆ’ ಎಂಬುದು ಗ್ರಾಮಸ್ಥರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.