ಮಂಡ್ಯ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ‘ಜಲ ವಿಮಾನದ ಪ್ರಾಯೋಗಿಕ ಹಾರಾಟ’ (ಸೀ ಪ್ಲೇನ್ ಡೆಮಾನ್‌ಸ್ಟ್ರೇಷನ್) ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಸ್ಥಳವನ್ನು ನಿಗದಿ ಮಾಡಿದೆ.
ಕೇಂದ್ರ ಸರ್ಕಾರದ ವಿಮಾನಯಾನ ಸಚಿವಾಲಯದ ನಿರ್ದೇಶನದಂತೆ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ವಿವಿಧ ಇಲಾಖೆಗಳ ಸಹಯೋಗದಲ್ಲಿ ನವೆಂಬರ್ 10ರಂದು ಬೆಳಿಗ್ಗೆ 9.15ಕ್ಕೆ ಜಲ ವಿಮಾನದ ಪ್ರಾಯೋಗಿಕ ಹಾರಾಟಕ್ಕೆ ಸಿದ್ಧತೆ ಕೈಗೊಂಡಿದೆ.
ಪ್ರವಾಸೋದ್ಯಮವನ್ನು ಉತ್ತೇಜಿಸಲೆಂದೇ ಈ ಹಾರಾಟವನ್ನು ಹಮ್ಮಿಕೊಳ್ಳಲಾಗಿದ್ದು, 12 ಪ್ರವಾಸಿಗರನ್ನು ಹೊತ್ತ ಮೊದಲ ‘ಸೀ ಪ್ಲೇನ್’ ಕೆ.ಆರ್.ಎಸ್ ಹಿನ್ನೀರಿನಲ್ಲಿ 4 ಬಾರಿ ಹಾರಾಟ ನಡೆಸಲಿದೆ. ನೀರಿನ ಮೇಲಿನಿಂದಲೇ ಹಾರಾಟ ನಡೆಸುವ ಮತ್ತು ನೀರಿನ ಮೇಲೆಯೇ ಇಳಿಯುವ ಸೀಪ್ಲೇನ್‌ಗಳು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವಾಗಿ ಬಳಸಲಿವೆ.
2020ರಲ್ಲಿ ಗುಜರಾತ್‌ನ ನರ್ಮದಾ ಜಿಲ್ಲೆಯ ಸಬರಮತಿ ನದಿಯಲ್ಲಿ ಮೊದಲನೇ ‘ಜಲವಿಮಾನ ಸೇವೆ’ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕೇರಳ, ಆಂಧ್ರಪ್ರದೇಶದಲ್ಲೂ ಯಶಸ್ವಿಯಾಗಿ ಪರಿಚಯಿಸಿದ ನಂತರ ಈಗ ರಾಜ್ಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ‘ಉಡಾನ್’ ಯೋಜನೆಯಡಿ ಸೇವೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
‘ಪ್ರಯಾಣಿಕರು ವಿಮಾನ ಹತ್ತಲು ಹಾಗೂ ಇಳಿಯಲು ಕೆ.ಆರ್.ಎಸ್. ಜಲಾಶಯದಲ್ಲಿ ‘ತೇಲು ಸೇತುವೆ’ ವ್ಯವಸ್ಥೆಯನ್ನು ಕರ್ನಾಟಕ ಜಲಸಾರಿಗೆ ಮಂಡಳಿ ಮಾಡಲಿದೆ. ಸಂಪರ್ಕ ರಸ್ತೆ, ಪಾರ್ಕಿಂಗ್ ಮತ್ತು ಸುರಕ್ಷತೆ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ವಿಮಾನ ಲ್ಯಾಂಡಿಂಗ್, ಇಂಧನ ಮತ್ತು ಇತರ ಲಾಜಿಸ್ಟಿಕ್ ಬೆಂಬಲವನ್ನು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ನೋಡಿಕೊಳ್ಳಲಿದ್ದಾರೆ’ ಎಂದು ಕೆಎಸ್‌ಐಐಡಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೀಪ್ಲೇನ್ ಸಾರಿಗೆ ತಂತ್ರಜ್ಞರನ್ನು ಒಳಗೊಂಡ ತಂಡವು ಈಗಾಗಲೇ ದೋಣಿ ಮೂಲಕ ವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ಆನಂದೂರು ಬಳಿ ಎರಡು ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದೆ. ಕಾರ್ಯಾಚರಣೆಗೆ ಅಗತ್ಯವಾದ, 10 ಅಡಿ ಆಳದೊಂದಿಗೆ 1.5 ಕಿ.ಮೀ ಉದ್ದದ ನೀರಿನ ಪರಿಸ್ಥಿತಿ, ಆಳ ಮತ್ತು ತಾಂತ್ರಿಕ ಅಂಶಗಳ ಕುರಿತು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳಿಂದ ಮಾಹಿತಿ ಪಡೆದಿದೆ.
‘ಕಾರ್ಯಾಚರಣೆ ಯಶಸ್ವಿಯಾದರೆ, ಆರಂಭವಾಗುವ ಜಲವಿಮಾನ ಸೇವೆಯಿಂದ ಸ್ಥಳೀಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ವಿಶ್ವ ಪ್ರಸಿದ್ಧ ಬೃಂದಾವನ ಉದ್ಯಾನವು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಕವಾಗಲಿದೆ’ ಎಂದು ಪಾಂಡವಪುರ ತಹಶೀಲ್ದಾರ್ ಎಸ್.ಸಂತೋಷ್ ತಿಳಿಸಿದರು.
ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಿದ್ಧತೆ ಮೈಸೂರು ವಿಮಾನ ನಿಲ್ದಾಣ ಸಾರಿಗೆ ಕೇಂದ್ರ
ಮೂರು ಬೋಟ್ 50 ಲೈಫ್ ಜಾಕೆಟ್ ನೀರಿನಲ್ಲಿ ತೇಲುವ ತಾತ್ಕಾಲಿಕ ಸೇತುವೆ ಸೇರಿದಂತೆ ‘ಸೀ ಪ್ಲೇನ್’ ಕಾರ್ಯಾಚರಣೆಗೆ ಅಗತ್ಯವಾದ ಸಿದ್ಧತೆಗಳನ್ನು ಮಂಡ್ಯ ಜಿಲ್ಲಾಡಳಿತ ಕೈಗೊಂಡಿದೆಕುಮಾರ ಜಿಲ್ಲಾಧಿಕಾರಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.