ADVERTISEMENT

ಶಿವಲಿಂಗ ಕದ್ದೊಯ್ದು ತಂದಿಟ್ಟ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 4:55 IST
Last Updated 15 ಏಪ್ರಿಲ್ 2021, 4:55 IST
ಕೆರಗೋಡು ಸಮೀಪದ ಹಲ್ಲೇಗೆರೆ ಗ್ರಾಮದ ಈಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಪತ್ತೆಯಾದ ದುಷ್ಕರ್ಮಿಗಳು ಅಪಹರಿಸಿದ್ದ ಶಿವಲಿಂಗ
ಕೆರಗೋಡು ಸಮೀಪದ ಹಲ್ಲೇಗೆರೆ ಗ್ರಾಮದ ಈಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಪತ್ತೆಯಾದ ದುಷ್ಕರ್ಮಿಗಳು ಅಪಹರಿಸಿದ್ದ ಶಿವಲಿಂಗ   

ಕೆರಗೋಡು: ಸಮೀಪದ ಹಲ್ಲೇಗೆರೆ ಗ್ರಾಮದ ಐತಿಹಾಸಿಕ ಈಶ್ವರ ದೇವಸ್ಥಾನದಲ್ಲಿ ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳು ಶಿವಲಿಂಗ ಕಿತ್ತು, ಕದ್ದೊಯ್ದು, ಮಂಗಳವಾರ ರಾತ್ರಿ ಅಲ್ಲಿಯೇ ತಂದು ಇಟ್ಟಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಗ್ರಾಮಸ್ಥರು ಕಾಶಿ ವಿಶ್ವನಾಥ ದೇವಸ್ಥಾನ ದಿಂದ ಶಿವಲಿಂಗ ತರಿಸಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದರು. ಹಬ್ಬ ಹಾಗೂ ವಿಶೇಷ ದಿನಗಳಂದು ಭಕ್ತರು ವಿವಿಧ ಪೂಜಾ ಕೈಂಕರ್ಯಗಳನ್ನು ದೇವಾಲಯದಲ್ಲಿ ನಡೆಸಿಕೊಂಡು ಬರುತ್ತಿದ್ದರು.

ಯುಗಾದಿ ಹಬ್ಬದ ಹಿಂದಿನ ದಿನ ಸೋಮವಾರ ತಡರಾತ್ರಿಯವರೆಗೂ ಪೂಜಾ ಸಿದ್ಧತೆ ನಡೆಸಲಾಗಿತ್ತು. ಹಬ್ಬದ ದಿನ ಮಂಗಳವಾರ ಪೂಜೆಗೆ ಅರ್ಚಕರು ಬಂದಾಗ ಶಿವಲಿಂಗ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂತು. ಆದರೆ, ಬುಧವಾರ ಬೆಳಿಗ್ಗೆ ಮತ್ತೆ ಗರ್ಭಗುಡಿಯಲ್ಲಿ ಶಿವಲಿಂಗ ಪತ್ತೆಯಾ ಯಿತು. ದುಷ್ಕರ್ಮಿಗಳು ಅಲ್ಲಿಗೇ ಲಿಂಗವನ್ನು ತಂದಿಟ್ಟು ಹೋಗಿದ್ದರು.

ADVERTISEMENT

ನಿಧಿಗಾಗಿ ಹುಡುಕಾಟ ನಡೆಸಿರುವ ದುಷ್ಕರ್ಮಿಗಳು ಲಿಂಗ ಕಿತ್ತಿದ್ದಾರೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಗ್ರಾಮದ ಮುಖಂಡ ರಾಜಶೆಟ್ಟಿ ಮಾತನಾಡಿ, ‘ನಮ್ಮ ಪೂರ್ವಿಕರು ಕಾಶಿ ವಿಶ್ವನಾಥ ದೇವಸ್ಥಾನದಿಂದ ಅಲ್ಲಿನ ಮಾದರಿಯ ಶಿವಲಿಂಗ ತಂದು ಪ್ರತಿಷ್ಠಾಪಿಸಿದ್ದರು. ಅಂದಿನಿಂದಲೂ ಸಂಪ್ರದಾಯದಂತೆ ವಿಶೇಷ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗಿತ್ತು. ಇದೀಗ ದೇವಸ್ಥಾನದ ಅಭಿವೃದ್ಧಿಯನ್ನು ಹಂತಹಂತವಾಗಿ ನಡೆಸಲಾಗುತ್ತಿತ್ತು. ಘಟನೆ ಸಂಬಂಧ ಪುರೋಹಿತರನ್ನು ಸಂಪರ್ಕಿಸಿ ನೂತನ ಲಿಂಗ ಪ್ರತಿಷ್ಠಾಪಿಸಬೇಕೇ, ಅಥವಾ ಲಿಂಗಶುದ್ಧಿ ನಡೆಸಬೇಕೇ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.