ADVERTISEMENT

ಅಕ್ರಮ ಗಣಿಗಾರಿಕೆಗೆ 13 ಅಧಿಕಾರಿಗಳ ಕುಮ್ಮಕ್ಕು: ಕೆ.ಆರ್‌.ರವೀಂದ್ರ

ಲೋಕಾಯುಕ್ತ ಡಿವೈಎಸ್ಪಿ ವರದಿಯಲ್ಲಿ ಬಹಿರಂಗ: ರವೀಂದ್ರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:48 IST
Last Updated 11 ಜುಲೈ 2024, 15:48 IST
ಕೆ.ಆರ್‌.ರವೀಂದ್ರ
ಕೆ.ಆರ್‌.ರವೀಂದ್ರ   

ಮಂಡ್ಯ: ‘ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಲು ಅಧಿಕಾರ ದುರುಪಯೋಗ ಪಡಿಸಿಕೊಂಡ ಹಿಂದಿನ ಜಿಲ್ಲಾಧಿಕಾರಿ (ಪ್ರಸ್ತುತ ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ) ಎಸ್‌.ಜಿಯಾವುಲ್ಲಾ ಸೇರಿದಂತೆ ಒಟ್ಟು 13 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಡಿವೈಎಸ್ಪಿ ಅವರು ಲೋಕಾಯುಕ್ತ ಎಸ್ಪಿ ಅವರಿಗೆ ಸಲ್ಲಿಸಿರುವ ವರದಿಯಿಂದ ಬಹಿರಂಗಗೊಂಡಿದೆ’ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಹೇಳಿದರು.

‘ಎಸ್.ಜಿಯಾವುಲ್ಲಾ, ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಬಿ.ಆರ್.ಪೂರ್ಣಿಮಾ, ಪಾಂಡವಪುರ ಉಪವಿಭಾಗಾಧಿಕಾರಿಯಾಗಿದ್ದ ಬಿ.ಸಿ.ಶಿವಾನಂದಮೂರ್ತಿ, ಪಾಂಡವಪುರ ನಿವೃತ್ತ ತಹಶೀಲ್ದಾರ್ ಹನುಮಂತರಾಯಪ್ಪ, ಬೇಬಿ ವೃತ್ತದ ಕಂದಾಯ ನಿರೀಕ್ಷಕರಾಗಿದ್ದ ಬಿ.ಆರ್.ಗಣೇಶ್, ಬೇಬಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಎಂ.ಆರ್.ಕುಮಾರ, ತಾಲ್ಲೂಕು ಮೋಜಿಣಿದಾರರಾಗಿದ್ದ ದಿ.ರವಿಕುಮಾರ್, ಹಿರಿಯ ಭೂವಿಜ್ಞಾನಿಗಳಾದ ಕೆ.ಎಂ.ನಾಗಭೂಷಣ್, ನಾಗೇಶ್, ಹೊನಗಾನಹಳ್ಳಿ ಗ್ರಾ.ಪಂ ಅಧ್ಯಕ್ಷೆಯಾಗಿದ್ದ ಪ್ರಭಾಮಣಿ, ಹೊನಗಾನಹಳ್ಳಿ ಗ್ರಾ.ಪಂ ಪಿಡಿಒ ಆಗಿ ನಿವೃತ್ತರಾಗಿರುವ ಎಂ.ಪಿ.ರಾಜು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ಸೈಯದ್ ಜಾಫರ್ ಸೇರಿ ಒಟ್ಟು 13 ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. 

ಕ್ರಷರ್‌ ನಡೆಸಲು ಸಿ–ಫಾರ್ಮ್‌ : ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅನುಮತಿ ನೀಡಬಾರದೆಂಬ ನಿಯಮ ಉಲ್ಲಂಘಿಸಿ ಕ್ರಷರ್ ನಡೆಸಲು ಸಿ-ಫಾರ್ಮ್‌ ನೀಡಲಾಗಿದೆ. 2017ರಲ್ಲಿ ಬೇಬಿ ಬೆಟ್ಟದಲ್ಲಿ 120 ಕ್ರಷರ್‌ಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಕ್ರಮ ವಹಿಸದೆ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.